ಒಡಿಶಾದ 23 ವರ್ಷದ ಯುವಕ ಸ್ಮಿತೇಶ್ ಮೊಹಾಪಾತ್ರ ಎಂಬ ಶಿಲ್ಪಿ, ಶಿಥಿಲಾವಸ್ಥೆಯಲ್ಲಿರುವ 800 ವರ್ಷಗಳಷ್ಟು ಹಳೆಯದಾದ ಕೋನಾರ್ಕ್ ಸೂರ್ಯ ದೇಗುಲದ ಪ್ರತಿಸೃಷ್ಟಿಯಲ್ಲಿ ತೊಡಗಿದ್ದಾನೆ. ಇದರ ಹಿಂದಿನ ಪ್ರೇರಣೆ ಯಾರು, ಎಲ್ಲಿ ಇದರ ನಿರ್ಮಾಣ ನಡೆಯುತ್ತಿದೆ; ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಜ್ಜನ ಕನಸಿಗೆ ಮೊಮ್ಮಗನ ಆಸರೆ :
ಸ್ಮಿತೇಶ್ ಅಜ್ಜ ರಘುನಾಥ್ ಮೊಹಾಪಾತ್ರ ದೇಶದ ಹೆಸರಾಂತ ಶಿಲ್ಪಿ. ರಾಜ್ಯಸಭಾ ಸದಸ್ಯರೂ ಆಗಿದ್ದ ಅವರ ಶಿಲ್ಪ ಕೌಶಲ್ಯಕ್ಕೆ, ಸಂಸತ್ತಿನ ಸೆಂಟ್ರಲ್ ಹಾಲ್‌ನ ಸೂರ್ಯ ದೇವರ ವಿಗ್ರಹ, ರಾಜೀವ್ ಗಾಂಧಿ ಸಮಾಧಿಯ “ರಾಜೀವ ಲೋಚನ’ವೇ ಸಾಕ್ಷಿ. 2013ರಲ್ಲಿ ಕೋನಾರ್ಕ್ ದೇಗುಲದ ದುಃಸ್ಥಿತಿಯನ್ನು ನೋಡಿ ಮರುಗಿದ್ದ ಅವರು, ಅದರ ಮರು ನಿರ್ಮಾಣ ಮಾಡಬೇಕೆಂದೆಣಿಸಿ, ಪುರಿ ಪುಣ್ಯಕ್ಷೇತ್ರದ ಬಳಿ 100 ಎಕರೆ ಭೂಮಿ ಖರೀದಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಇದೇ ವರ್ಷ ಮೇ ತಿಂಗಳಲ್ಲಿ ಕೊರೊನಾಕ್ಕೆ ಬಲಿಯಾದರು. ಅವರ ಆಸೆಯನ್ನು ಮೊಮ್ಮಗ ಈಡೇರಿಸಲು ಮುಂದಾಗಿದ್ದಾನೆ.
ಅಂದಾಜು ವೆಚ್ಚವೆಷ್ಟು? :
2017ರಲ್ಲಿ ಲೆಕ್ಕ ಹಾಕಿದಂತೆ 300 ಕೋಟಿ ರೂ. ಅವಶ್ಯಕತೆಯಿತ್ತು. ಆದರೆ, ಸರಿದ ಕಾಲದ ಜತೆಗೆ ವೆಚ್ಚ ವೂ ಅಧಿಕವಾಗುವ ಸಾಧ್ಯತೆ ಯಿದೆ. ವಿಶ್ವದ ನಾನಾ ಭಾಗಗಳಿಂದ ಕೆಲವು ದಾನಿಗಳು ಉದಾರ ದಾನ ನೀಡುತ್ತಿ ದ್ದಾರೆಂದು ಸ್ಮಿತೇಶ್ ತಿಳಿಸಿದ್ದಾರೆ.
ಎಲ್ಲಿದೆ ದೇಗುಲ? :
ಒಡಿಶಾದ ಪುರಿ ಕ್ಷೇತ್ರ ಹಾಗೂ ಸಖೀಗೋಪಾಲ್ ಊರಿನ ನಡುವೆ ಈ ಹೊಸ ದೇಗುಲ ನಿರ್ಮಾಣವಾಗುತ್ತಿದೆ. ಕೋನಾರ್ಕ್ ದೇಗುಲದಿಂದ 30 ಕಿ.ಮೀ. ದೂರವಿರುವ ಇದರ ಹೆಸರು “ಆದಿತ್ಯ ನಾರಾಯಣ ದೇವಸ್ಥಾನ’.
ಅದೇ ಮಾದರಿಯಲ್ಲಿ ನಿರ್ಮಾಣ: ಕೋನಾರ್ಕ್ ದೇಗುಲವನ್ನು ನಿರ್ಮಿಸಲಾ ಗಿರುವ ವಾಸ್ತುಶಿಲ್ಪದ ಮಾದರಿ ಯಲ್ಲೇ ಅದರ ಪ್ರತಿಕೃತಿಯನ್ನೂ ನಿರ್ಮಿಸಲಾಗುತ್ತಿದೆ. ಮೂಲ ದೇಗುಲದಲ್ಲಿ ಬಳಸಲಾಗಿರುವ ಮರಳುಗಲ್ಲು ಹಾಗೂ ಕಪ್ಪು ಗ್ರಾನೈಟ್ ಕಲ್ಲನ್ನೇ ಇಲ್ಲೂ ಬಳಸಲಾಗಿದ್ದು ಈಗಾಗಲೇ ದೇಗುಲದ ಪಾರ್ಶ್ವ ಗೋಡೆಗಳು, ಎರಡು ದೈತ್ಯ ಚಕ್ರ ನಿರ್ಮಾಣವಾಗಿವೆ.
800 ವರ್ಷ: ಹಳೆಯದು ಈಗಿರುವ ಕೋನಾರ್ಕ್ ದೇಗುಲ
1,200 : ನಿರ್ಮಾಣದಲ್ಲಿ ತೊಡಗಿದ್ದ ಶಿಲ್ಪಿಗಳ ಸಂಖ್ಯೆ
12 ವರ್ಷಗಳು : ದೇಗುಲ ನಿರ್ಮಾಣಕ್ಕೆ ತಗುಲಿದ್ದ ಅವಧಿ