ಮಂಗಳೂರು: ಬಂಟರ ಸಂಘ ಕಾವೂರು ವತಿಯಿಂದ ಮಾಲಾಡಿ ಕೋರ್ಟ್ ಮುಖ್ಯ ರಸ್ತೆಯಲ್ಲಿ ಕಾವೂರು ಬಂಟರ ಸಮುದಾಯ ಭವನದ ಭೂಮಿ ಪೂಜೆ ಮತ್ತು ಬಂಟರ ಸಂಘದ ಆಡಳಿತ ಕಚೇರಿ ಹಾಗೂ ಬಯಲು ರಂಗಮಂದಿರದ ಉದ್ಘಾಟನೆ ಬುಧವಾರ ನೆರವೇರಿತು.
ಸಭಾಕಾರ್ಯಕ್ರಮದಲ್ಲಿ ಆಶೀರ್ವ ಚನ ನೀಡಿದ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಬಂಟ ಎಂದರೆ ಸಂರಕ್ಷಕ ಎಂಬ ಅರ್ಥವಿದೆ, ಹಾಗಾಗಿ ಯೇ ಧರ್ಮ-ಸಂಸ್ಕೃತಿಗಳನ್ನು ಉಳಿಸು ವ ಜವಾಬ್ದಾರಿ ಬಂಟ ಸಮಾಜಕ್ಕೆ ಇದೆ, ಈ ಸಮುದಾಯ ಭವನ, ವಿದ್ಯಾರ್ಥಿ ಭವನ ನಿರ್ಮಾಣವೂ ಈ ಉದ್ದೇಶಕ್ಕೆ ಪೂರಕವಾಗಿದೆ ಎಂದರು.
ಅದ್ಭುತ ಕಾರ್ಯ: ಕಟೀಲು ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಾವೂರು ಬಂಟರ ಸಂಘ ಅದ್ಭುತ ಕಾರ್ಯ ಮಾಡುತ್ತಿದೆ, ಇಷ್ಟು ದೊಡ್ಡ ನಿವೇಶನ ಬೇರೆಲ್ಲೂ ಸಿಕ್ಕಿಲ್ಲ, ಈಗಾಗಲೇ ರಂಗ ಮಂದಿರವನ್ನು ಪೂರ್ಣಗೊಳಿಸಿದ್ದಾರೆ, ಎರಡು ವರ್ಷ ದಲ್ಲಿ ಸಮುದಾಯ ಭವನ ಪೂರ್ಣ ಗೊಳಿಸುವ ಗುರಿ ಇರಿಸಿದ್ದಾರೆ ಎಂದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ, ಹೇರಂಬ ಇಂಡಸ್ಟ್ರೀಸ್ ಮುಂಬಯಿಯ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಸಾಯಿರಾಧಾ ಗ್ರೂಪ್‌ನ ಆಡಳಿತ ನಿರ್ದೇಶಕ ಮನೋಹರ ಎಸ್. ಶೆಟ್ಟಿ, ಅಭಿಮಾನ್ ಕನ್‌ಸ್ಟ್ರಕ್ಷನ್ಸ್‌ನ ಸುಷ್ಮಾ ಎಂ.ಮಲ್ಲಿ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಮನಪಾ ಸದಸ್ಯರಾದ ಅನಿಲ್ ಕುಮಾರ್, ಸುಮಂಗಲಾ ರಾವ್, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಕಟೀಲ್ ಡೆವಲಪರ್ನ ಮಾಲಕ ಗಿರೀಶ್ ಶೆಟ್ಟಿ., ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷ ಡಿ. ಸುಧಾಕರ ಶೆಟ್ಟಿ ಮುಗ್ರೋಡಿ, ಸಂಚಾಲಕ ಎಂ.ಎಸ್. ಶೆಟ್ಟಿ ಸರಪಾಡಿ, ಬಂಟರ ಸಂಘ ಕಾವೂರು ಪ್ರಧಾನ ಕಾರ್ಯದರ್ಶಿ ಅವಿನಾಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರು ಸ್ವಾಗತಿಸಿ, ಸುಧಾಕರ ಆಳ್ವ ಪ್ರಸ್ತಾವಿಸಿದರು, ಸುಜಯ ಎಸ್.ಶೆಟ್ಟಿ ವಂದಿಸಿದರು. ಪುರುಷೋತ್ತಮ ಭಂಡಾರಿ, ಪ್ರಿಯಾ ಹರೀಶ್, ನಿತೇಶ್ ಶೆಟ್ಟಿ ನಿರೂಪಿಸಿದರು.
10 ಕೋಟಿ ರೂ. ವೆಚ್ಚ 1.25 ಎಕ್ರೆ ಜಾಗದಲ್ಲಿ ಬಂಟರ ಭವನ ನಿರ್ಮಾಣಗೊಳ್ಳಲಿದೆ. ಇದರಲ್ಲಿ 1200 ಮಂದಿಯ ಸಾಮರ್ಥ್ಯದ ಹವಾನಿಯಂತ್ರಿತ ಸಭಾಂಗಣ, ನಿತ್ಯಾನಂದ ಸ್ವಾಮೀಜಿಯವರ ಮಂದಿರ, ವಿದ್ಯಾರ್ಥಿ ಭವನ ಇರಲಿದ್ದು, ಒಟ್ಟು ಅಂದಾಜು 10 ಕೋಟಿ ರೂ. ವೆಚ್ಚ ನಿಗದಿ ಪಡಿಸಲಾಗಿದೆ.
ಪೆರ್ಮೆದ ಬಂಟೆ ಪ್ರಶಸ್ತಿ ಪ್ರದಾನ ಶಿಕ್ಷಣ, ಕ್ರೀಡಾ, ಉದ್ಯಮ, ಸಾಮಾಜಿಕ, ಸಾಂಸ್ಕೃತಿಕ, ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದು ಹಾಗೂ ಇತ್ತೀಚೆಗೆ ಶಿವಮೊಗ್ಗ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ|ಎ. ಸದಾನಂದ ಶೆಟ್ಟಿ ಅವರನ್ನು “ಪೆರ್ಮೆದ ಬಂಟೆ’ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.