Advertisement

ಕನಕರಾಯನಿಗೆ ಮದ್ಯ ನೈವೇದ್ಯ ಸಮರ್ಪಣೆ

03:45 PM Mar 27, 2019 | Naveen |
ಗುಳೇದಗುಡ್ಡ: ಇಲ್ಲಿ ದೇವರಿಗೆ ಸಿಹಿ ನೈವೇದ್ಯದ ಬದಲು ಮದ್ಯವೇ ನೈವೇದ್ಯವಾಯ್ತು. ಹೌದು. ಮಂಗಳವಾರ ನಡೆದ ಕೆಲವಡಿ-ಲಿಂಗಾಪುರ ಗ್ರಾಮದ ಕನಕರಾಯನ ಜಾತ್ರೆ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಭಕ್ತರು ತಮ್ಮ ನೆಚ್ಚಿನ ದೇವರು ಕನಕರಾಯನಿಗೆ ತಮಗಿಷ್ಟವಾದ ಮದ್ಯ ನೈವೇದ್ಯ ಮಾಡಿ ಭಕ್ತಿ ಸಮರ್ಪಣೆ ಮಾಡಿದರು. ಇಷ್ಟಾರ್ಥ ನೆರವೇರಿಸಲು ಪ್ರಾರ್ಥಿಸಿದರು. ಭಕ್ತರು ತಂದ ಮದ್ಯವನ್ನು ದೇವರಿಗೆ ನೈವೇದ್ಯ ಮಾಡಿದ ಅರ್ಚಕರು ಮರಳಿ ಪ್ರಸಾದ ರೂಪದಲ್ಲಿ ಕೊಟ್ಟರು.
ಹಿನ್ನೆಲೆ: ಕೆಲವಡಿ ಗ್ರಾಮದ ಆರಾಧ್ಯ ದೆ„ವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವರು ಹಾಗೂ ಕನಕರಾಯ ಅಣ್ಣ-ತಮ್ಮಂದಿರಾಗಿದ್ದಾರೆ. ಈ ಇಬ್ಬರೂ ದೇವರು ತೀರ್ಥಪ್ರಿಯರು ಎಂಬುದು ಇಲ್ಲಿನ ಭಕ್ತರ ನಂಬಿಕೆ. ರಂಗನಾಥನಿಗೂ ಹಾಗೂ ಕನಕರಾಯನಿಗೂ ಯಾವುದೋ ವಿಷಯದಲ್ಲಿ ಮನಸ್ತಾಪ ಉಂಟಾಗಿ, ಕನಕರಾಯ ಲಿಂಗಾಪೂರ-ಶಿರೂರ ಮಾರ್ಗದ ಮಧ್ಯೆ ನೆಲೆಸಿದನು. ರಂಗನಾಥಸ್ವಾಮಿಯು ಕೆಲವಡಿ ಗ್ರಾಮದಲ್ಲಿ ನೆಲೆಸಿದನೆಂಬ ಪ್ರತೀತಿ ಇದೆ. ಪ್ರತಿ ವರ್ಷ ರಂಗನಾಥಸ್ವಾಮಿ ರಥೋತ್ಸವ ಇನ್ನೆರಡು ದಿನ ಇರುವಾಗ ಹಂಸನೂರ ಅಮ್ಮನವರು ಕೆಲವಡಿ ಗ್ರಾಮಕ್ಕೆ ಬರುತ್ತಾರೆ. ರಂಗನಾಥಸ್ವಾಮಿ ದೇವರು ತನ್ನ ಅಣ್ಣನಾದ ಕನಕರಾಯನನ್ನು ತನ್ನ ಜಾತ್ರೆಯ ಒಂದು ದಿನ ಮುಂಚೆ ಜಾತ್ರೆಗೆ ಆಹ್ವಾನಿಸಲು ಲಿಂಗಾಪೂರ-ಶಿರೂರ ಮಾರ್ಗದಲ್ಲಿರುವ ಕನಕರಾಯನ ಗುಡಿಗೆ ತೆರಳುತ್ತಾನೆ ಎಂಬುದು ಕೆಲವಡಿ, ಲಿಂಗಾಪೂರ ಗ್ರಾಮಸ್ಥರ ನಂಬಿಕೆ. ಕೆಲವಡಿಯ ಶ್ರೀ ಲಕ್ಷ್ಮೀ ರಂಗನಾಥ ಗುಡಿಯಿಂದ ಲಿಂಗಾಪೂರ-ಶಿರೂರ ಮಾರ್ಗ ಮಧ್ಯದಲ್ಲಿರುವ ಕನಕರಾಯನ ಸನ್ನಿಧಿಗೆ ಭಕ್ತರು ಮೆರವಣಿಗೆ ಮೂಲಕ ಪಾಲಿಕೆಯನ್ನು ತಂದು ಪೂಜೆ ಮಾಡಿದ ನಂತರವೇ ಮದ್ಯದ ಪ್ರಸಾದ(ತೀರ್ಥ)ವನ್ನು ಭಕ್ತರು ಸ್ವೀಕರಿಸುತ್ತಾರೆ. ನಂತರ ಕನಕರಾಯನ ಗುಡಿಯಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ.
ಬೇಡಿಕೆ ಈಡೇರಿಕೆಗೆ ಮದ್ಯ ನೈವೇದ್ಯ: ಕೆಲವಡಿ ರಂಗನಾಥ ಹಾಗೂ ಕನಕರಾಯರ ದೇವಸ್ಥಾನಗಳಿಗೆ ಬರುವ ಭಕ್ತರು, ತಮ್ಮ ಕಷ್ಟಗಳು ನಿವಾರಣೆಯಾದರೆ ಅಥವಾ ದೇವರ ಸನ್ನಿ ಧಿಯಲ್ಲಿ ಭಕ್ತರು ಬೇಡಿಕೊಂಡ ಹರಕೆಗಳು ನೆರವೇರಿದರೆ ಇಂತಿಷ್ಟು ಮದ್ಯದ ಬಾಟಲಿಗಳನ್ನು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾರೆ. ಅದರಂತೆ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಿದಾಗ ಇಲ್ಲಿಗೆ ಬಂದು ಕ್ವಾಲಿಟಿ ಮದ್ಯದಿಂದ ಹಿಡಿದು ಬೀಯರ್‌, ವಿಸ್ಕಿ, ರಮ್‌ ಹೀಗೆ ವಿವಿಧ ಮದ್ಯದ ಬಾಟಲಿಗಳನ್ನು ತಂದು ನೈವೇದ್ಯ ರೂಪದಲ್ಲಿ ಅರ್ಪಿಸಿ ಹರಕೆ ತೀರಿಸುತ್ತಾರೆ. ಕೆಲಸಕ್ಕೆಂದು ಬೆಂಗಳೂರ, ಮಂಗಳೂರ, ಗೋವಾ ಮುಂತಾದ ಕಡೆಗಳಲ್ಲಿ ತೆರಳಿದ್ದ ಕೆಲವಡಿ, ಲಿಂಗಾಪುರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಜಾತ್ರೆಗೆ ತಪ್ಪದೇ ಆಗಮಿಸುತ್ತಾರೆ.
ರಂಗನಾಥನ ರಥೋತ್ಸವ
ಕೆಲವಡಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ರಥೋತ್ಸವ ಮಾ.27ರಂದು ಸಂಜೆ 5ಗಂಟೆಗೆ ಜರುಗಲಿದೆ. ಓಕಳಿ, ಅಶ್ವವಾಹನೋತ್ಸವ, ವಾದಿ ಪದಗಳು ಹಾಗೂ ಕಡುಬಿನ ಕಾಳಗ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಮಲ್ಲಿಕಾರ್ಜುನ ಕಲಕೇರಿ
Advertisement

Udayavani is now on Telegram. Click here to join our channel and stay updated with the latest news.

Next