Advertisement

ಆಫೀಸು ಮಕ್ಕಳು ಆರೋಗ್ಯ

09:56 AM Mar 12, 2020 | mahesh |

ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಳ್ಳುವುದು ಹೆಣ್ಮಕ್ಕಳ ಪಾಲಿಗೆ ಬಹಳ ಮುಖ್ಯ. ಸಂಸಾರದ ಜವಾಬ್ದಾರಿಯ ಜೊತೆಗೆ ಅವಳು ನಿರ್ವಹಿಸುತ್ತಿರುವ ಉನ್ನತ ಹುದ್ದೆಯನ್ನು ಸಂಭಾಳಿಸಲು ಕೆಲವೊಮ್ಮೆ ಆಕೆಗೆ ಕಷ್ಟವಾಗಬಹುದು. ಇಂಥ ಸಮಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಬಹಳ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳುವುದು ಜಾಣತನ.

Advertisement

ಮನೆಯ ಇತರ ಕೆಲಸಗಳಿಗಿಂತ ಮಕ್ಕಳ ಆರೋಗ್ಯದ ವಿಚಾರದಲ್ಲಿ ತಾಯಂದಿರಿಗೆ ಬಹಳ ಚಿಂತೆಯಾಗುತ್ತದೆ. ಉದ್ಯೋಗಸ್ಥ ಅಮ್ಮಂದಿರು, ಮಕ್ಕಳನ್ನು ಶಾಲೆಗೆ ಕಳುಹಿಸಿ ನಂತರ ಆಫೀಸಿಗೆ ಹೋಗಿರುತ್ತಾರೆ. ಆದರೆ, “ನಿಮ್ಮ ಮಗುವಿಗೆ ಹುಷಾರಿಲ್ಲ. ಮನೆಗೆ ಕರೆದುಕೊಂಡು ಹೋಗಿ’ ಅಂತ ಶಾಲೆಯಿಂದ ಕರೆ ಬರುತ್ತದೆ. ಆಗ ಕೆಲಸ ನಿಲ್ಲಿಸಿ ಶಾಲೆಗೆ ಓಡಬೇಕು. ಇನ್ನೂ ಕೆಲವೊಮ್ಮೆ, ಮಕ್ಕಳಿಗೆ ಮಧ್ಯರಾತ್ರಿಯಲ್ಲಿ ಆರೋಗ್ಯ ಸಮಸ್ಯೆ ಕಾಡಿದಾಗ, ನಿದ್ದೆಯೂ ಇಲ್ಲದೆ, ಮರುದಿನ ಆಫೀಸ್‌ಗೆ ರಜೆ ಹಾಕಿ ಮಕ್ಕಳನ್ನು ನೋಡಿಕೊಳ್ಳಬೇಕಾಗುತ್ತದೆ.

“ವರ್ಕಿಂಗ್‌ ಮದರ್’ ಇಂಥ ಎಷ್ಟೋ ಸನ್ನಿವೇಶಗಳನ್ನು ಎದುರಿಸಿರುತ್ತಾರೆ. ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಂದು, ಎಲ್ಲಾ ಸಮಯದಲ್ಲೂ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಏನು ಮಾಡಲೂ ತಿಳಿಯದೆ ಕೈಚೆಲ್ಲಿ ಕುಳಿತುಕೊಳ್ಳುವ ಸನ್ನಿವೇಶ ಎದುರಾಗಬಹುದು. ಅಂಥ ಸಮಯದಲ್ಲಿ ಧೃತಿಗೆಡದೆ ಶಾಂತಚಿತ್ತರಾಗಿ ಯೋಚಿಸಿದಾಗ ಕೆಲವು ಪರಿಹಾರಗಳು ಕಾಣಿಸುತ್ತದೆ.

-ಕೆಲಸದ ಸಮಯದಲ್ಲಿ ಮಕ್ಕಳ ಆರೋಗ್ಯದ ವಿಚಾರ ಬಂದಾಗ ಯಾವುದು ತುಂಬಾ ಮುಖ್ಯ, ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ನಿಮ್ಮ ಮೊದಲ ಆದ್ಯತೆ ನಿಮ್ಮ ಮಕ್ಕಳೇ ಆಗಿರುತ್ತಾರೆ. ಹಾಗಿದ್ದಲ್ಲಿ, ಆರೋಗ್ಯದ ಸಮಸ್ಯೆಯಿಂದ ಅವರು ಹಿಂಸೆ ಪಡದಂತೆ ಎಚ್ಚರ ವಹಿಸಿ. ಎಲ್ಲ ಔಷದಕ್ಕಿಂತ ಹೆಚ್ಚಿನ ಶಕ್ತಿ ಇರುವುದು ತಾಯಿಯ ಆರೈಕೆಯಲ್ಲಿ. ಅಗತ್ಯವಿದ್ದಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಏನನ್ನು ತಿನ್ನಲು ಬಯಸುತ್ತಾರೆ ಅಷ್ಟನ್ನು ಮಾತ್ರ ತಿನ್ನಿಸಿ. ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳುವ ತನಕ ಅರಾಮಾಗಿ ನಿಮ್ಮೊಂದಿಗೆ ಕಾಲ ಕಳೆಯಲು ಸಹಕರಿಸಿ.

-ಮಕ್ಕಳ ದೇಹಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ ಎಂದಾಗ ನಿಮ್ಮ ಕೆಲಸದ ಒತ್ತಡದ ಬಗ್ಗೆ ಅವರಿಗೆ ಅರ್ಥವಾಗುವಷ್ಟು ತಿಳಿಸಿ ಹೇಳಿ. ನಂತರ ನಿಮ್ಮ ಕೆಲಸ ಮಾಡಿಕೊಳ್ಳುತ್ತಲೇ ಅವರೊಂದಿಗೆ ಕಾಲ ಕಳೆಯಿರಿ.

Advertisement

-ಇಂಥ ಸಮಯದಲ್ಲಿ ತಾಯಂದಿರು ಒತ್ತಡಕ್ಕೆ ಒಳಗಾಗದಂತೆ ಜಾಗರೂಕರಾಗಿರಬೇಕು. ಆಫೀಸ್‌ಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಹಾಗೂ ಅಲ್ಲಿ ನಿಮ್ಮ ಅವಶ್ಯಕತೆ ತೀರಾ ಇದ್ದಲ್ಲಿ ನಿಮ್ಮ ಬಾಸ್‌ಗೆ ಇ-ಮೇಲ್‌ ಮೂಲಕ ಗೈರನ್ನು ಸಂಕ್ಷಿಪ್ತವಾಗಿ ವಿವರಿಸಿ. ಎರಡು ದೋಣಿಯಲ್ಲಿ ಕಾಲಿಟ್ಟ ಮೇಲೆ ಬ್ಯಾಲೆನ್ಸ್‌ ಮಾಡುವುದನ್ನು ಕಲಿಯಲೇಬೇಕು. ಹಾಗಾಗಿ, ಸಂಸಾರ, ಉದ್ಯೋಗ ಎರಡಕ್ಕೂ ನ್ಯಾಯ ಒದಗಿಸಿ.

-ಯಾವುದಾದರೂ ತುಂಬಾ ಮುಖ್ಯವಾದ ಮೀಟಿಂಗ್‌ ಅಥವಾ ಪ್ರಾಜೆಕ್ಟ್ ಡಿಸ್‌ಕಷನ್‌ ಇದ್ದಲ್ಲಿ ಆಫೀಸ್‌ ಸಮಯ ಆರಂಭವಾಗುವ ಮುಂಚಿತವಾಗಿಯೇ ನಿಮ್ಮ ಸೀನಿಯರ್‌ಗೆ ಫೋನ್‌ ಮಾಡಿ, ವಿಷಯದ ಅನಿವಾರ್ಯವನ್ನು ತಿಳಿಸಿ. ನೀವಿಲ್ಲದೆ ಮೀಟಿಂಗ್‌ ನಡೆಸಲು ಸಾಧ್ಯವೇ ಇಲ್ಲ ಎಂದಾದಲ್ಲಿ ಅದನ್ನು ಮುಂದೂಡಲು ಸಾಧ್ಯವೇ ಎಂದು ಕೇಳಿ, ಅದೂ ಆಗದಿದ್ದಲ್ಲಿ ಕಾನ್‌ಫ‌ರೆನ್ಸ್‌ ಕಾಲ್‌ ಅಥವಾ ವೀಡಿಯೊ ಕಾಲ್‌ ಮೂಲಕ ನಿಮ್ಮ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಳ್ಳಿ.

ಭಾರ್ಗವಿ.ಕೆ.ಆರ್‌ ಕಾಣಿಚ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next