ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಹನುಮ ಜಯಂತಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ವಿವಿಧಡೆ ಇರುವ ಮಾರುತಿ, ಆಂಜನೇಯ ದೇವಸ್ಥಾನಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ವಾಯು ಪುತ್ರ ಹನುಮನಿಗೆ ಭಕ್ತಿ ಸಮರ್ಪಿಸಿದರು.
ಅವಳಿ ನಗರದಲ್ಲಿರುವ ಆಂಜನೇಯ ದೇವಸ್ಥಾನಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ, ತಳಿರು-ತೋರಣಗಳನ್ನು ಕಟ್ಟಿ, ವಿದ್ಯುತ್ ದೀಪಗಳಿಂದ ದೇವಸ್ಥಾನಗಳನ್ನು ಶೃಂಗರಿಸಲಾಗಿತ್ತು.
ವಿವಿಧೆಡೆ ವಿಶೇಷ ಪೂಜೆ: ನಗರದ ಪುರಾತನ ಕಿಲ್ಲಾದ ಜೋಡಮಾರುತಿ ದೇವಸ್ಥಾನ, ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನ, ನರಸಾಪುರದ ಗುಂಡದ ಮಾರುತಿ ಗುಡಿ, ಗಾಂಧಿ ನಗರದ ಮಾರುತಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ರೈಲ್ವೆ ನಿಲ್ದಾಣ ಸಮೀಪದ ಮಾರುತಿ ಮಂದಿರ, ಹುಡ್ಕೊ ಬಡಾವಣೆಯ ಬಯಲು ಆಂಜನೇಯ ದೇವಸ್ಥಾನ, ಶರಣಬಸವೇಶ್ವರ ನಗರದ ಆಂಜನೇಯ ಗುಡಿ, ಹಾತಲಗೇರಿ ನಾಕಾದ ಮಾರುತಿ ದೇವಸ್ಥಾನಗಳಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಬೆಳಗ್ಗೆಯಿಂದಲೇ ವೀರಾಂಜನೇಯನಿಗೆ ಮಹಾ ರುದ್ರಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು. ಹೋಮ-ಹವನ ನೆರವೇರಿಸಿ, ಇಷ್ಟಾರ್ಥಿಗಳ ಸಿದ್ಧಿಗೆ ಪ್ರಾರ್ಥಿಸಿದರು. ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಬೆಳಗಿ ಇಷ್ಟಾರ್ಥದೊಂದಿಗೆ ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಯಿತು.
ಹನುಮನ ತೊಟ್ಟಿಲೋತ್ಸವ: ಬೆಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ಹೂ-ಹಣ್ಣು, ಕಾಯಿ ಅರ್ಪಿಸಿದರು. ಸುಮಂಗಲೆಯರು ಭಕ್ತರು ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ತೂಗಿದರು. ನಾಮಕರಣ
ಮಾಡಿ, ಸಂಭ್ರಮಿಸಿದರು. ಮಧ್ಯಾಹ್ನ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ನಡೆಯಿತು. ಬಾಲ ಮಾರುತಿಯನ್ನು ತೊಟ್ಟಿಲಿಗೆ ಹಾಕಿ, ಜೋಗುಳ ಗೀತೆಗಳನ್ನು ಹಾಡಿದರು.
ಉತ್ಸಾಹದಿಂದ ತೊಟ್ಟಿಲು ತೂಗಿ ಕೃತಾರ್ಥರಾದರು. ಮಧ್ಯಾಹ್ನ ಇಲ್ಲಿನ ಜೋಡ ಹನುಮಂತನ ದೇವಸ್ಥಾನ ಸೇರಿದಂತೆ ವಿವಿಧಡೆ ಭಕ್ತಾಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.