Advertisement

ಪ್ರಧಾನಿ ಮೋದಿ Vs ಅಣ್ಣ-ತಂಗಿ

02:47 PM Mar 31, 2019 | mahesh |

ಬಾಹ್ಯಾಕಾಶದಲ್ಲಿ ಕೂಡ ಈಗ “ಚೌಕಿದಾರ’ನ ಕಾವಲು: ಮೋದಿ
“ನಮ್ಮ ಸರಕಾರವು ಬಾಹ್ಯಾಕಾಶದಲ್ಲೂ “ಚೌಕಿದಾರ’ನನ್ನು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ನೀವು ಕೇವಲ ಘೋಷಣೆ ಕೂಗುವವರಿಗೆ ಮತ ಹಾಕುವ ಬದಲು, ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸರಕಾರಕ್ಕೆ ಮತ ಹಾಕಿ’ ಎಂದು ಮತದಾರರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ ಒಡಿಶಾ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಒಡಿಶಾದ ಜಯಪೋರ್‌ನಲ್ಲಿ ಮಾತನಾಡಿದ ಅವರು, “ಯಾರು ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು ಟೀಕಿಸುತ್ತಿದ್ದಾರೋ ಅವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು. ಬಾಲಾಕೋಟ್‌ ದಾಳಿ ನಡೆದ ಬಳಿಕ ಪಾಕಿಸ್ಥಾನವು ಉಗ್ರರ ಹೆಣಗಳನ್ನು ಲೆಕ್ಕ ಹಾಕುತ್ತಿದ್ದರೆ, ನಮ್ಮ ದೇಶದ ವಿಪಕ್ಷಗಳು ಸಾಕ್ಷ್ಯ ಕೇಳುತ್ತಿದ್ದವು. ಇಂಥದ್ದನ್ನು ನಾವು ಸಹಿಸುತ್ತಾ ಕೂರಬೇಕೇ’ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರದ ರ್ಯಾಲಿಯಲ್ಲಿ ಪಾಲ್ಗೊಂಡ ಮೋದಿ, “ಚೌಕಿದಾರ ಅಲರ್ಟ್‌ ಆಗಿರುವ ಕಾರಣ ಜನರು ಯಾವುದೇ ಭಯವಿಲ್ಲದೇ ಮುನ್ನಡೆಯುತ್ತಿದ್ದಾರೆ. ಎಲ್ಲರೂ ನವ ಭಾರತಕ್ಕಾಗಿ ಮತ ಚಲಾಯಿಸಬೇಕು’ ಎಂದಿದ್ದಾರೆ. ಸಿಎಂ ಕೆಸಿಆರ್‌ ಕಳೆದ ವರ್ಷ ಸಂಪುಟ ರಚನೆಗೆ ವಿಳಂಬ ಮಾಡಿದ್ದನ್ನು ಪ್ರಶ್ನಿಸಿದ ಮೋದಿ, ರಾವ್‌ ಅವರು ಜ್ಯೋತಿಷಿಗಳ ಹೇಳಿಕೆಗೆ ಕಾಯುತ್ತಿದ್ದರೇ ಎಂದು ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ. ಇನ್ನು ಆಂಧ್ರದ ಕರ್ನೂಲ್‌ನಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಟೀಕಿಸಿದ ಪ್ರಧಾನಿ, ನಾಯ್ಡುರನ್ನು ಯೂಟರ್ನ್ ಬಾಬಾ ಎಂದು ಕರೆದಿದ್ದಾರೆ.

Advertisement

ದೇಶ ವಿದೇಶ ಸುತ್ತುವವರಿಗೆ ಹಳ್ಳಿ ಕಾಣಲೇ ಇಲ್ಲವಲ್ಲ: ಪ್ರಿಯಾಂಕಾ
ಅಯೋಧ್ಯೆಯಲ್ಲಿ ಸಾರ್ವಜನಿಕರೊಂದಿಗೆ ಶುಕ್ರವಾರ ಸಂವಾದ ನಡೆಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಬಿಜೆಪಿಯನ್ನು ಶ್ರೀಮಂತರ ಪರ, ರೈತ ವಿರೋಧಿ ಹಾಗೂ ಸಶಸ್ತ್ರ ಪಡೆಗಳ ಹಿತಾಸಕ್ತಿ ವಿರೋಧಿ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿ ಕ್ಷೇತ್ರದ ಬಗ್ಗೆ ಪ್ರಸ್ತಾಪಿಸಿದ ಅವರು, “ಕಳೆದ 5 ವರ್ಷಗಳಲ್ಲಿ ದೇಶಾದ್ಯಂತ ಹಾಗೂ ವಿದೇಶಗಳನ್ನೂ ಸುತ್ತಿರುವ ಮೋದಿ ಅವರಿಗೆ ವಾರಾಣಸಿಯ ಹಳ್ಳಿಗೆ ಒಂದು ಬಾರಿಯಾದರೂ ಭೇಟಿ ನೀಡಬೇಕೆಂದು ಅನಿಸಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಮೋದಿ ನೀಡಿರುವ ಆಶ್ವಾಸನೆಯಂತೆ ನಿಮ್ಮ ಖಾತೆಗಳಿಗೆ 15 ಲಕ್ಷ ರೂ. ಜಮೆ ಆಗಿದೆಯೇ ಎಂದೂ ಕೇಳಿದ್ದಾರೆ. “ನಾನು ನೇಕಾರರ ಮನೆಗಳ ಸೋರು ತ್ತಿರುವ ಛಾವಣಿಯಲ್ಲಿ ಸತ್ಯವನ್ನು ಕಂಡಿದ್ದೇನೆ, ಸಿರಿವಂತರಿಗಷ್ಟೇ ಚೌಕಿದಾರನಿರುವುದು ಎಂದು ಹೇಳುವ ಅನ್ನದಾತನ ಕಣ್ಣಲ್ಲಿ ಸತ್ಯ ಕಂಡಿದ್ದೇನೆ. ಈ ಚುನಾವಣೆಯಲ್ಲಿ ದೇಶ ಮತ್ತು ಸಂವಿಧಾನವನ್ನು ರಕ್ಷಿಸಬೇಕಾಗಿದೆ’ ಎಂದಿದ್ದಾರೆ ಪ್ರಿಯಾಂಕಾ.

ಮೋದಿ ಸಿರಿವಂತರಿಗಾಗಿ, ನಾವು ಬಡವರಿಗಾಗಿ: ರಾಹುಲ್‌ ಗಾಂಧಿ
ಹರ್ಯಾಣದ ಯಮುನಾನಗರದಲ್ಲಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಕೇವಲ ಶ್ರೀಮಂತರನ್ನಷ್ಟೇ ರಕ್ಷಿಸುತ್ತಾರೆ ಎಂದು ಆರೋಪಿಸಿªದಾರೆ. ಬಿಜೆಪಿ ಶ್ರೀಮಂತರಿಗಾಗಿ ಕೆಲಸ ಮಾಡಿದರೆ, ಕಾಂಗ್ರೆಸ್‌ ಬಡವರು ಹಾಗೂ ದುರ್ಬಲ ವರ್ಗಗಳಿಗಾಗಿ ಕೆಲಸ ಮಾಡುತ್ತದೆ. 2019ರ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಸಮರ. ಒಂದು ಕಡೆ ಬಿಜೆಪಿ, ಆರೆಸ್ಸೆ, ನರೇಂದ್ರ ಮೋದಿ ಇದ್ದರೆ ಮತ್ತೂಂದು ಕಡೆ ಕಾಂಗ್ರೆಸ್‌ ಇದೆ ಎಂದಿದ್ದಾರೆ ರಾಹುಲ್‌.

ಪ್ರಧಾನಿ ಮೋದಿ ಅವರು 2014ರಲ್ಲಿ ನೀಡಿರುವ “15 ಲಕ್ಷ ರೂ.ಗಳ ಆಶ್ವಾಸನೆ’ಯಿಂದಲೇ ನನಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯ ಐಡಿಯಾ ಹೊಳೆಯಿತು ಎಂದು ರಾಹುಲ್‌ ಹೇಳಿದ್ದಾರೆ. ಮೋದಿ ಸುಳ್ಳು ಆಶ್ವಾಸನೆ ನೀಡಿದರು. ಆದರೆ ನಾವು ಹಾಗಲ್ಲ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ, ಶೇ.20ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.ಗಳ ಆದಾಯ ನೀಡುತ್ತೇವೆ ಎಂದಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಸುಳಿವು: ಅಮೇಠಿ ಹೊರತುಪಡಿಸಿ ಮತ್ತೂಂದು ಕ್ಷೇತ್ರದಲ್ಲಿ ರಾಹುಲ್‌ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗೆ ಸ್ವತಃ ರಾಹುಲ್‌ ಹೇಳಿಕೆಯೇ ಪುಷ್ಟಿ ನೀಡಿದೆ. ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿರುವ ರಾಹುಲ್‌ಗೆ ಈ ಬಗ್ಗೆ ಪ್ರಶ್ನಿಸಿದಾಗ ಅವರು “ಹಲವು ಪಕ್ಷಗಳ ನಾಯಕರು ಈ ಹಿಂದೆಯೂ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವಿಚಾರದ ಬಗ್ಗೆ ಸದ್ಯದಲ್ಲಿ ಪಕ್ಷವೇ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ. ಅಮೇಠಿ ನನ್ನ ಕರ್ಮಭೂಮಿ. ಅದು ಯಾವತ್ತೂ ಕರ್ಮಭೂಮಿಯಾಗಿಯೇ ಇರುತ್ತದೆ. ಇನ್ನು ಕರ್ನಾಟಕ, ಕೇರಳ, ತಮಿಳುನಾಡಿನ ಕಾರ್ಯಕರ್ತರು ಆ ರಾಜ್ಯಗಳಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿ ಎಂದಿದ್ದಾರೆ ರಾಹುಲ್‌. ಇದೇ ವೇಳೆ, ಪ್ರಿಯಾಂಕಾ ವಾದ್ರಾ ವಾರಾಣಸಿಯಲ್ಲಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆಗೆ, ಅದು ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ.

Advertisement

ಸ್ಪಷ್ಟ ಬಹುಮತ ಖಚಿತ: ಸಂದರ್ಶನದಲ್ಲಿ ಮೋದಿ
300ಕ್ಕೂ ಹೆಚ್ಚು ಸೀಟುಗಳಲ್ಲಿ ಎನ್‌ಡಿಎಗೆ ಜಯ ದೊರಕಿಸಿ ಕೊಡಲು ಜನರೇ ತೀರ್ಮಾನಿಸಿದ್ದಾರೆ. ಈ ಚುನಾವಣೆ ಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವುದು ಖಚಿತ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪ ಡಿಸಿದ್ದಾರೆ. “ರಿಪಬ್ಲಿಕ್‌ ಭಾರತ್‌’ ಸುದ್ದಿವಾಹಿನಿಗೆ ನೀಡಿದ ಸಂದ ರ್ಶನದಲ್ಲಿ ಮಾತನಾಡಿದ ಅವರು, “ಮೋದಿ ವರ್ಸಸ್‌ ಯಾರು ಎಂಬ ಪ್ರಶ್ನೆ ಈ ಬಾರಿ ಉದ್ಭವಿಸುವುದೇ ಇಲ್ಲ. ಏಕೆಂದರೆ, ಈಗ ದೇಶದ ಜನತೆ ಬಿಜೆಪಿ ಪರವಾಗಿ ನಿರ್ಧಾರ ಕೈಗೊಂಡಾಗಿದೆ. ಹಾಗಾಗಿಯೇ ಅವರು ಪರ್ಯಾಯ ಮುಖವನ್ನು ಹುಡುಕುತ್ತಲೇ ಇಲ್ಲ’ ಎಂದಿದ್ದಾರೆ.

2014ಕ್ಕೆ ಹೋಲಿಸಿದರೆ ವಿಪಕ್ಷಗಳ ಒಗ್ಗಟ್ಟು ಹೆಚ್ಚಾಗಿದೆ ಯಲ್ಲವೇ ಎಂಬ ಪ್ರಶ್ನೆಗೆ, “ಇಲ್ಲ, 2014ಕ್ಕೆ ಹೋಲಿಸಿದರೆ ಈಗ ವಿಪಕ್ಷಗಳು ಚದುರಿಹೋಗಿವೆ. ಆಂಧ್ರದಲ್ಲಾಗಲೀ, ಪಶ್ಚಿಮ ಬಂಗಾಳ ದಲ್ಲಾಗಲೀ, ಕಮ್ಯೂನಿಸ್ಟ್‌ ಪಕ್ಷಗಳಲ್ಲಾಗಲೀ ಹೊಂದಾಣಿಕೆ ಆಗಿದೆಯೇ ನೀವೇ ಹೇಳಿ’ ಎಂದು ಮರುಪ್ರಶ್ನೆ ಹಾಕಿದ್ದಾರೆ. ಇದೇ ವೇಳೆ, ಉಪಗ್ರಹ ನಿಗ್ರಹ ಕ್ಷಿಪಣಿ ಉಡಾವಣೆ ವಿಚಾರ ಪ್ರಸ್ತಾಪಿಸಿದ ಅವರು, ಉಡಾವಣೆಗೆ ಬಾಹ್ಯಾ ಕಾಶದಲ್ಲಿನ ಮುಕ್ತ ಪ್ರದೇಶದ ಲಭ್ಯತೆ ಮುಖ್ಯವಾಗುತ್ತದೆ. ಲಭ್ಯತೆಯ ಸಮಯವನ್ನು ಆಧರಿಸಿ ಈ ಪರೀಕ್ಷೆ ನಡೆಸ ಲಾಗಿದೆ ಎಂದು ತಿಳಿಸಿದ್ದಾರೆ.

ಸಂಜೋತಾ: ಜೇಟ್ಲಿ ಕಿಡಿ
2007ರ ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ನಾಲ್ವರು ಆರೋಪಿಗಳ ಖುಲಾಸೆ ವಿಚಾರವನ್ನೆತ್ತಿಕೊಂಡು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಶುಕ್ರವಾರ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಜೇಟ್ಲಿ, “ಹಿಂದಿನ ಯುಪಿಎ ಸರಕಾರವು ರಾಜಕೀಯ ಲಾಭಕ್ಕಾಗಿ ಹಿಂದೂ ಉಗ್ರವಾದ ಎಂಬ ಪದಪುಂಜವನ್ನು ಸೃಷ್ಟಿಸಿತು. ಹಿಂದೂ ಸಮುದಾಯಕ್ಕೆ ಕಳಂಕ ತಂದಿತು. ಇಂಥದ್ದು ನಡೆದಿರುವುದು ದೇಶದ ಇತಿಹಾಸದಲ್ಲೇ ಮೊದಲು. ಆಗ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಿದವರು ಈಗ ದೇವಾಲಯಗಳನ್ನು ಅಲೆದಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಅರುಣ್‌ ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿಎಂ, “ಸಂಜೋತಾ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡಿರುವುದು ಭಾರತದಲ್ಲಿ ಹಿಂದುತ್ವದ ಭಯೋತ್ಪಾದ ಕರಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ’ ಎಂದು ಹೇಳಿದೆ.

ಹಾರ್ದಿಕ್‌ ಕನಸು ಭಗ್ನ
ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಕಣಕ್ಕಿಳಿಯಬೇಕೆಂಬ ಗುಜರಾತ್‌ನ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ಅವರ ಕನಸು ಭಗ್ನವಾಗಿದೆ. 2015ರ ಗಲಭೆ ಪ್ರಕರಣದಲ್ಲಿ ತಮಗೆ ವಿಧಿಸಲಾದ ಶಿಕ್ಷೆಗೆ ತಡೆ ತರುವಂತೆ ಕೋರಿ ಅವರು ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಜಾಗೊಂಡಿದೆ.
ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅನ್ವಯವಾಗುವ ಕಾರಣ, ಹಾರ್ದಿಕ್‌ ಸ್ಪರ್ಧೆ ಕಷ್ಟಸಾಧ್ಯ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ನಾಮಪತ್ರ ಸಲ್ಲಿಸಲು ಎ. 4 ಕೊನೇ ದಿನವಾಗಿದ್ದು, ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಹಾರ್ದಿಕ್‌ಗೆ ಕೆಲವೇ ದಿನಗಳು ಬಾಕಿಯಿವೆ.

ಮುಂಬಯಿ ಉತ್ತರಕ್ಕೆ ಊರ್ಮಿಳಾ, ಸಸಾರಾಂಗೆ ಮೀರಾ ಕುಮಾರ್‌
ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಯಾದ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರಿಗೆ ಮುಂಬಯಿ ಉತ್ತರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ನಾನು ಸೋಲು-ಗೆಲುವಿನ ಉದ್ದೇಶದಿಂದ ಬಂದಿಲ್ಲ. ಕಾಂಗ್ರೆಸ್‌ನಲ್ಲೇ ಇದ್ದು ದೇಶದ ಸೇವೆ ಮಾಡಲು ಬಂದಿದ್ದೇನೆ ಎಂದು ಊರ್ಮಿಳಾ ಹೇಳಿದ್ದಾರೆ. ಇನ್ನು ಲೋಕಸಭೆ ಮಾಜಿ ಸ್ಪೀಕರ್‌ ಮೀರಾಕುಮಾರ್‌ ಅವರು ಬಿಹಾರದ ಸಸಾರಾಂನಿಂದ ಸ್ಪರ್ಧಿಸಲಿದ್ದಾರೆ.

ಜಯಪ್ರದಾ ನಿಂದನೆ: ಎಸ್ಪಿ ನಾಯಕನ ವಿರುದ್ಧ ಕೇಸ್‌
ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನಟಿ ಜಯಪ್ರದಾ ಅವರ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿರುವ ಸಮಾಜವಾದಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಫಿರೋಜ್‌ ಖಾನ್‌ ವಿರುದ್ಧ ಉತ್ತರಪ್ರದೇಶದ ಹಯಾತ್‌ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಮುನಾ ಪ್ರಸಾದ್‌ ಅವರು ತಿಳಿಸಿದ್ದಾರೆ. ಜಯಪ್ರದಾ ರಾಂಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಎಸ್‌ಪಿ ನಾಯಕ ಅಜಂ ಖಾನ್‌ ವಿರುದ್ಧ ಸೆಣಸಲಿದ್ದಾರೆ.

ಸ್ಥಾನ ಹಂಚಿಕೆ ಪ್ರಕಟಿಸಿದ ಬಿಹಾರ ಮೈತ್ರಿಕೂಟ
ಬಿಹಾರದಲ್ಲಿನ ಮಹಾಮೈತ್ರಿ ಪಕ್ಷಗಳು ಶುಕ್ರವಾರ ಸ್ಥಾನ ಹಂಚಿಕೆ ಮಾಡಿಕೊಂಡಿವೆ. ಆರ್‌ಜೆಡಿ ನಾಯಕ ತೇಜಸ್ವಿ ಈ ಘೋಷಣೆ ಮಾಡಿದ್ದಾರೆ. ಆರ್‌ಜೆಡಿ 20, ಕಾಂಗ್ರೆಸ್‌ 9, ಆರ್‌ಎಲ್‌ಎಸ್‌ಪಿ 5, ಜಿತನ್‌ ರಾಂ ಮಾಝಿ ಅವರ ಹಿಂದುಸ್ತಾನ್‌ ಅವಾಮಿ ಮೋರ್ಚಾ, ಮುಕೇಶ್‌ ಸಿನ್ಹಾರ ವಿಐಪಿಗೆ ತಲಾ 3 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

“ಚೌಕಿದಾರ್‌’ ಕಪ್‌ಗ್ಳನ್ನು ವಾಪಸ್‌ ಪಡೆದ ರೈಲ್ವೇ ಇಲಾಖೆ
ರೈಲುಗಳಲ್ಲಿ “ಮೇ ಭಿ ಚೌಕಿದಾರ್‌’ ಎಂದು ಬರೆಯಲಾದ ಕಪ್‌ಗ್ಳಲ್ಲಿ ಪ್ರಯಾಣಿಕರಿಗೆ ಚಹಾ ವಿತರಿಸುವ ಮೂಲಕ ನೀತಿ ಸಂಹಿತೆ ಉಲ್ಲಂ ಸಿರುವ ಪ್ರಕರಣ ವರದಿಯಾಗಿದೆ.

ಸಂಕಲ್ಪ್ ಪ್ರತಿಷ್ಠಾನ ಎಂಬ ಎನ್‌ಜಿಒ ವೊಂದರ ಜಾಹೀರಾತು ಎಂಬಂತೆ ಕಪ್‌ಗ್ಳಲ್ಲಿ ಮೇ ಭಿ ಚೌಕಿದಾರ್‌ ಎಂದು ಬರೆಯ ಲಾಗಿತ್ತು. ಈ ಬಗ್ಗೆ ಪ್ರಯಾಣಿಕ ರೊಬ್ಬರು ಟ್ವೀಟ್‌ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ರೈಲ್ವೇ ಇಲಾಖೆ, ಈ ಕಪ್‌ಗ್ಳನ್ನು ವಾಪಸ್‌ ಪಡೆದಿದ್ದಲ್ಲದೆ, ಗುತ್ತಿಗೆದಾರನಿಗೆ ದಂಡ ವಿಧಿಸಿರುವುದಾಗಿ ಹೇಳಿದೆ.

ಕಿಶೋರ್‌ಗೆ ಮುನಿಸು?
ಚುನಾವಣಾ ಕಾರ್ಯತಂತ್ರ ನಿಪುಣ ಎಂದೇ ಖ್ಯಾತಿ ಗಳಿಸಿರುವ ಪ್ರಶಾಂತ್‌ ಕಿಶೋರ್‌ ಅವರು ಪಕ್ಷದ ನಾಯಕರ ನಡವಳಿಕೆಯಿಂದ ನೊಂದಿದ್ದಾರೆಯೇ? ಇತ್ತೀಚೆಗೆ ಜೆಡಿಯು ಸೇರಿರುವ ಅವರು ಶುಕ್ರವಾರ ಮಾಡಿರುವ ಟ್ವೀಟ್‌ವೊಂದು ಈ ಸುಳಿವನ್ನು ನೀಡಿದೆ.
ಬಿಹಾರ ಚುನಾವಣೆಯಲ್ಲಿ ಯಾವುದೇ ವ್ಯೂಹಾತ್ಮಕ ಪಾತ್ರ ನೀಡದ್ದಕ್ಕೆ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. “ನಾನು ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿದ್ದೇನೆ. ಸದ್ಯಕ್ಕೆ ಕಲಿಯುವುದು ಮತ್ತು ಸಹಕರಿಸುವುದು ನನ್ನ ಪಾತ್ರ’ ಎನ್ನುವ ಮೂಲಕ ಪರೋಕ್ಷವಾಗಿ ಕಿಶೋರ್‌ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನಾಯರ್‌ಗೆ ಕೊಲೆ ಬೆದರಿಕೆ
ಇಸ್ರೋ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಜಿ.ಮಾಧವನ್‌ ನಾಯರ್‌ಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಬುಧವಾರ ನಾಯರ್‌ಗೆ ಪತ್ರ ವೊಂದು ಬಂದಿದ್ದು, ಅದರಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ನಾಯರ್‌ರನ್ನು ಪ್ರಶ್ನಿಸಿದರೆ, ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಹೋಲಿಕೆ ಹೆಚ್ಚಿಸಿದ್ರೆ ಎಣಿಕೆಗೆ 6 ದಿನ?
ಪ್ರತಿ ಅಸೆಂಬ್ಲಿ ಕ್ಷೇತ್ರದ ಒಂದು ಮತಗಟ್ಟೆಯ ಒಂದು ಇವಿಎಂ ಮತ್ತು ವಿವಿಪ್ಯಾಟ್‌ನಲ್ಲಿ ಮತಗಳ ಪ್ರಮಾಣ ಹೋಲಿಕೆ ಮಾಡುವಂಥ ಈಗಿನ ವಿಧಾನ ಅತ್ಯಂತ ಸೂಕ್ತವಾದದ್ದು ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಅರಿಕೆ ಮಾಡಿದೆ. ಹೋಲಿಕೆ ಪ್ರಮಾಣವನ್ನು ಹೆಚ್ಚಿಸಿದರೆ ಮತ ಎಣಿಕೆ ಪೂರ್ಣಗೊಳ್ಳಲು 6 ದಿನಗಳೇ ಬೇಕಾಗಬಹುದು ಎಂದೂ ಆಯೋಗವು ಕೋರ್ಟ್‌ಗೆ ಹೇಳಿದೆ.

ಅಪ್ಪ ಪಾರೀಕರ್‌ ಅವರ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಇನ್ನೂ ಏನನ್ನೂ ಯೋಚಿಸಿಲ್ಲ. ಅದಕ್ಕೆ ಸರಿಯಾದ ಸಮಯ ಬಂದಾಗ ಅದರ ಬಗ್ಗೆ ಯೋಚಿಸಿ, ನಿರ್ಧಾರ ತಿಳಿಸುತ್ತೇನೆ.
ಉತ್ಪಲ್‌ ಪಾರೀಕರ್‌, ಪಾರೀಕರ್‌ ಪುತ್ರ

ನನಗೆ ಶ್ರೀ ಕೃಷ್ಣನ ಜನ್ಮ ಸ್ಥಳ‌ ಮಥುರಾ ದೊಂದಿಗೆ ಅವಿನಾಭಾವ ದೈವಿಕ ಸಂಬಂಧವಿದೆ. ನಾನು ನನ್ನ ಜೀವನ ದುದ್ದಕ್ಕೂ ರಾಧಾ, ಮೀರಾ ಪಾತ್ರಗಳನ್ನು ಮಾಡಿದ್ದೇನೆ. ನನಗೆ ಈ ಕ್ಷೇತ್ರ ಮನಸ್ಸಿಗೆ ಪ್ರಿಯವಾದದ್ದು.
ಹೇಮಾಮಾಲಿನಿ, ಸಂಸದೆ

ಕೇಂದ್ರದಲ್ಲಿ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಿ, ಎಲ್ಲ ನುಸುಳು ಕೋರರನ್ನೂ ಒಧ್ದೋಡಿಸುತ್ತೇವೆ. ಹಿಂದೂ ವಲಸಿಗರಿಗೆ ಮಾತ್ರ ನಾವು ಏನೂ ಮಾಡಲ್ಲ. ಏಕೆಂದರೆ ಅವರು ನಮ್ಮ ದೇಶದ ಭಾಗ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಬಿಜೆಪಿಯವರಿಗೆ ಜನರನ್ನು ಧಾರ್ಮಿಕ ಮತ್ತು ಕೋಮುಗಳ ಹೆಸರಲ್ಲಿ ವಿಭಜಿಸುವುದು ಮಾತ್ರ ಗೊತ್ತು. ನಾವು ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಾಗಲು ಬಿಡುವುದಿಲ್ಲ.
ಪಾರ್ಥ ಚಟರ್ಜಿ, ಟಿಎಂಸಿ ನಾಯಕ

ಶಬರಿಮಲೆ ವಿವಾದವು ಕೇರಳದಲ್ಲಿ ಬಿಜೆಪಿಗೆ ಭಾರೀ ಲಾಭ ತಂದುಕೊಡ ಲಿದೆ. ಬಿಜೆಪಿಯು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ರಕ್ಷಣೆಗೆ ಬದ್ಧವಾಗಿದೆ ಎಂಬುದು ಜನರಿಗೆ ಅರ್ಥವಾಗಿದೆ.
ಕೆ. ರಾಜಶೇಖರನ್‌, ತಿರುವನಂತಪುರಂ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next