ಒಡಿಶಾ: ದಿನಕೂಲಿ ಕಾರ್ಮಿಕನೋರ್ವ ತನ್ನಿಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ಹೆಗಲ ಮೇಲೆ 120 ಕಿ. ಮೀ ಹೊತ್ತುಕೊಂಡು ಬಂದ ಘಟನೆ ಮಯೂರ್ ಬಂಜ್ ಜಿಲ್ಲೆಯಲ್ಲಿ ನಡೆದಿದೆ.
ಒಡಿಶಾದ ಮಯೂರ್ ಬಂಜ್ ನಲ್ಲಿ ವಾಸವಿರುವ ರೂಪಾಯ ತುಡು ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿ ತನ್ನ ಕುಟುಂಬದೊಂದಿಗೆ 160 ಕಿಲೋಮೀಟರ್ ದೂರದಲ್ಲಿರುವ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಜೈಪುರದ ಪನಿಕೋಯಿಲಿ ಎಂಬ ಗ್ರಾಮಕ್ಕೆ 5 ತಿಂಗಳ ಹಿಂದೆ ತೆರಳಿದ್ದ. ಆದರೇ ಲಾಕ್ ಡೌನ್ ಜಾರಿಯಾದ ನಂತರ ಇಟ್ಟಿಗೆ ಕಾರ್ಖಾನೆಯ ಮಾಲಿಕರು ಕೆಲಸ ನಿಲ್ಲಿಸಿದ್ದು ಮಾತ್ರವಲ್ಲದೆ ಬಾಕಿ ಹಣವನ್ನು ಕೊಡಲು ನಿರಾಕರಿಸಿದರು.
ಹಣವೂ ಇಲ್ಲದೆ, ಒಪ್ಪತ್ತಿನ ಊಟಕ್ಕೂ ಪರದಾಡಿದ ತುಡು ಕುಟುಂಬ ಲಾಕ್‌ಡೌನ್ ಕಾರಣದಿಂದ ತಮ್ಮ ಮನೆಗೂ ಹಿಂದಿರುಗಲಾಗಿರಲಿಲ್ಲ. ಬೇರೆ ದಾರಿ ಕಾಣದ ಈ ಕುಟುಂಬ ನಡೆದುಕೊಂಡೇ ಮನೆಗೆ ತೆರಳಲು ನಿರ್ಧರಿಸಿದರು. ಆದರೇ ತುಡುವಿಗೆ 6 ವರ್ಷದ ಮಗಳು ಹಾಗೂ 4 ವರ್ಷದ ಮತ್ತು ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದರಿಂದ ಅವರನ್ನು ಕರೆದುಕೊಂಡು ಹೋಗುವುದು ಹೇಗೆ ಎಂಬ ಪ್ರೆಶ್ನೆ ಉದ್ಭವಿಸಿತು.
ನಂತರದಲ್ಲಿ ತುಡು ಬಿದಿರಿನಿಂದ ಎರಡು ಜೋಲಿಗಳನ್ನು ಸಿದ್ದಪಡಿಸಿ ಅದರಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕುಳ್ಳಿರಿಸಿ ಹೆಗಲ ಮೇಲಿಟ್ಟುಕೊಂಡು ಸುಮಾರು 120 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ತನ್ನ ಗ್ರಾಮಕ್ಕೆ ನಡೆದುಕೊಂಡು ಬಂದಿದ್ದಾನೆ.
ನನ್ನ ಬಳಿ ಹಣವಿಲ್ಲದ್ದರಿಂದ ನಡೆದುಕೊಂಡೆ ಗ್ರಾಮಕ್ಕೆ ವಾಪಪಾಸಾಗಲು ಮಂದಾದೆವು. ಆ ಮೂಲಕ 7 ದಿನ ನಿರಂತರವಾಗಿ ಕ್ರಮಿಸಿ ಗ್ರಾಮವನ್ನು ತಲುಪಿದೆವು. ಕೆಲವೊಮ್ಮೆ ಮಕ್ಕಳನ್ನು ಬುಟ್ಟಿ ಮೇಲೆ ಹೊತ್ತುಕೊಂಡು ಸಾಗಲು ಕಷ್ಟವಾಗುತ್ತಿದ್ದವು. ಆದರೆ ನನಗೆ ಬೇರೆ ದಾರಿಯೇ ಇರಲಿಲ್ಲ ಎಂದು ತುಡು ಪ್ರತಿಕ್ರಿಯಿಸಿದ್ದಾನೆ.
ಇದೀಗ ತುಡು ಮತ್ತು ಆತನ ಕುಟುಂಬ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದಾರೆ. ಇಲ್ಲಿ ಇವರಿಗೆ ಸಮರ್ಪಕ ಅಹಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.