Advertisement

ವಿವಿಧ ಸೌಲಭ್ಯ ನೀಡಲು ಕ್ರಮ: ಗುಪ್ತಾ

11:59 AM Jan 13, 2017 | Team Udayavani |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿವರೆಗೆ ಸುಮಾರು 32.19 ಮಿಲಿಯನ್‌ ಟನ್‌ ಸರಕು ಹಾಗೂ 146.18 ಮಿಲಿಯನ್‌ ಪ್ರಯಾಣಿಕರ ಸಾಗಣೆ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕ್ರಮವಾಗಿ ಶೇ.5.30 ರಷ್ಟು ಹಾಗೂ ಶೇ.2.14ರಷ್ಟು ಹೆಚ್ಚಳವಾಗಿದೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ತಿಳಿಸಿದರು. 

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ರೈಲು ಮಾರ್ಗ ನಿರ್ಮಾಣ, ಜೋಡು ಮಾರ್ಗ ನಿರ್ಮಾಣ, ರೈಲು ಮಾರ್ಗ ವಿದ್ಯುದ್ದೀಕರಣ, ನಿಲ್ದಾಣಗಳಿಗೆ ಮೂಲಭೂತ ಸೌಕರ್ಯ, ಭದ್ರತಾ ಕ್ರಮಗಳು ಸೇರಿದಂತೆ ವಿವಿಧ ಯೋಜನೆ, ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರದಿಂದ ಉತ್ತಮ ಸಹಕಾರ ಸಿಗುತ್ತಿದೆ. ಡಿಸೆಂಬರ್‌ನಲ್ಲಿ ರಾಜ್ಯದ ಮೂಲ ಸೌಕರ್ಯಗಳ ಸಚಿವರೊಂದಿಗೆ ನಡೆದ ಸಭೆಯಲ್ಲಿ ಹಲವು ರೈಲ್ವೆ ಯೋಜನೆಗಳ ಕುರಿತಾಗಿ ಚರ್ಚಿಸಲಾಗಿದೆ ಎಂದರು. 

2713ಕೋಟಿ ರೂ.ವೆಚ್ಚ: ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೊಸ ರೈಲು ಮಾರ್ಗ ಮತ್ತು ಜೋಡು ಮಾರ್ಗ ಯೋಜನೆಗಳಿಗಾಗಿ ಸುಮಾರು 2,713 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 2014-15ರಲ್ಲಿ 884ಕೋಟಿ ರೂ., 2015-16ರಲ್ಲಿ 1,145ಕೋಟಿ ರೂ., 2016-17ರಲ್ಲಿ ನವೆಂಬರ್‌ ಅಂತ್ಯದವರೆಗೆ 684 ಕೋಟಿ ರೂ. ಸೇರಿದಂತೆ ಒಟ್ಟು 2,713 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು. 

ಪ್ರಸಕ್ತ ಆರ್ಥಿಕ ವರ್ಷದ 9 ತಿಂಗಳಲ್ಲಿ ಸುಮಾರು 40 ಕಿ.ಮೀ. ನೂತನ ರೈಲು ಮಾರ್ಗ ನಿರ್ಮಿಸಲಾಗಿದೆ. 2016-17ನೇ ಆರ್ಥಿಕ ವರ್ಷದಲ್ಲಿ ಸುಮಾರು 208ಕಿ.ಮೀ. ನೂತನ ರೈಲು ಮಾರ್ಗ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಲ್ಯಾಣದುರ್ಗಾ- ಕದಿರಿದೇವರಪಳ್ಳಿ, ನೆಲಮಂಗಲ – ಶ್ರವಣಬೆಳಗೋಳ, ಬಾಗಲಕೋಟೆ-ಖಜ್ಜಿಡೋಣಿ, ಗಿಣಗೇರಾ-ಚಿಕ್ಕಬೆಣಕಲ್ಲ ನಡುವಿನ ರೈಲ್ವೆ ಮಾರ್ಗವನ್ನು ಇದೇ ಆರ್ಥಿಕ ವರ್ಷದಲ್ಲಿ ಕಾರ್ಯಾಚರಣೆಗೆ ಅಣಿಗೊಳಿಸಲಾಗುವುದು ಎಂದರು. 

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅವಶ್ಯಕ ಮಾರ್ಗವೆಂದು ನೈರುತ್ಯ ರೈಲ್ವೆ ಪರಿಗಣಿಸಿದೆ. ಅದೇ ರೀತಿ ಗಿಣಗೇರಾ-ಮಹೆಬೂಬ್‌ ನಗರ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಒಟ್ಟು 1900 ಎಕರೆಯಷ್ಟು ಭೂಮಿ ಸ್ವಾಧೀನ ಅವಶ್ಯಕತೆ ಇದ್ದು, ಇದುವರೆಗೆ 800 ಎಕರೆಯಷ್ಟು ಭೂಮಿ ಮಾತ್ರ  ದೊರೆತಿದೆ. ಭೂ ಸ್ವಾಧೀನ ಕ್ರಮ ಪ್ರಗತಿಯಲ್ಲಿದೆ ಎಂದರು. 

Advertisement

ರೈಲುಗಳ ಸುರಕ್ಷತೆ ದೃಷ್ಟಿಯಿಂದ ಕಳೆದ ವರ್ಷ 72 ಕಾವಲುಗಾರ ರಹಿತ ಲೇವಲ್‌ ಕ್ರಾಸಿಂಗ್‌ ಗೇಟ್‌ಗಳಲ್ಲಿ ಮೇಲ್ಸೇತುವೆ ಇಲ್ಲವೆ ಕೆಳಸೇತುವೆ ನಿರ್ಮಾಣದ ಮೂಲಕ ಗೇಟ್‌ಗಳನ್ನು ತೆಗೆದು ಹಾಕಲಾಗಿದ್ದು, 2016ರ ಡಿಸೆಂಬರ್‌ ಅಂತ್ಯದವರೆಗೆ 28 ತೆಗೆದು ಹಾಕಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಅಂತ್ಯದ ವೇಳೆಗೆ 66 ಗೇಟ್‌ಗಳನ್ನು ತೆಗೆದು ಹಾಕಲು ಯೋಜಿಸಲಾಗಿದೆ.

ರೈಲ್ವೆ ಮಂಡಳಿ 2020ರ ವೇಳೆಗೆ ಎಲ್ಲ ಕಾವಲು ರಹಿತ ಗೇಟ್‌ಗಳ ತೆರವಿಗೆ ಸೂಚಿಸಿದ್ದು, ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ ಎಂದರು. ನೋಟುಗಳ ಅಪನಗದೀಕರಣದಿಂದ ಪ್ರಯಾಣಿಕರ ಸಾಗಣೆ ಆದಾಯದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಪಾರ್ಸಲ್‌ ವಿಭಾಗದಲ್ಲಿ ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ. ಸ್ವಾéಪಿಂಗ್‌ ಯಂತ್ರಗಳನ್ನು ಪರಿಚಯಿಸಲಾಗುತ್ತಿದ್ದು, 140 ಕೇಂದ್ರಗಳಿದ್ದು, ಪ್ರಸ್ತುತ 4 ಕೇಂದ್ರಗಳಲ್ಲಿ ಇದು ಅನುಷ್ಠಾನಗೊಂಡಿದೆ.

ಭದ್ರತೆ ದೃಷ್ಟಿಯಿಂದ ಬೆಂಗಳೂರು, ಮೈಸೂರು ಹಾಗೂ ಯಶವಂತಪುರ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ ಆಗಿದ್ದು, ನಿರ್ಭಯಾ ನಿಧಿ ಅಡಿಯಲ್ಲಿ ಸುಮಾರು 30 ನಿಲ್ದಾಣಗಳಿಗೆ ಸಿಸಿಟಿವಿ ಇನ್ನಿತರ ಸಾಮಗ್ರಿಗಳ ಅಳವಡಿಕೆಗೆ ಮಂಜೂರಾತಿ ಸಿಕ್ಕಿದೆ. ಅಂತ್ಯೋದಯ, ಹಮ್‌ ಸಫ‌ರ್‌ ರೈಲುಗಳಿಗೆ ಸಿಸಿಟಿವಿ ಇನ್ನಿತರ ಅತ್ಯಾಧುನಿಕ ಸಲಕರಣೆಗಳ ಅಳವಡಿಸಲಾಗುತ್ತಿದ್ದು, ಶೀಘ್ರದಲ್ಲೇ ಈ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದರು. ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಗಳಾದ ವಿಜಯಾ, ಶಂಕರ ಕುಟ್ಟಿ, ವಿ.ಕೆ. ವರ್ಮಾ ಇನ್ನಿತರ ಅಧಿಕಾರಿಗಳು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next