Advertisement

ಮೂರು ವರ್ಷ ಕಳೆದರೂ ದುರಸ್ತಿ ಮಾಡದ ಗ್ರಾಮಕರಣಿಕರ ಕಚೇರಿ

12:04 AM Jan 24, 2020 | Sriram |

ಸಿದ್ದಾಪುರ: ಹೆಂಗವಳ್ಳಿ ಗ್ರಾ. ಪಂ. ವ್ಯಾಪ್ತಿಯ ತೊಂಭತ್ತು ಶಾಲಿಗುಡ್ಡೆ ಬಳಿ ಕಾರ್ಯಚರಿಸುತ್ತಿರುವ ಗ್ರಾಮ ಕರಣಿಕರ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಬಿದ್ದು ಹೋಗುವ ಹಂತದಲ್ಲಿದೆ. ಕಟ್ಟಡದ ಒಂದು ಭಾಗವು ಬಿದ್ದು ಮೂರು ವರ್ಷ ಕಳೆದರೂ ಇಂದಿಗೂ ಸರಿಪಡಿಸುವ ವ್ಯವಸ್ಥೆ ಇಲಾಖೆಯಂದ ಆಗಿಲ್ಲ.

Advertisement

ಕಂದಾಯ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಗ್ರಾಮ ಕರಣಿಕರ ಕಚೇರಿ ಹಾಗೂ ವಸತಿ ಗೃಹ ಇದೆ. ಈ ಕಟ್ಟಡವು ಕಳೆದ 5 ವರ್ಷಗಳ ಹಿಂದೆಯೇ ಶಿಥಲಗೊಂಡು ದುರಸ್ತಿಯಾಗದೇ ಬೀಳುವ ಹಂತಕ್ಕೆ ತಲುಪಿತ್ತು. ಆ ಸಂದರ್ಭದಲ್ಲಿ ವಸತಿ ಗೃಹದ ಭಾಗ ಮಾತ್ರ ರೀಪೇರಿ ಮಾಡಲಾಗಿತ್ತು. ಆದರೆ ಕಚೇರಿಯ ಭಾಗ ಮಾತ್ರ ಹಾಗೇಯೇ ಉಳಿಸಲಾಗಿತ್ತು.

ರೀಪೇರಿಯಾಗದೆ ಉಳಿದ ಕಚೇರಿ ಭಾಗವು ಮೂರು ವರ್ಷದ ಹಿಂದೆ ಬಿದ್ದು ಹೋಗಿದೆ. ಆವಾಗ ಕಚೇರಿಯನ್ನು ವಸತಿ ಗೃಹಕ್ಕೆ ಸ್ಥಳಾಂತಗೊಂಡಿತ್ತು. ಪ್ರಸ್ತುತ ಈ ಕಚೇರಿಯು ವಸತಿ ಗೃಹದಲ್ಲಿಯೇ ಇದೆ. ಈಗೀರುವ ಕಚೇರಿ ಕೂಡ ಬಿಳುವ ಹಂತಕ್ಕೆ ತಲುಪಿದೆ. ಕಚೇರಿಯ ಒಳಭಾಗದಲ್ಲಿ ಕುಳಿತು ಕೊಳ್ಳಲು ಹಾಗೂ ಫೈಲ್‌ಗ‌ಳನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಇಲ್ಲ.

ಕಟ್ಟಡದ ಒಂದು ಭಾಗವು ಶಿಥಿಲಗೊಂಡು ಮೇಲ್ಮಾಡು ಮುರಿದು ಬಿದ್ದಿದೆ. ಕಟ್ಟಡದ ಒಳ ಭಾಗದಲ್ಲೇ ಮುರಿದು ಬಿದ್ದ ಪಕ್ಕಾಸಿ, ಹೆಂಚಿನ ರಾಶಿಗಳು ಇನ್ನೂ ಕೂಡ ಹಾಗೇಯೇ ಇದೆ. ಕಿಟಕಿ, ಬಾಗಿಲುಗಳು ಮುರಿದು ಹೋಗಿದ್ದು ಪ್ರಾಣಿಗಳ ವಾಸಸ್ಥಳವಾಗಿದೆ. ಕಚೇರಿಯಲ್ಲಿ ಸಂಗ್ರಹಿಸಿದ ಫೈಲ್‌ಗ‌ಳು ಸುರಕ್ಷಿತವಾಗಿಲ್ಲ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಯವರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಕರಣಿಕರ ವಸತಿಗೆ ಹೊಂದಿಕೊಂಡ ಇನ್ನೊಂದು ಭಾಗದಲ್ಲಿ ಗ್ರಾಮಕರಣಿಕರ ಕಚೇರಿ ಇದ್ದರೂ, ವಸತಿ ಗೃಹ ದುರಸ್ತಿಗೊಳಿಸುವಾಗ ಈ ಕಟ್ಟಡವನ್ನು ದುರಸ್ತಿಗೊಳಿಸಿದ್ದರೆ ಈ ಕಟ್ಟಡವು ಮುರಿದು ಬೀಳುತ್ತಿರಲಿಲ್ಲ. ವಸತಿ ಗೃಹ ಸ್ವಲ್ಪಮಟ್ಟದಲ್ಲಿ ದುರಸ್ತಿಗೊಳಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಮಳೆ ನೀರು ಕಟ್ಟಡದ ಒಳಭಾಗದಲ್ಲಿ ಶೇಖರಣೆಯಾಗುತ್ತಿತ್ತು. ಪಕ್ಕದ ಕಚೇರಿಯ ಗೋಡೆಗಳು ತೇವಾಂಶದಿಂದ ಕೂಡಿರುತ್ತಿದ್ದವು. ಮಳೆ ನೀರು ನಿಂತ ಪರಿಣಾಮ ಈಗ ಹಳೆಯ ಗೋಡೆ ಕುಸಿದು ಬೀಳುವ ಹಂತವನ್ನು ತಲುಪಿದೆ.

Advertisement

ಈ ಭಾರಿಯಾದರೂ ಇಲಾಖೆ ಹಳೆ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡ ಕಟ್ಟುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ಬರುವ ಮಳೆಗಾಲದಲ್ಲಿ ಅಳಿದೂಳಿದ ಕಟ್ಟಡದ ಒಂದು ಭಾಗದಲ್ಲಿ ಕಾರ್ಯಚರಿಸುತ್ತಿರುವ ಕಚೇರಿಯು ನೆಲಸಮವಾಗಲಿದೆ. ಇದರಿಂದ ಕಚೇರಿಯ ಒಳಗೆ ಇರುವ ದಾಖಲೆ ಪತ್ರಗಳು, ಪೀಠೊಪಕರಣಗಳು ಹಾನಿಯಾಗುವ ಸಂಭವಿಸಲಿದೆ.ಆದ್ದರಿಂದ ಇಲ್ಲಿನ ಕಟ್ಟಡವನ್ನು ಶೀಘ್ರವಾಗಿ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ಇಲಾಖೆಯಿಂದ
ಅನುದಾನ ಬಂದಿಲ್ಲ
ಕಟ್ಟಡವು ಹಲವು ವರ್ಷಗಳಿಂದ ಶಿಥಲಾವಸ್ಥೆಯಲ್ಲಿದೆ. ಇಲಾಖೆಯಿಂದ ಸ್ವಲ್ಪ ರೀಪೇರಿ ಮಾಡುವ ಕೆಲಸವಾಗಿದೆ. ಕಳೆದ ಮೂರು ವರ್ಷದ ಹಿಂದೆ ಕಟ್ಟಡದ ಒಂದು ಭಾಗ ಬಿದ್ದು ಹೋಗಿದೆ. ಹಿಂದಿನ ಗ್ರಾಮ ಕರಣಿಕರು ಇದರ ಬಗ್ಗೆ ತಹಶಿಲ್ದಾರರಿಗೆ ಲೇಟರ್‌ ಮಾಡಿದ್ದಾರೆ. ಇದರ ಬಗ್ಗೆ ತಶಿಲ್ದಾರರು ಜಿಲ್ಲಾಧಿಕಾರಿಗಳಿಗೆ ಪಾರ್ವಡ್‌ ಮಾಡಿದ್ದಾರೆ. ಇಲಾಖೆಯಿಂದ ಹಣ ಬಂದಿಲ್ಲ.
– ವಿಶ್ವನಾಥ ಕುಲಾಲ ಗ್ರಾಮ ಕರಣಿಗ

ನೂತನ ಕಟ್ಟಡದ ಅವಶ್ಯಕತೆ ಇದೆ
ಹೆಂಗವಳ್ಳಿ ಗ್ರಾಮ ಕರಣಿಕರ ಕಚೇರಿ ಹಾಗೂ ವಸತಿ ಗೃಹವು ಕಂದಾಯ ಇಲಾಖೆಗೆ ಸಂಬಂಧ‌ ಪಟ್ಟ ಕಟ್ಟಡವಾಗಿದೆ. ಕಂದಾಯ ಇಲಾಖೆಯವರೂ ಕಟ್ಟಡದ ಒಂದು ಭಾಗವನ್ನು ಮಾತ್ರ ದುರಸ್ಥಿಗೊಳಿಸಿದ್ದು ಇನ್ನೊಂದು ಭಾಗವನ್ನು ಹಾಗೇ ಬಿಟ್ಟಿದ ಪರಿಣಾಮ ಇಡೀ ಕಟ್ಟಡ ಕುಸಿದು ಬಿಳುವ ಹಂತಕ್ಕೆ ಹೋಗಿದೆ. ಇರುವ ಕಚೇರಿ ಕುಸಿದು ಬಿದ್ದಲ್ಲಿ ಗ್ರಾಮಸ್ತರಿಗೆ ತೊಂದರೆಯಾಗಲಿದೆ. ಇಲ್ಲಿಗೆ ಒಂದು ನೂತನ ಕಚೇರಿ ಹಾಗೂ ವಸತಿ ಗೃಹ ಕಟ್ಟಡದ ಅವಶ್ಯಕತೆ ಇದೆ.
– ವಸುಂಧರ ಹೆಗ್ಡೆ ತೊಂಭತ್ತು, ಸದಸ್ಯರು ಗ್ರಾ. ಪಂ. ಹೆಂಗವಳ್ಳಿ

ತಹಶಿಲ್ದಾರರಿಗೆ ಮನವಿ
ಶಿಥಿಲಗೊಂಡ ಕಟ್ಟಡದ ಬಗ್ಗೆ ಹಲವು ಬಾರಿ ಎ. ಸಿ ಹಾಗೂ ತಹಶಿಲ್ದಾರ್‌ಗೆ ಮನವಿ ನೀಡಿದ್ದೇವೆ. ಸ್ವಲ್ಪ ಹಣವನ್ನು ಬಿಡುಗಡೆ ಮಾಡಿದ್ದು ಒಂದು ಭಾಗ ಮಾತ್ರ ತುರ್ತು ದುರಸ್ತಿ ಮಾಡಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಕಟ್ಟಡ ಕುಸಿದು ಬಿದ್ದಿದರಿಂದ ಇಲ್ಲಿನ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯವರೂ ನೂತನ ಕಟ್ಟಡವನ್ನು ನಿರ್ಮಿಸಬೇಕು. -ರಘುರಾಮ ಶೆಟ್ಟಿ ತೊಂಭತ್ತುಮಾಜಿ ಅಧ್ಯಕ್ಷರು ಗ್ರಾ. ಪಂ. ಹೆಂಗವಳ್ಳಿ

-  ಸತೀಶ್‌ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next