Advertisement

ವಾಹನ ಮಾರುಕಟ್ಟೆಯಲ್ಲಿ ಆಫರ್‍ಗಳ ಸುಗ್ಗಿ

01:22 AM Oct 03, 2019 | Lakshmi GovindaRaju |

ಭಾರತೀಯ ಆಟೋ ಮೊಬೈಲ್‌ ಉದ್ಯಮ ಈಗ ಹಬ್ಬ ಸೀಸನ್‌ನಲ್ಲಿ ಪುಟಿದೆದ್ದು ಚಿಮ್ಮುತ್ತಿದೆ; ಕೆಲ ತಿಂಗಳುಗಳಿಂದ ಸ್ಥಾಯಿಯಾಗಿದ್ದ ಮಾರುಕಟ್ಟೆಯಲ್ಲಿ ಈಗ ಜೀವಂತಿಕೆ ಕಾಣಿಸುತ್ತಿದೆ. ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫ‌ರ್‌ಗಳನ್ನು ಬಿಡುತ್ತಿದ್ದರೆ, ಗ್ರಾಹಕರು ಹೊಸ ಉತ್ಸಾಹದಿಂದ ಮಾರುಕಟ್ಟೆಗೆ ಮುಗಿಬೀಳುವ ವಾತಾವರಣ ಸೃಷ್ಟಿಯಾಗಿದೆ.

Advertisement

ಬೆಂಗಳೂರು: ಪ್ರಸ್ತುತ ಮಾರುಕಟ್ಟೆ ವಾಹನ ಪ್ರಿಯರಿಗೆ ಎಂದಿಗಿಂತಲೂ ಅನುಕೂಲಕರವಾಗಿದೆ. ಈ ವೇಳೆಯಲ್ಲೂ ವಾಹನ ಖರೀದಿಸಲು ಬಯಸುವ ಗ್ರಾಹಕರಿಗೆ ಸಿಗುತ್ತಿದೆ ಉತ್ತಮ ಅವಕಾಶ. ಒಂದೆಡೆ, ಶೋ-ರೂಂಗಳು ಹೆಚ್ಚಿನ ರಿಯಾಯ್ತಿಗಳನ್ನು ನೀಡುತ್ತಿದ್ದರೆ, ಬ್ಯಾಂಕ್‌ ಸಾಲ ಕೂಡ ತ್ವರಿತವಾಗಿ ಸಿಗುತ್ತಿದೆ. ಈ ಹಿಂದೆ 10-12 ಲಕ್ಷಗಳಿಗೆ ಮಾರಾಟವಾಗುತ್ತಿದ್ದ ವಾಹನಗಳು ಈಗ ಶೇ. 15ರಿಂದ 20ರಷ್ಟು ರಿಯಾಯ್ತಿಯೊಂದಿಗೆ 8ರಿಂದ 9 ಲಕ್ಷ ರೂ.ಗೆ ಸಿಗುವಂತಾಗಿದೆ!

ಇದರ ಜತೆಗೆ ಫ್ರೀ ಸರ್ವಿಸ್‌ ಪ್ಯಾಕೇಜ್‌ಗಳು, ಫ್ರೀ ಇನ್‌ಶ್ಯೂರೆನ್ಸ್‌ ಮತ್ತು ಫೆಸ್ಟಿವಲ್‌ ಸೀಸನಲ್‌ ಆಫ‌ರ್‌ ಮತ್ತು ಫ್ರೀ ಎಕ್ಸ್‌ಟ್ರಾ ಫಿಟ್ಟಿಂಗ್‌ ಸೌಲಭ್ಯಗಳು ಹೆಚ್ಚುವರಿಯಾಗಿ ಗ್ರಾಹಕರಿಗೆ ಸಿಗುತ್ತಿವೆ. ಒಂದೊಂದು ಡೀಲರ್‌ ಮತ್ತು ಕಂಪನಿ ಒಂದೊಂದು ರೀತಿಯ ಆಫ‌ರ್‌ಗಳನ್ನು ನೀಡುತ್ತಿವೆ. ದೇಶದ ಅತ್ಯುತ್ತಮ ಕಾರು ಕಂಪನಿಗಳಾದ ಟಾಟಾ ಮೋಟಾರ್ಸ್‌, ಟೊಯೋಟ, ಮಾರುತಿ ಸುಜುಕಿ, ಹುಂಡೈ, ಹೋಂಡದಂತಹ ಕಂಪನಿಗಳು ಹೆಚ್ಚು ಆಫ‌ರ್‌ಗಳನ್ನು ನೀಡುತ್ತಿವೆ.

ಇವು ಹೆಚ್ಚೆಚ್ಚು ಎಂಟ್ರೀ -ಲೆವೆಲ್‌ ಕಾರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇವುಗಳ ಮಾರಾಟಕ್ಕೆ ಅತ್ಯುತ್ತಮ ಆಫ‌ರ್‌ಗಳನ್ನು ನೀಡುತ್ತಿವೆ. ಹಾಗಾಗಿ ಈ ಪ್ರಸ್ತುತ ಮಾರುಕಟ್ಟೆ ವಾತಾವರಣದಲ್ಲಿ ಕಾರು ಕೊಳ್ಳುವುದು ಹಿಂದಿಗಿಂತಲೂ ಹೆಚ್ಚು ಗ್ರಾಹಕ ಸ್ನೇಹಿ ಎಂಬ ಅಭಿಪ್ರಾಯಗಳು ವಾಹನ ತಜ್ಞರಿಂದ ವ್ಯಕ್ತವಾಗುತ್ತಿವೆ. 2020ರ ಏಪ್ರಿಲ್‌ ತಿಂಗಳಿನಿಂದ ಭಾರತೀಯ ಮಾರುಕಟ್ಟೆಗೆ ಬಿಎಸ್‌-6 (ಭಾರತ್‌ ಸ್ಟೇಜ್‌) ಇಂಜಿನ್‌ನ ವಾಹನಗಳು ಕಾಲಿಡಲಿವೆ.

ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್‌-4 ಇಂಜಿನ್‌ ವಾಹನಗಳ ಉತ್ಪಾದನೆ ನಿಲ್ಲಿಸಲಾಗಿದೆ. ಈಗಾಗಾಲೇ ಉತ್ಪಾದನೆಗೊಂಡು ಮಾರುಕಟ್ಟೆಯಲ್ಲಿ ಲಭ್ಯವಿರುವಷ್ಟು ವಾಹನಗಳ ಮಾರಾಟಕ್ಕೆ ಎಲ್ಲಾ ಕಂಪನಿಗಳು ಒಳ್ಳೆಯ ಆಫ‌ರ್‌ಗಳನ್ನು ನೀಡಿವೆ. ಕಾರುಗಳಲ್ಲಿ ಮೂರು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದ್ದು, ಎಂಟ್ರೀ ಲೆವೆಲ್‌ ಸೆಗ್ಮೆಂಟ್‌ ವಾಹನಗಳ ಮಾರಾಟ ಸದ್ಯಕ್ಕೆ ಕುಸಿದಿದೆ. ಇನ್ನುಳಿದಂತೆ ಮಿಡ್‌ ಲೆವೆಲ್‌ ಮತ್ತು ಲಕ್ಸುರಿ ಲೆವೆಲ್‌ ಸೆಗ್ಮೆಂಟ್‌ ವೆಹಿಕಲ್ಸ್‌ ಎಂದಿನಂತೆ ಮಾರಾಟವಾಗುತ್ತಿವೆ.

Advertisement

ಎಂಟ್ರೀ ಲೆವೆಲ್‌ ವಾಹನ ಮಾರಾಟ ಕುಸಿಯಲು ಕಾರಣ?: ಎಂಟ್ರೀ ಲೆವೆಲ್‌ ಅಂದರೆ ಸಹಜವಾಗಿ ಎಲ್ಲಾ ಮಧ್ಯಮ ವರ್ಗದ ವಾಹನ ಪ್ರಿಯರು ಇಷ್ಟಪಡುವ ಕಾರುಗಳು. ಇವುಗಳ ಬೆಲೆ 4ಲಕ್ಷದಿಂದ 15 ಲಕ್ಷದವರೆಗೆ ಇರುತ್ತದೆ. ದೇಶದಲ್ಲೇ ಇವುಗಳ ಮಾರಾಟ ಪ್ರಮಾಣ ಶೇ.80ರಷ್ಟಿದೆ. ಇನ್ನುಳಿದಂತೆ ಶೇ.15ರಷ್ಟು ಮಿಡ್‌ ಲೆವೆಲ್‌ ಸೆಕ್ಟರ್‌ ಕಾರುಗಳು ಮತ್ತು ಶೇ.5ರಷ್ಟು ಲಕ್ಸುರಿ ಕಾರ್‌ಗಳ ಮಾರಾಟ ವಾಗುತ್ತಿದೆ. ಹಾಗಾಗಿ 2018ರಲ್ಲಿ ದೇಶಾದ್ಯಂತ 32ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿದ್ದು, ಇವುಗಳ ಪೈಕಿ 30ಲಕ್ಷ ಎಂಟ್ರೀ ಲೆವೆಲ್‌ ಕಾರ್‌ಗಳಾಗಿವೆ. ಇವುಗಳಲ್ಲಿ 13ಲಕ್ಷ ವೈಟ್‌ ಬೋರ್ಡ್‌ ಕಾರುಗಳಿದ್ದು, 17 ಲಕ್ಷ ಯೆಲ್ಲೋ ಬೋರ್ಡ್‌ ಕಾರುಗಳಿವೆ.

ಟಾಟಾ ಮೋಟರ್ಸ್‌: ಟಾಟಾ ಮೋಟರ್ಸ್‌ ಕಂಪನಿಯು ತನ್ನ ಉತ್ಪನ್ನಗಳಾದ ಟಾಟಾ ಹ್ಯಾರಿಯರ್‌, ನೆಕ್ಸಾನ್‌, ಹೆಕ್ಸಾ, ಟಿಯಾಗೊ ಮತ್ತು ಟಿಗೊರ್‌ಗಳಿಗೆ ಸುಮಾರು 1.5 ಲಕ್ಷ ರೂಪಾಯಿ ತನಕ ಡಿಸ್ಕೌಂಟ್‌ಗಳನ್ನು ಪ್ರಕಟಿಸಿದೆ. ನಗದು ಅನುಕೂಲವಲ್ಲದೆ, ಎಕ್ಸ್‌ಚೇಂಜ್‌ ಆಫ‌ರ್‌ಗಳೂ ಇವೆ. ಹಲವು ಬ್ಯಾಂಕ್‌ಗಳ ಜತೆ ಒಡಂಬಡಿಕೆ ಮಾಡಿಕೊಂಡಿರುವ ಕಂಪನಿಯು, ಶೇ 100ರಷ್ಟು ಸಾಲದ ವ್ಯವಸ್ಥೆ ಮಾಡಿದೆ.

ಮಾರುತಿ ಸುಜುಕಿ: ಮಾರುತಿ ಸುಜುಕಿಯು ತನ್ನ ಜನಪ್ರಿಯ ಮಾಡಲ್‌ ಬಲೆನೊ ಆರ್‌ಎಸ್‌ ಬೆಲೆಯನ್ನು ಒಂದು ಲಕ್ಷ ರೂಪಾಯಿಯವರೆಗೂ ಇಳಿಸಿದೆ. ವಿಟಾರ ಬ್ರೆಝ, ಸ್ವಿಫ್ಟ್ ಡೀಸೆಲ್‌, ಬಲೆನೊ ಡೀಸೆಲ್‌, ಎಸ್‌ ಕ್ರಾಸ್‌ ಮತ್ತಿತರ ಕಾರುಗಳಿಗೂ 5000 ರೂ ರಿಯಾಯಿತಿಯನ್ನು ಪ್ರಕಟಿಸಿದೆ

ಹ್ಯುಂಡೈ: ಹ್ಯುಂಡೈ ಕಂಪನಿ ತನ್ನ ಉತ್ಪನ್ನಗಳಾದ ಸ್ಯಾಂಟ್ರೊ ಮತ್ತು ಕ್ರೆಟಾಗಳಿಗೆ ಶೇ 63ರವರೆಗೂ ಡಿಸ್ಕೌಂಟ್‌ಗಳನ್ನು ಪ್ರಕಟಿಸಿತ್ತು. ಮಧ್ಯಮ ಗಾತ್ರದ ಎಸ್‌ಯುವಿ ಕ್ರೆಟಾಕ್ಕೆ 80,000 ರೂ ತನಕವೂ ರಿಯಾಯಿತಿ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಕಾರು ಖರೀದಿಸಿದರೆ ಗ್ರಾಹಕರಿಗೇನು ಲಾಭ ?
1. 15% ಡಿಪ್ರಿಸಿಯೇಶನ್‌ ವಿನಾಯಿತಿ: ಇದೇ ವರ್ಷ ಕಾರು ಖರೀದಿಸಿದವರಿಗೆ ಕೇಂದ್ರ ಸರ್ಕಾರದ ಆದಾಯ ತೆರಿಗೆಯಲ್ಲಿ ಡಿಪ್ರಿಶಿಯೇಶನ್‌ ವಿನಾಯ್ತಿ ಸಿಗಲಿದೆ. ಸದ್ಯ ವಾಹನಗಳ ಡಿಪ್ರಿಶಿಯೇಶನ್‌ ವಿನಾಯ್ತಿ ಶೇ.15 ರಷ್ಟಿದ್ದು,ಈಗ ಖರೀದಿಸಿದವರಿಗೆ ಹೆಚ್ಚುವರಿ ಶೇ 15 ವಿನಾಯ್ತಿ ಸಿಗಲಿದೆ. ಅಂದರೆ ಶೇ.30ರಷ್ಟು ವಿನಾಯ್ತಿ ಸಿಗಲಿದೆ.

2. ಫೆಸ್ಟಿವಲ್‌ ಸ್ಕೀಮ್‌ಗಳು: ಪ್ರತಿ ಹಬ್ಬಗಳಿಗೆ ಒಂದಲ್ಲಾ ಒಂದು ರೀತಿಯ ಆಫ‌ರ್‌ಗಳನ್ನು ನೀಡುತ್ತಿರುವ ಶೋ ರೂಂಗಳು, 15ರಿಂದ 20 ಪ್ರತಿಶತ ಡಿಸ್ಕೌಂಟ್‌ಗಳನ್ನು ನೀಡುತ್ತಿವೆ. ಜತೆಗೆ ಶಾಪಿಂಗ್‌ ವೋಚರ್‌, ಸರ್ವಿಸ್‌ ಕೂಪನ್‌, ಉಚಿತ ಬಿಡಿ ಭಾಗಗಳು ಸೇರಿದಂತೆ ಹಲವಾರು ಲಕ್ಕಿ ಡ್ರಾ ಕೂಪನ್‌ಗಳನ್ನು ನೀಡುತ್ತಿವೆ.

3. ಉಚಿತ ಇನ್‌ಶ್ಯೂರೆನ್ಸ್‌: ಕೆಲ ವಿತರಕ ಕಂಪನಿಗಳು ಉಚಿತ ವಿಮೆ ಸೌಲಭ್ಯ ನೀಡುತ್ತಿವೆ. ಇದರಲ್ಲಿ ಒಂದು/ಎರಡು ವರ್ಷಗಳ ಕಾಲ ಉಚಿತ ವಿಮೆ ನೀಡಲು ಉದ್ದೇಶಿಸಿವೆ. ಕಳೆದ ವರ್ಷ ಕನಿಷ್ಠ 15-20ಸಾವಿರ ರೂ. ವಿಮೆ ಕಟ್ಟುತಿದ್ದ ಗ್ರಾಹಕರು ಪ್ರಸಕ್ತ ಸಾಲಿನಲ್ಲಿ ವಾಹನ ಖರೀದಿಸುತ್ತಿರುವುದರಿಂದ ಈ ಹಣ ಉಳಿತಾಯವಾಗುತ್ತಿದೆ.

4. ಉಚಿತ ಸರ್ವಿಸ್‌ಗಳು: ಈ ಹಿಂದೆ ಪ್ರತಿ ಆಯಿಲ್‌, ಜನರಲ್‌ ಸರ್ವಿಸ್‌ಗೆ ಸಾವಿರಾರು ಹಣ ಕಳೆದುಕೊಳ್ಳುತಿದ್ದ ಮಾಲಿಕರು, ಸದ್ಯದ ಪರಿಸ್ಥಿತಿಯಲ್ಲಿ ವಾಹನ ಖರೀದಿಸಿದರೆ ಕನಿಷ್ಠ 5, 7, 10 ಸರ್ವಿಸ್‌ಗಳನ್ನು ವಿತರಕ ಕಂಪನಿಗಳಿಂದ ಉಚಿತವಾಗಿ ಪಡೆಯಬಹುದು.

5. ಎಕ್ಸ್‌ಟ್ರಾ ಫಿಟ್ಟಿಂಗ್‌ ಫ್ರೀ: ಕೆಲ ಶೋ ರೂಂಗಳು ಅಗತ್ಯವಿರುವ ಕಾರಿನ ಕೆಲ ಬಿಡಿ ಭಾಗಗಳನ್ನು ಉಚಿತವಾಗಿ ನೀಡುತ್ತಿವೆ . ಇದರಿಂದಾಗಿ ಸೀಟ್‌ ಕವರ್‌ , ಎಕ್ಸ್‌ಟ್ರಾ ಮಿರರ್‌, ಮ್ಯಾಗ್‌ ವೀಲ್‌ನಂತಹ ಹಲವು ಬಿಡಿ ಭಾಗಗಳನ್ನು ನೀಡುತ್ತಿವೆ.

ವೆಹಿಕಲ್ಸ್‌ ಸೆಗ್ಮೆಂಟ್‌
ಎಂಟ್ರೀ ಲೆವೆಲ್‌
ಟಾಟಾ ಮೋಟಾರ್ಸ್‌
ಮಹಿಂದ್ರಾ
ಟೊಯೋಟಾ
ಮಾರುತಿ ಸುಜುಕಿ
ರಿನಾಲ್ಟ್
ಹುಂಡೈ
ಹೋಂಡಾ ಬ್ರಾಯ್‌
ಕಿಯಾ
ಎಂಜಿ ಹೆಕ್ಟರ್‌
ಫಿಯಟ್‌, ಫೋರ್ಡ್‌

ಮಿಡ್‌ ಲೆವೆಲ್‌
ಟೊಯೋಟಾ ಫಾರ್ಚುನರ್‌
ಕೊರೋಲಾ
ಇನ್ನೋವಾ ಕ್ರಿಸ್ಟಾ
ಪ್ರಾಡಾ
ಹೋಂಡಾ ಸಿಟಿ
ಸಿವಿಕ್‌
ಸಿಆರ್‌ವಿ
ಸ್ಕೋಡಾ
ಆಕ್ಟೋವಿಯಾ
ಸೂಪರ್ಬ್
ಶೆವರ್‌ಲೆಟ್‌
ಫೋರ್ಡ್‌ ಎಂಡೋವಿಯರ್‌
ನಿಸ್ಸಾನ್‌

ಲಕ್ಸುರಿ ಲೆವೆಲ್‌
ಬೆಂಜ್‌
ಲ್ಯಾಂಬೋರ್ಗಿನಿ
ಫೆರಾರಿ
ಫೋರ್ಷ್‌
ಆಡಿ
ಜಾಗ್ವಾರ್‌
ಬಿಎಂಡಬ್ಲೂ
ರೋಲ್ಸ್‌ ರಾಯ್ಸ್
ಬುಕಾಟಿ
ಹಮ್ಮರ್‌

ಅಮೆರಿಕದಲ್ಲಿ ಪ್ರತಿ ಸಾವಿರ ನಾಗರಿಕರಲ್ಲಿ 980, ಯೂರೋಪಿನಲ್ಲಿ 800 ಕಾರುಗಳಿದ್ದರೆ, ಭಾರತದಲ್ಲಿ ಕೇವಲ 27 ಜನ ಮಾತ್ರ ಕಾರುಗಳನ್ನು ಹೊಂದಿದ್ದಾರೆ. ಹಾಗಾಗಿ, ದೇಶದಲ್ಲಿ ಕಾರು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
-ಉಲ್ಲಾಸ್‌ ಕಾಮತ್‌, ಫಿಕ್ಕಿ ರಾಜ್ಯ ಅಧ್ಯಕ್ಷ, ಕರ್ನಾಟಕ

ಭಾರತೀಯ ಕಾರು ಮಾರಾಟದಲ್ಲಿ ಹೆಚ್ಚಿನ ಕುಸಿತ ಕಂಡಿಲ್ಲ. ಕಾರು ಉತ್ಪಾದನಾ ಕಂಪನಿಗಳು ಸಾಕಷ್ಟು ಒಳ್ಳೆಯ ಆಫ‌ರ್‌ಗಳನ್ನು ನೀಡಿವೆ. ಶೋ ರೂಂಗಳು ಉಚಿತ ಕಾರು ವಿಮೆ, ಸರ್ವಿಸ್‌ ವೋಚರ್‌ ನೀಡುತ್ತಿರುವುದು ಹೆಚ್ಚು ಗ್ರಾಹಕರನ್ನು ಸೆಳೆಯಲಿದೆ.
-ಸಿ.ಆರ್‌.ಜನಾರ್ಧನ, ಎಫ್ಕೆಸಿಸಿಐ ಅಧ್ಯಕ್ಷ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next