ಭುವನೇಶ್ವರ್: ಸುಮಾರು 9 ವರ್ಷಗಳ ಹಿಂದೆ ಕದ್ದಿದ್ದ ದೇವರ ಚಿನ್ನಾಭರಣಗಳನ್ನು ಕಳ್ಳನೊಬ್ಬ ಹಿಂದಿರುಗಿಸಿರುವ ಘಟನೆ ಒಡಿಶಾದ ಗೋಪಿನಾಥಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಮೆಲ್ಬೋರ್ನ್ ಇಂಡಿಯನ್ ಫಿಲಂ ಫೆಸ್ಟಿವಲ್ ಗೆ ಕನ್ನಡದ ಬ್ರಹ್ಮಕಮಲ
ಒಡಿಶಾದ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದ ಶ್ರೀಕೃಷ್ಣ ದೇವರ ಚಿನ್ನಾಭರಣಗಳನ್ನು ಕದ್ದಿದ್ದ ಕಳ್ಳ ಒಂಬತ್ತು ವರ್ಷಗಳ ಬಳಿಕ ಮರಳಿಸಿದ್ದು, ಆಭರಣಗಳನ್ನು ಕದ್ದ ದಿನದಿಂದ ನನಗೆ ದುಃಸ್ವಪ್ನಗಳು ಕಾಡಲಾರಂಭಿಸಿದ್ದು, ಆಭರಣಗಳನ್ನು ಕದ್ದಿರುವುದಕ್ಕೆ ಕ್ಷಮೆಯಾಚಿಸಿ ಪತ್ರವೊಂದನ್ನು ಬರೆದಿಟ್ಟಿರುವುದಾಗಿ ವರದಿ ವಿವರಿಸಿದೆ.
ಆಭರಣಗಳನ್ನು ಕದ್ದ ಕಳ್ಳ ಇತ್ತೀಚೆಗೆ ಭಗವದ್ಗೀತೆಯನ್ನು ಓದುತ್ತಿದ್ದು, ಆತನಿಗೆ ತನ್ನ ತಪ್ಪಿನ ಅರಿವಾಗಿತ್ತು ಎಂದು ವರದಿ ಹೇಳಿದೆ. ಗೋಪಿನಾಥ ದೇವಾಲಯದಲ್ಲಿನ ಶ್ರೀಕೃಷ್ಣ ಮತ್ತು ರಾಧೆಯ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಒಂಬತ್ತು ವರ್ಷಗಳ ಹಿಂದೆ ಕಳವು ಮಾಡಿದ್ದ.
“2014ರಲ್ಲಿ ನಾನು ದೇವರ ಚಿನ್ನಾಭರಣಗಳನ್ನು ಕದ್ದ ನಂತರ ಸುಮಾರು 9 ವರ್ಷಗಳ ಕಾಲ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಅಷ್ಟೇ ಅಲ್ಲ ರಾತ್ರಿ ದುಃಸ್ವಪ್ನ ಕಾಡಲಾರಂಭಿಸಿತ್ತು. ಇದರಿಂದಾಗಿ ನನ್ನ ತಪ್ಪಿನ ಅರಿವಾಗಿ ಚಿನ್ನಾಭರಣ ಹಿಂದಿರುಗಿಸುವುದಾಗಿ ಅನಾಮಿಕ ಕಳ್ಳ ಕ್ಷಮೆಯಾಚಿಸಿರುವ ಪತ್ರದಲ್ಲಿ” ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.
ತಾನು ಇತ್ತೀಚೆಗೆ ಭಗವದ್ಗೀತೆ ಓದುತ್ತಿದ್ದು, ನನಗೆ ನನ್ನ ತಪ್ಪಿನ ಅರಿವಾಗಿರುವುದಾಗಿ ಕ್ಷಮಾಪಣೆ ಪತ್ರದಲ್ಲಿ ತಿಳಿಸಿದ್ದಾನೆ. ಕದ್ದ ಚಿನ್ನಾಭರಣ ವಾಪಸ್ ಕೈಸೇರಿರುವುದಕ್ಕೆ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.