ಬೆಂಗಳೂರು: ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇಳಿಸುವಂತೆ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಫುಡ್‌ಪಾರ್ಕ್‌ಗಳ ಪುನಃಶ್ಚೇತನ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿತ ಕಾರ್ಯಾ ಚರಣೆಯಲ್ಲಿರುವ ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರೊಂದಿಗೆ ಸಂಪರ್ಕ ಕಲ್ಪಿಸುವ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.
ಪ್ರಸಕ್ತ ಮಿಲೆಟ್ ಪೌಡರ್‌ಗಳಿಗೆ ಜಿಎಸ್‌ಟಿಯನ್ನು ಶೇ. 18ರಿಂದ 5ಕ್ಕೆ ಇಳಿಸಲಾಗಿದ್ದು, ಇದನ್ನು ಇತರ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೂ ವಿಸ್ತರಿಸುವಂತೆ ನವೋದ್ಯಮಗಳು ಮನವಿ ಮಾಡಿವೆ. ಈ ಬಗ್ಗೆ ಕೇಂದ್ರಕ್ಕೂ ಶೀಘ್ರ ಪೂರಕ ಪ್ರಸ್ತಾವನೆ ಕಳುಹಿಸಲಾಗುವುದು. ಇದರಿಂದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ಸಿಗುವುದರ ಜತೆಗೆ ರೈತರಿಗೂ ಹೆಚ್ಚು ಅನುಕೂಲ ಆಗಲಿದೆ ಎಂದರು.
ಸಿರಿಧಾನ್ಯ ಬೇಡಿಕೆ ಹೆಚ್ಚಿದ್ದು, ಪೂರೈಕೆಯಲ್ಲಿ ಕೊರತೆ ಇದೆ. ಹಾಗಾಗಿ ಪ್ರೋತ್ಸಾಹಧನ ಯೋಜನೆ ಮುಂದುವರಿ ಸುವುದರ ಜತೆಗೆ ಉತ್ಪಾದನೆಯನ್ನು 30 ಸಾವಿರದಿಂದ 50 ಸಾವಿರ ಹೆಕ್ಟೇರ್‌ಗೆ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.