ಮಂಗಳೂರು: ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಿಸುವುದಕ್ಕೆ ಸಮಿತಿ ರಚಿಸಲಾಗಿದ್ದು ದ.ಕ. ಜಿ.ಪಂ. ಕಚೇರಿಯಲ್ಲಿ ಕಚೇರಿ ತೆರೆಯಲಾಗುವುದು ಎಂದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿ ರುವ ಐವನ್ ಡಿ’ಸೋಜಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲವೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದ ರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅರ್ಹರಿದ್ದೂ ಗ್ಯಾರಂಟಿ ಯೋಜನೆ ಸಿಗ ದಿದ್ದರೆ ಅಂತವರನ್ನು ಹುಡುಕಿ ಕೊಡಿಸಲಾಗುವುದು. ಗ್ಯಾರಂಟಿ ಯೋಜನೆ ಕಾಂಗ್ರೆಸ್ ಜನರಿಗೆ ನೀಡಿದ ವಾಗ್ಧಾನ, ಅದು ಪಕ್ಷದ ಬದ್ಧತೆ. ಆದರೆ ಬಿಜೆಪಿ ಯವರು ಹೊಟ್ಟೆ ಕಿಚ್ಚಿನಿಂದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಮೋದಿಗೆ ನೈತಿಕತೆ ಇಲ್ಲ: ನರೇಂದ್ರ ಮೋದಿಯವರ ಚಿಂತನೆಗಳನ್ನು ಜನತೆ ತಿರಸ್ಕರಿಸಿದ್ದಾರೆ. ಅವರಿಂದ ಸಂವಿಧಾನದ ರಕ್ಷಣೆ ಸಾಧ್ಯವಿಲ್ಲವವೆಂದು ಜನರಿಗೆ ಮನವರಿಕೆಯಾಗಿದೆ. ಜನತೆ ಯಾವುದೇ ಪಕ್ಷಕ್ಕೂ ಬಹುಮತ ನೀಡಿಲ್ಲ. 13 ರಾಜ್ಯಗಳಲ್ಲಿ ಬಿಜೆಪಿ ಖಾತೆಯನ್ನೇ ತೆರೆಯಲಿಲ್ಲ. ಕಾಂಗ್ರೆಸ್ ಜನರ ಮನಸ್ಸು ಗೆದ್ದಿದೆ. ಅಧಿಕಾರ ಮಾಡುವ ಹಂತಕ್ಕೆ ಬಂದಿದೆ. ನರೇಂದ್ರ ಮೋದಿಯವರಿಗೆ ಅಧಿಕಾರ ನಡೆಸಲು ನೈತಿಕತೆ ಇಲ್ಲ ಎಂದು ಐವನ್ ಡಿ’ಸೋಜಾ ಹೇಳಿದರು.
ಮೈತ್ರಿ ಪಕ್ಷಗಳ ಮೇಲೆ ಈಗ ಕರುಣೆ: ಐಎನ್‌ಡಿಐಎ ಒಕ್ಕೂಟ ರಚನೆ ಯಾಗುವವರೆಗೆ ನರೇಂದ್ರ ಮೋದಿ ಎನ್‌ಡಿಐ ಮೈತ್ರಿ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಐನ್‌ಡಿಐಎ ರಚನೆಯಾದ ಅನಂತರ ಮೈತ್ರಿ ಪಕ್ಷಗಳ ಮೇಲೆ ಅವರಿಗೆ ಕರುಣೆ ಮೂಡಿದೆ ಎಂದು ಐವನ್ ಟೀಕಿಸಿದರು.
ಮತಗಳಿಕೆ ಉತ್ತಮ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿಸಿದಷ್ಟು ಸ್ಥಾನಗಳು ಲಭಿಸಿಲ್ಲ. ಆದರೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳು ಲಭಿಸಿವೆ. ಮತಗಳಿಕೆಯ ಪ್ರಮಾಣ ಉತ್ತಮವಾಗಿದೆ. ಜೆಡಿಎಸ್‌ನೊಂದಿಗಿನ ಮೈತ್ರಿಯಿಂದ ಬಿಜೆಪಿಗೆ ಲಾಭವಾಗಿದೆ. ಜನ ಕಾಂಗ್ರೆಸ್‌ಗೆ ಯಾವ ಕಾರಣಕ್ಕೆ ಮತ ಹಾಕಿಲ್ಲ ಎಂಬುದನ್ನು ಪರಾಮರ್ಶಿಸುತ್ತೇವೆ ಎಂದರು.
ಕೆಲಸಕ್ಕಾಗಿ ಸ್ಥಾನ: ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆ ಯಲ್ಲಿ ಯೂ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಹಾಗಾಗಿ ಪಕ್ಷ ಮತ್ತೂಮ್ಮೆ ವಿಧಾನಪರಿಷತ್‌ಗೆ ಆಯ್ಕೆ ಮಾಡಿದೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಅಶ್ರಫ್, ಮನುರಾಜ್, ಶುಭೋದಯ ಆಳ್ವ, ಕೋಡಿಜಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಟಿ.ಎಂ. ಶಾಹಿದ್ ಇದ್ದರು.