ಕಲಬುರಗಿ: ಪಾಲಕರೇ ಒಂದೆರಡು ಬಾಲ್ಯ ವಿವಾಹ ಮಾಡಿರುವುದು ಒಂದೆಡೆಯಾದರೆ ಮೂರ್‍ನಾಲ್ಕು ಹೆಣ್ಣು ಮಕ್ಕಳು ಇದ್ದ ಸಮಯದಲ್ಲಿ ಅಕ್ಕನ ಜತೆಗೆ ತಂಗಿ ಮದುವೆಯೂ ಸಹ ಆಗಲೆಂದು ಆಧಾರ ಕಾರ್ಡ್‌ದಲ್ಲಿ ವಯಸ್ಸು ಹೆಚ್ಚಿಗೆ ಮಾಡಿ ಮದುವೆ ಮಾಡಿಸಿರುವ ಪ್ರಕರಣಗಳು ವರದಿಯಾಗಿವೆ.
ಲಾಕ್‌ಡೌನ್ ಮುಗಿಯುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು ಮದುವೆಯಾಗುವ ವಯಸ್ಸಿಗೆ ಇನ್ನಷ್ಟು ತಿಂಗಳು ಕಡಿಮೆ ಇದ್ದರೂ ಜತೆಗೆ ಮನೆಯವರು ವಿರೋಧ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಓಡಿ ಹೋಗಿರುವ ಪ್ರಕರಣಗಳು ಸಹ ನಡೆದಿವೆ. ಆದರೆ ಒಂದೆರಡು ಪ್ರಕರಣಗಳು ಬಿಟ್ಟರೆ ಬಹುತೇಕ ಪ್ರಕರಣಗಳು ಠಾಣೆಗಳಲ್ಲಿ ಹಾಗೂ ಇಲಾಖೆಯಲ್ಲಿ ದಾಖಲೆಯೇ ಆಗಿಲ್ಲ.
ಹೆಣ್ಣು ಶಿಶು ಮಾರಾಟದಿಂದ ಕುಖ್ಯಾತಿ ಪಡೆದಿದ್ದ ಕಲಬುರಗಿ ಜಿಲ್ಲೆಯಲ್ಲಿ ತೆರೆಮರೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬುದನ್ನು ಅಧಿಕಾರಿಗಳು ಕಳೆದ ಆರು ತಿಂಗಳಲ್ಲೇ 74 ಬಾಲ್ಯ ವಿವಾಹಗಳೇ ಸಾಕ್ಷಿಕರಿಸುತ್ತವೆ. ಪ್ರಮುಖವಾಗಿ ಅಂತರ್ಜಾತಿ ವಿವಾಹ ತಡೆಯಲು, ಆರ್ಥಿಕ ಹೊರೆ ತಪ್ಪಿಸಲು, ಬಾಲಕಿಗೆ ತಂದೆ ಇಲ್ಲವೇ ತಾಯಿ ಇರದೇ ಇರುವ, ಮೊಬೈಲ್ ಗೀಳು ಹಾಗೂ ಪ್ರೇಮ ಪ್ರಕರಣಗಳೇ ಬಾಲ್ಯ ವಿವಾಹವಾಗಲು ಪ್ರಮುಖ ಕಾರಣಗಳು ಎನ್ನಲಾಗುತ್ತಿದೆ.
ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಬಾಲ್ಯ ವಿವಾಹ ನಡೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಬಾಲ್ಯ ವಿವಾಹವಾಗುತ್ತಿದ್ದರೆ ಸುತ್ತಮುತ್ತಲಿನವರು ಇಲ್ಲವೇ ಒತ್ತಾಯದಿಂದ ಮದುವೆಗೆ ಒಳಗಾಗುತ್ತಿರುವವರೇ 109ಗೆ ದೂರು ಸಲ್ಲಿಸುತ್ತಿರುವುದರಿಂದ ಬಾಲ್ಯ ವಿವಾಹಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಜಿ.ಎಸ್. ಗುಣಾರಿ ತಿಳಿಸುತ್ತಾರೆ.
ಬಾಲ್ಯ ವಿವಾಹ ಆಗಿಲ್ಲ…ಆಗಿವೆ..? : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹವಾಗಿಲ್ಲ. ದೂರು ಬಂದ ತಕ್ಷಣ ಬಾಲ್ಯ ವಿವಾಹ ತಡೆಯಲಾಗಿದೆ ಎಂದು ಹೇಳುತ್ತಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು 10-12 ರಿಂದ ಬಾಲ್ಯ ವಿವಾಹಗಳಾಗಿವೆ ಎನ್ನುತ್ತಾರಲ್ಲದೇ ತಮಗೆ ಮಾಹಿತಿ ನೀಡಲು ಅಧಿಕಾರವಿಲ್ಲ. ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಮಾಹಿತಿ ನೀಡಬಹುದಾಗಿದೆ. ಆದರೆ ಈ ಕುರಿತು ಇಲಾಖಾಧಿಕಾರಿಗಳೇ ಮಾಹಿತಿ ನೀಡಬೇಕು ಎನ್ನುತ್ತಾರೆ. ಒಟ್ಟಾರೆ ಇಲಾಖೆ ಹಾಗೂ ಸಮಿತಿ ನಡುವೆ ಸಮನ್ವಯ ಇಲ್ಲದಕ್ಕೆ ಬಾಲ್ಯ ವಿವಾಹ ತೆರೆಯಲ್ಲಿ ನಡೆಯುತ್ತಿವೆ ಎನ್ನಲಾಗುತ್ತಿದೆ.