ದಾವಣಗೆರೆ: “ಕಿತ್ತು ತಿನ್ನುವ ಬಡತನ, ಅಂತಾದ್ರಾಗೆ ಈ ಕೋವಿಡ್ ಬಂದು ಹೊಲ, ಮನ್ಯಾಗೆ ಕೆಲ್ಸಾನೇ ಇಲ್ಲ. ಒಳ್ಳೇ ಸಂಬಂಧ ಬಂದೈತೆ ಬಿಡಬಾರ್ಧು ಅಂತ ಏನೋ ಸಾಲ-ಗೀಲ ಮಾಡಿ, ಮಗಳ ಮದುವೆ ಮಾಡೋಕೆ ಹೊರಟಿದ್ವಿ. ಸಣ್ ವಯಸ್ನಾಗೆ ಮದ್ವೆ ಮಾಡೋದು ತಪ್ಪು ಅಂತಾ ಹೇಳಿದ್ ಮೇಲೆ ನಿಲ್ತೀವಿ’ಇದು ಬಾಲ್ಯವಿವಾಹಕ್ಕೆ ಮುಂದಾಗಿದ್ದ ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದ ಪೋಷಕರೊಬ್ಬರ ಮಾತು. ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಸದ್ದಿಲ್ಲದೆ ಕೆಲವು ಪೋಷಕರು ತಮ್ಮ
ಸಣ್ಣ ವಯಸ್ಸಿನ ಹೆಣ್ಣು ಮಕ್ಕಳ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಂಡರೆ ಆಯಿತು ಎಂಬ ನಿರ್ಧಾರದಿಂದ ಬಾಲ್ಯವಿವಾಹಕ್ಕೆ ಪ್ರಯತ್ನಿಸಿದ್ದು ರಹಸ್ಯವೇನಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎರಡು ಬಾಲ್ಯವಿವಾಹ ನಡೆದಿವೆ. ಒಂದು ದೂರು ದಾಖಲಾಗಿದ್ದರೆ ಸುಮಾರು 48 ಬಾಲ್ಯವಿವಾಹವನ್ನು ತಡೆಗಟ್ಟಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಲ್ಯಾಬ್ ಡಾನ್‌ಬಾಸ್ಕೋ ಸಂಸ್ಥೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ಇತರೆ ಇಲಾಖೆಗಳ ಸಹಕಾರದಿಂದ 48 ಬಾಲ್ಯವಿವಾಹ ತಡೆಯಲಾಗಿದೆ. ಸಕಾಲಿಕ ಮಾಹಿತಿ ದೊರೆತಿದ್ದರಿಂದ ಬಾಲ್ಯವಿವಾಹ ತಡೆಯಲು ಸಾಧ್ಯವಾಗಿದೆ.
ಒಂದೊಮ್ಮೆ ಮಾಹಿತಿ ದೊರೆಯದಿದ್ದರೆ ಇವಿಷ್ಟೂ ವಿವಾಹಗಳು ನಡೆದೇ ಹೋಗುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಕೆಲವರಿಗೆ ಬಾಲ್ಯವಿವಾಹ ತಪ್ಪು ಎನ್ನುವ ಮಾಹಿತಿಯೇ ಇಲ್ಲ. ನಮ್ಮ ಮನೆ ಹೆಣ್ಣು ಮಕ್ಕಳ ಮದುವೆ ಮಾಡಲು ಬೇಡ ಎನ್ನುವವರು, ಅಡ್ಡಿಪಡಿಸುವವರು ಯಾರು ಎಂಬ ಮಾತುಗಳು ಕೇಳಿ ಬರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಎಷ್ಟು ದಿನ ಎಂದು ಮನೆಯಲ್ಲಿ ಇಟ್ಟುಕೊಳ್ಳಲಿಕ್ಕಾಗುತ್ತದೆ. ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಕೊಟ್ಟರೆ ಅವಳ ಪಾಡಿಗೆ ಅವಳು ಗಂಡನ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಎಂಬ ಸಾರ್ವತ್ರಿಕ ಅಭಿಪ್ರಾಯಕ್ಕೆ ಬದ್ಧರಾಗಿರುವ ಕೆಲ ಪೋಷಕರು ಹದಿ ಹರೆಯದ ಮಕ್ಕಳ ಮದುವೆಗೆ ಮುಂದಾಗುತ್ತಾರೆ ಎನ್ನುತ್ತಾರೆ ಕೊಲ್ಯಾಬ್ ಡಾನ್‌ಬಾಸ್ಕೋ ಸಂಸ್ಥೆ ಸಂಯೋಜಕ ಕೊಟ್ರೇಶ್.
ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿಯ ವಿವಾಹ ಸಿದ್ಧತೆ ನಡೆದಿರುವ ಮಾಹಿತಿ ಪಡೆದು ಅಧಿಕಾರಿಗಳು ಅಲ್ಲಿಗೆ ಹೋದಾಗ ಒಳ್ಳೆಯ ಸಂಬಂಧ, ಆರ್ಥಿಕವಾಗಿ ಸಬಲರಾಗಿದ್ದಾರೆ ಎನ್ನುವ ಕಾರಣಕ್ಕೆ ವರನಿಗೆ ಈಗಾಗಲೇ ಎರಡುಮದುವೆ ಆಗಿರುವ ವಿಷಯ ಗೊತ್ತಿದ್ದರೂ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಈ ವಿವಾಹವನ್ನು ತಡೆದು, ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಒಂದು ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿನಿಯೇ ತನ್ನ ಮದುವೆ ನಿಲ್ಲಿಸುವಂತೆ ಕೋರಿ ಕೊಲ್ಯಾಬ್ ಸಂಸ್ಥೆಗೆ ಮಾಹಿತಿ ನೀಡಿದ್ದೂ ಇದೆ. ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಲ್ಲೂ ಬಾಲ್ಯವಿವಾಹ ಆಗುವುದು ತಪ್ಪು ಎಂಬ ಜಾಗೃತಿ ಮೂಡಿದೆ. ಬಾಲ್ಯವಿವಾಹ ತಪ್ಪು ಎಂಬ ಜಾಗೃತಿ ಸಾರ್ವತ್ರಿಕ ಆಗುವ ಅಗತ್ಯತೆಯೂ ಇದೆ. ಕಾನೂನು ಪ್ರಕಾರ ಬಾಲ್ಯವಿವಾಹಮಾಡುವುದು ತಪ್ಪು ಎಂದು ಕರಪತ್ರ, ಭಿತ್ತಿಪತ್ರ ವಿತರಣೆ, ಗೋಡೆ ಬರಹದ ಜತೆಗೆ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಈ ಪಿಡುಗು ಸಂಪೂರ್ಣ ನಿಂತಿಲ್ಲ.
ಮನಸ್ಸು ಕೆಡಿಸುವ ಮೊಬೈಲ್ : ಸಾಮಾಜಿಕ ಹಾಗೂ ಪೋಷಕರ ಆರ್ಥಿಕ ಸ್ಥಿತಿಗತಿಯೂ ಬಾಲ್ಯವಿವಾಹಕ್ಕೆ ಮೂಲ ಕಾರಣ. ಕೆಲವು ಪ್ರಕರಣಗಳಲ್ಲಿ ಪೋಷಕರ ಆರೋಗ್ಯ, ತಮ್ಮ ಕುಟುಂಬದ ಹಿರಿಯರ ಕಡೆಯ ಆಸೆ ತೀರಿಸುವ ಇರಾದೆಯೂ ಕಾರಣ ಆಗುತ್ತದೆ. ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿರುವ ಮೊಬೈಲ್ ಮೋಹ ಹದಿ ಹರೆಯದ ಮಕ್ಕಳ ಮೇಲೂ ಗಾಢ ಪರಿಣಾಮ ಬೀರತೊಡಗಿದೆ. ಸಣ್ಣ ವಯಸ್ಸಿನಲ್ಲೇ ಪ್ರೀತಿ, ಪ್ರೇಮದ ಬಲೆಗೆ ಬೀಳುವುದು ಹೆಚ್ಚುತ್ತಿದೆ. ಹರೆಯದ ಮಕ್ಕಳು ಮನೆ ಬಿಟ್ಟುಹೋಗುವುದು ಸಹ ಕಂಡು ಬರುತ್ತದೆ. ತಮ್ಮ ಕುಟುಂಬದ ಹೆಣ್ಣು ಮಕ್ಕಳು ಏನಾದರೂ ಪ್ರೀತಿ, ಪ್ರೇಮದ ಬಲೆಯಲ್ಲಿ ಸಿಲುಕಿ ಮನೆ ಬಿಟ್ಟು ಹೋದರೆ ಕುಟುಂಬದ ಮರ್ಯಾದೆ ಮಣ್ಣು ಪಾಲಾಗುತ್ತದೆ. ಹಾಗಾಗಿ ಮದುವೆ ಮಾಡುವುದೇ ಲೇಸು ಎಂದು ಪೋಷಕರು ಬಾಲ್ಯವಿವಾಹಕ್ಕೆ ಮುಂದಾಗುತ್ತಿರುವ ಉದಾಹರಣೆಯೂ ಇದೆ.
ಬಡತನ, ಅನಕ್ಷರತೆ, ಜವಾಬ್ದಾರಿ ಕಳೆದುಕೊಳ್ಳಬೇಕೆನ್ನುವ ಪೋಷಕರ ಧಾವಂತ ಹಾಗೂ ಹದಿ ಹರೆಯದ ಮಕ್ಕಳ ಪ್ರೇಮ ಇತರೆ ಕಾರಣದಿಂದ ಬಾಲ್ಯ ವಿವಾಹಕ್ಕೆ ಪೋಷಕರು ಮುಂದಾಗುತ್ತಾರೆ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯ ಇದೆ. –
ಟಿ.ಎಂ. ಕೊಟ್ರೇಶ್, ಕೊಲ್ಯಾಬ್ ಡಾನ್‌ಬಾಸ್ಕೋ ಸಂಸ್ಥೆ ಸಂಯೋಜಕ
-ರಾ. ರವಿಬಾಬು