ಒಡಿಶಾ : ನದಿಯಲ್ಲಿ ಸಿಲುಕಿದ್ದ ಆನೆ ರಕ್ಷಣೆ ಕಾರ್ಯಾಚರಣೆಯ ವರದಿಗೆ ತೆರಳಿದ್ದ ಪತ್ರಕರ್ತನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಮಹಾನದಿಯ ಮುಂಡಲ್ಲಿ ಬ್ರಿಡ್ಜ್ ಬಳಿ ಆನೆಯೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಇದರ ರಕ್ಷಣೆಗೆ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ ಬೋಟ್‍ನಲ್ಲಿ ತೆರಳಿತ್ತು. ಇವರ ಜೊತೆಗೆ ಓರ್ವ ಕ್ಯಾಮರಾಮನ್ ಹಾಗೂ ಪತ್ರಕರ್ತ ಅರಿದಮ್ ದಾಸ ಸಹ ಇದ್ದರು.
ರಕ್ಷಣಾ ಕಾರ್ಯಾಚರಣೆ ವೇಳೆ ಆನೆ ದಾಳಿ ನಡೆಸಿತು. ಪರಿಣಾಮ ರಕ್ಷಣಾ ತಂಡದ ಬೋಟ್ ನೀರಿನಲ್ಲಿ ಮಗುಚಿತು. ಈ ವೇಳೆ ಅದರಲ್ಲಿದ್ದವರು ನದಿ ಪಾಲಾದರು. ದುರ್ಘಟನೆಯಲ್ಲಿ ಪತ್ರಕರ್ತ ಅರಿದಮ್ ದಾಸ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು 17 ಆನೆಗಳು ನದಿ ದಾಟಲು ಪ್ರಯತ್ನಿಸಿದ್ದವು. ಈ ವೇಳೆ ಒಂದು ಆನೆ ಮುಂಡಲ್ಲಿ ಬ್ರಿಡ್ಜ್ ಬಳಿ ಸಿಲುಕಿಕೊಂಡಿತ್ತು. ಪ್ರಾಣಾಪಯದಲ್ಲಿದ್ದ ಇದರ ರಕ್ಷಣೆಗೆ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯ ಪಡೆ ಮುಂದಾಗಿತ್ತು. ಆದರೆ, ಈ ವೇಳೆ ಅವಘಡ ನಡೆದು ಪತ್ರಕರ್ತ ಪ್ರಾಣ ಕಳೆದುಕೊಂಡಿದ್ದಾನೆ.