ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯ ಹೊಸ ಕಟ್ಟಡ ಶೀಘ್ರದಲ್ಲೆ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಜ್ಞಾನಭಾರತಿ ಆವರಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ ಸ್ಥಾಪನೆಗಾಗಿ ಒಂದು ಎಕರೆ ಜಮೀನು ನೀಡಿದ್ದು, ಆ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಈಗಾಗಲೇ ಒಪ್ಪಿಗೆ ಸೂಚಿಸಿದೆ.
ಇತ್ತೀಚಿಗಷ್ಟೇ ಅಸ್ಸಾಂನ ರಾಜಧಾನಿ ಗೌಹಾಟಿಯಲ್ಲಿ ನಡೆದ ಅಕಾಡೆಮಿ ಕಾರ್ಯಕಾರಿಣಿಯಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಸ್ಥಾಪನೆ ಕುರಿತು ಚರ್ಚೆ ಕೂಡ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಮ್ಮತದ ಒಪ್ಪಿಗೆ ದೊರೆತಿದೆ.
20 ಕೋಟಿ ರೂ. ಬಿಡುಗಡೆ ಸಮ್ಮತಿ: ಬೆಂಗಳೂರಿನಲ್ಲಿ ಹೊಸ ಕಟ್ಟಡ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಸುಮಾರು 20 ಕೋಟಿ ರೂ. ಬಿಡುಗಡೆಗೆ ಸಮ್ಮತಿ ನೀಡಿದೆ. ಆದರೆ ಈ ಅನುದಾನವನ್ನು ಕೇಂದ್ರ ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಬೇಕಾಗಿದೆ. ಅನುದಾನ ಬಿಡುಗಡೆ ಆದ ತಕ್ಷಣ ಕೇಂದ್ರ ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಕಾಡೆಮಿ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಕಟ್ಟದಲ್ಲಿ ಏನೆಲ್ಲಾ ಇರಲಿವೆ?: ಸಾಹಿತ್ಯ ಅಕಾಡೆಮಿಯ ನೂತನ ಕಟ್ಟಡದಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಾಣವಾಗಲಿದೆ. ಗ್ರಂಥಾಲಯದಲ್ಲಿ ಎಲ್ಲಾ ಭಾಷೆಯ ಪುಸ್ತಕಗಳು, ದಿನ ಪತ್ರಿಕೆಗಳು ದೊರೆಯಲಿವೆ. ಜತೆಗೆ ಹೈಟೆಕ್ ಆಡಿಟೋರಿಯಂ ಕೂಡ ವಿನ್ಯಾಸಗೊಳ್ಳಲಿದೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಹಾಗೂ ದೂರ ದೂರುಗಳಿಂದ ಬರುವ ಅತಿಥಿಗಳು ಉಳಿದುಕೊಳ್ಳಲು ಸಲುವಾಗಿ ವಿಶೇಷ ರೀತಿಯ ಅತಿಥಿ ಗೃಹಗಳನ್ನು ಕೂಡ ನಿರ್ಮಾಣ ಮಾಡಲಾಗುವುದು. ಇವುಗಳ ಜತೆಗೆ ಕ್ಯಾಂಟೀನ್ ಸೌಲಭ್ಯ ಕೂಡ ಇರಲಿದೆ.
ಈ ಹಿಂದೆ ಕಚೇರಿ ಎಲ್ಲಿತ್ತು?: ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತ ಪ್ರಾದೇಶಿಕ ಕಚೇರಿ ಮದ್ರಾಸ್‌ನಲ್ಲಿತ್ತು. ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಹಲವರ ವಿರೋಧದ ನಡುವೆಯೂ ಈ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರ ಗೊಳಿಸಿದ್ದರು. ನಂತರ ಸೆಂಟ್ರಲ್ ಕಾಲೇಜು ಆವರಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತೀಯ ಪ್ರಾದೇಶಿಕ ಕಚೇರಿ ತೆರೆಯಲಾಗಿತ್ತು.
ಯು.ಆರ್.ಅನಂತಮೂರ್ತಿ ನಂತರ ಇದೀಗ ನಾಟಕಕಾರ ಚಂದ್ರಶೇಖರ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದು, ಇವರ ಅವಧಿಯಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಪೂರ್ತಿಗೊಳ್ಳುವ ವಿಶ್ವಾಸವನ್ನು ಅಕಾಡೆಮಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಭಾರತೀಯ ಪ್ರಾದೇಶಿಕ ಕಚೇರಿಯ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ. ಈ ಸಂಬಂಧ ಇತ್ತೀಚೆಗೆ ಗೌಹಾಟಿಯಲ್ಲಿ ನಡೆದ ಅಕಾಡೆಮಿ ಕಾರ್ಯಕಾರಿಣಿಯಲ್ಲಿ ಒಪ್ಪಿಗೆ ದೊರೆತಿದೆ.
-ಕವಿ, ಸಿದ್ದಲಿಂಗಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸಂಚಾಲಕ
* ದೇವೇಶ ಸೂರಗುಪ್ಪ