ಸಿದ್ದಾಪುರ: ಮಕ್ಕಳ ಹೆತ್ತವರು ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಾರೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಕನ್ನಡ ಮಾಧ್ಯಮ ಹಾಗೂ ಕನ್ನಡ ಶಾಲೆಗಳ ಕುರಿತು ಕೀಳರಿಮೆ ಬೇಡ. ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದಾರೆ. ಶಾಲೆಗಳಿಗೆ ಸರಕಾರಿ ಸೌಲಭ್ಯಗಳು ಹಾಗೂ ದಾನಿಗಳ ಕೊಡುಗೆಗಳು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದು ಕೊಡುಗೈ ದಾನಿ ಹಾಗೂ ಬಹ್ರೈನ್ ಉದ್ಯಮಿ ಸುಧಾಕರ ಶೆಟ್ಟಿ ಹುಂತ್ರಿಕೆ ಅವರು ಹೇಳಿದರು.
ಅವರು ಕುಳ್ಳುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ಆಟದ ಮೈದಾನದ ನೆಲಹಾಸು ಹೊದಿಕೆಯ ಉದ್ಘಾಟನೆ ಮತ್ತು ಗಣಕಯಂತ್ರಗಳ ಹಸ್ತಾಂ ತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಎಸ್‌ಡಿಎಂಸಿಯ ಉಪಾಧ್ಯಕ್ಷ ಸಂತೋಷ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅತಿಥಿಗಳಾಗಿ ಶಂಕರನಾರಾಯಣ ಗ್ರಾ. ಪಂ. ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಉದ್ಯಮಿ ಬಾಲಕೃಷ್ಣ ಶೆಟ್ಟಿ ಹುಂತ್ರಿಕೆ, ನಿವೃತ್ತ ಮುಖ್ಯ ಶಿಕ್ಷಕರಾದ ಬನ್ನಾಡಿ ಸದಾಶಿವ ಶೆಟ್ಟಿ, ರವೀಂದ್ರ ಶೆಟ್ಟಿ ಚಾರಕ್ಕಿ, ಶಿಕ್ಷಣ ಸಂಯೋಜಕರಾದ ಅನಿತಾ, ನಾರಾಯಣ ನಾಯ್ಕ, ಕುಂದಾಪುರ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದರು.
ಶಿಕ್ಷಕ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವನಜಾ ಎಸ್. ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಸಹಶಿಕ್ಷಕ ಸುರೇಶ ನಾಯ್ಕ ಹಾಗೂ ಗೌರವ ಶಿಕ್ಷಕಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.