Advertisement
ರಸ್ತೆ ಗುಂಡಿಗಳು ಹೆಚ್ಚಾಗಿರುವುದರಿಂದ ನಗರದ ರಸ್ತೆಗಳ ನಿರ್ವಹಣೆ ಹೊಣೆಯನ್ನು ಹೈಕೋರ್ಟ್ ಬಿಬಿಎಂಪಿಗೆ ವಹಿಸಿತ್ತು. ಹಾಗೂ ಅದಕ್ಕಾಗಿ ತಗಲುವ ಪೂರ್ಣ ಮೊತ್ತವನ್ನು ಆಯಾ ಸಂಸ್ಥೆಗಳಿಂದಲೇ ಭರಿಸಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಗಳ ಜತೆಗೆ ರಸ್ತೆ ಪುನಃಶ್ಚೇತನ ಶುಲ್ಕವನ್ನೂ ಪಡೆಯುವ ಸಂಬಂಧ ಈಚೆಗೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಪ್ರತಿ ಗುಂಡಿಗೆ 10 ಸಾವಿರ ರೂ. ನಿಗದಿಪಡಿಸಲಾಗಿದೆ. ಆದರೆ ಇದಕ್ಕೆ ಟೆಲಿಕಾಂ ಸಂಸ್ಥೆಗಳಿಂದ ಅಪಸ್ವರ ಕೇಳಿಬರುತ್ತಿದೆ.
Related Articles
Advertisement
ಯಾವ್ಯಾವ ಕಂಪನಿಗಳು?: ನಗರದಾದ್ಯಂತ ರಿಲಾಯನ್ಸ್ ಜಿಯೊ, ಏರ್‌ಟೆಲ್, ಟಾಟಾ ಟೆಲಿಕಾಂ ಸರ್ವಿಸಸ್, ಎಸಿಟಿ, ವೊಡಾಫೋನ್, ಹ್ಯಾಥ್‌ವೇ ಸೇರಿದಂತೆ ಆರೆಂಟು ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳಿದ್ದು, ಈ ಎಲ್ಲ ಕಂಪನಿಗಳು ಅಂದಾಜು 500ರಿಂದ 600 ಕಿ.ಮೀ.ನಷ್ಟು ಓಎಫ್ಸಿ ಅಳವಡಿಕೆಗೆ ಪರವಾನಗಿ ಕೇಳಿವೆ. ಓಎಫ್ಸಿಗಾಗಿ ಪ್ರತಿ ಕಿ.ಮೀ.ಗೆ ಸರಾಸರಿ 10ರಿಂದ 13 ಗುಂಡಿಗಳು ನಿರ್ಮಾಣವಾಗಲಿವೆ. ಪಾಲಿಕೆ ಈಗ ನಿಗದಿಪಡಿಸಿರುವ ಪ್ರಕಾರ ಕಿ.ಮೀ.ಗೆ 1.20ರಿಂದ 1.30 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ರಿಲಾಯನ್ಸ್ ಜಿಯೊ ಮತ್ತು ಏರ್‌ಟೆಲ್ ಕಂಪನಿಗಳ ಜಾಲ ವಿಸ್ತಾರವಾಗಿದ್ದು, ಈ ಎರಡೂ ಕಂಪನಿಗಳೇ ಸುಮಾರು 400 ಕಿ.ಮೀ. ಓಎಫ್ಸಿ ಅಳವಡಿಕೆಗೆ ಪರವಾನಗಿ ಪಡೆದಿವೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಆಯಾ ಟೆಲಿಕಾಂ ಕಂಪನಿಗಳು ಸಮರ್ಪಕವಾಗಿ ಮತ್ತು ನಿಗದಿತ ಅವಧಿಯಲ್ಲಿ ಗುಂಡಿಗಳನ್ನು ಮುಚ್ಚುತ್ತಿರಲಿಲ್ಲ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿತ್ತು. ಈ ಮಧ್ಯೆ ಹೈಕೋರ್ಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿಗಳು ಕೂಡ ಹೆಚ್ಚು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ರಸ್ತೆ ಪುನಃಶ್ಚೇತನ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಂಡು, ಪ್ರಮಾಣೀಕ ರಿಸುವಂತೆ ಕೋರ್ಟ್ ಸೂಚಿಸಿತ್ತು.
ಪಾಲಿಕೆ ಆದೇಶದಲ್ಲಿ ಏನಿದೆ?: ಎಚ್‌ಡಿಡಿ ಮಾದರಿಯ 1×1 ಮೀಟರ್ ಅಳತೆಯ ಪ್ರತಿ ಗುಂಡಿಗೆ 10 ಸಾವಿರ ರೂ. ಮೂಲ ದರ ಪಡೆಯಬೇಕು. ಸದರಿ ಮೊತ್ತವನ್ನು ಪ್ರಧಾನ ಎಂಜಿನಿಯರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸಿ, ಮೊತ್ತ ಸೂಕ್ತವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಸ್ತೆ ಪುನಃಶ್ಚೇತನಕ್ಕೆ ಪಡೆದುಕೊಂಡ ಮೊತ್ತಕ್ಕಿಂತ ಹೆಚ್ಚು ವೆಚ್ಚ ಆಗುತ್ತಿದ್ದರೆ, ತಕ್ಷಣ ಹೆಚ್ಚುವರಿ ಡಿಮ್ಯಾಂಡ್ ನೋಟ್ ಜಾರಿಗೊಳಿಸಿ,
ಹೆಚ್ಚುವರಿ ಮೊತ್ತ ಪಡೆಯಬೇಕು. ರಸ್ತೆ ಕತ್ತರಿಸುವ ಸಂಸ್ಥೆ/ ವ್ಯಕ್ತಿಗಳಿಂದ ರಸ್ತೆ ಪುನಃಶ್ಚೇತನ ಮೊತ್ತವನ್ನು ಪಡೆದುಕೊಂಡ ನಂತರ ರಸ್ತೆ ಕತ್ತರಿಸುವುದರಿಂದ ಉದ್ಭವವಾಗುವ ಎಲ್ಲ ಗುಂಡಿ ಮತ್ತು ಟ್ರೆಂಚ್‌ಗಳನ್ನು ಮುಚ್ಚುವ ಜವಾಬ್ದಾರಿ ಪಾಲಿಕೆಯದ್ದಾಗಿರುತ್ತದೆ. ಅನಧಿಕೃತವಾಗಿ ಅಳವಡಿಕೆ ನಡೆಯುವಾಗ ತಟಸ್ಥವಾಗಿರುವ ಅಧಿಕಾರಿಗಳ ಧೋರಣೆಯನ್ನು ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ಎಚ್ಚರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದರ ನಿರ್ಧಾರ ನಿರಂಕುಶವಾಗಿ ಮಾಡಿದ್ದಲ್ಲ. ಪ್ರತಿಯೊಂದಕ್ಕೂ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ, ವೈಜ್ಞಾನಿಕವಾಗಿ ನಿಗದಿಪಡಿಸಲಾಗಿ ರುತ್ತದೆ. ಅಷ್ಟಕ್ಕೂ ಕಂಪನಿಗಳಿಗೆ ಈ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೆ, ಪಾಲಿಕೆ ಗಮನಕ್ಕೆ ತರಬೇಕು. ಅವುಗಳನ್ನೂ ಪರಿಶೀಲಿಸಲಾಗುವುದು.-ರವಿಕುಮಾರ ಸುರಪುರ, ಬಿಬಿಎಂಪಿ ವಿಶೇಷ ಆಯುಕ್ತರು (ಯೋಜನೆ) * ವಿಜಯಕುಮಾರ ಚಂದರಗಿ