ಮಯೂರ್ಭಂಜ್ (ಒಡಿಶಾ) : ಕೋವಿಡ್ ಲಾಕ್ ಡೌನ್ ಜನರನ್ನು ಮನೆಯಲ್ಲೇ ಕೂರವಂತೆ ಮಾಡಿತು ಅಂದ್ರೆ ತಪ್ಪಾಗುವುದಿಲ್ಲ. ಎಷ್ಟೋ ಜನ ಕೋವಿಡ್ ಯಾವಾಗ ತೊಲಗುತ್ತೆ, ಲಾಕ್ ಡೌನ್ ಯಾವಾಗ ಮುಗಿಯುತ್ತೆ ಅಂತ ಕಾದು ಕುಳಿತಿದ್ರು. ಆದ್ರೆ ಕೆಲವು ಮಂದಿ ಇದೇ ಅವಧಿಯನ್ನು ಬಳಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದಾರೆ ಒಡಿಶಾದ ಮಯೂರ್ಭಂಜ್ ಪ್ರದೇಶದ ಈ ರೈತ.
ಒಡಿಶಾದ ಸುಶಿಲ್ ಅಗರ್ವಾಲ್ ಎಂಬ ರೈತರೊಬ್ಬರು ಸೋಲಾರ್ ಶಕ್ತಿಯನ್ನು ಬಳಕೆ ಮಾಡಿಕೊಂಡು ಚಲಿಸುವ ನಾಲ್ಕು ಚಕ್ರದ ವಾಹನವನ್ನು ಆವಿಷ್ಕರಿಸಿದ್ದಾರೆ. ಇದಕ್ಕೆ 850 ವ್ಯಾಟ್ ಸಾಮರ್ಥ್ಯವಿರುವ ಮೋಟರ್ ಮತ್ತು 100 Ah/54 ವ್ಯಾಟ್ ನ ಬ್ಯಾಟರಿಯನ್ನು ಅಳವಿಡಿಸಿದ್ದಾರೆ. ಈ ಕಾರು ಒಮ್ಮೆ ಚಾರ್ಜ್ ಆದರೆ ಬರೋಬ್ಬರಿ 300 ಕಿ.ಮೀ ಓಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಚಾರ್ಜ್ ಆಗುವುದು ಸ್ವಲ್ಪ ಹೊತ್ತು ತಡವಾಗಬಹುದು. ಈ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಬೇಕಾದರೆ 8 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆಯಂತೆ. ಇನ್ನು ಈ ಕಾರಿಗೆ ಅಳವಡಿಸಿರುವ ಬ್ಯಾಟಲಿ 10 ವರ್ಷಗಳವರೆಗೆ ಬಳಕೆಗೆ ಬರುತ್ತದೆಯಂತೆ.
ತಮ್ಮ ಆವಿಷ್ಕಾರದ ಬಗ್ಗೆ ಹೇಳಿಕೊಂಡಿರುವ ಸುಶಿಲ್ ಅಗರ್ವಾಲ್, ಲಾಕ್ ಡೌನ್ ಸಮಯದಲ್ಲಿ ನನ್ನ ಕಾರು ಅಪಘಾತವಾಯಿತು. ಇದರಿಂದ ಎಲ್ಲಿಗಾದರು ಹೋಗಬೇಕಾದರೆ ಕಷ್ಟವಾಗುತ್ತಿತ್ತು. ಈ ಕಾರಣದಿಂದ ನಾನೇ ಸ್ವತಃ ಕಾರನ್ನು ತಯಾರು ಮಾಡಲು ಮುಂದಾದೆ. ಈ ವೇಳೆ ಇಬ್ಬರು ಎಲೆಕ್ಟ್ರಿಕ್ ತಂತ್ರಜ್ಞರು ನನಗೆ ಸಹಾಯ ಮಾಡಿರುವುದಾಗಿ ಸುಶಿಲ್ ಹೇಳಿಕೊಂಡಿದ್ದಾರೆ.
ಸೋಲಾರ್ ಕಾರು ತಯಾರಿಸಲು ವರ್ಕ್ ಶಾಪ್ ಅನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದರಂತೆ. ಕಾರು ತಯಾರು ಮಾಡಲು ಮೂರು ತಿಂಗಳು ಬೇಕಾಯಿತು ಎನ್ನುವ ಸುಶಿಲ್, ಹಳೆಯ ಕಾರಿನ ಬಿಡಿ ಭಾಗಗಳನ್ನೇ ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಹೇಳಿದ್ದಾರೆ.
ಒಟ್ಟಾರೆ ಕೆಲವರಿಗೆ ಕೋವಿಡ್ ಲಾಕ್ ಡೌನ್ ಶಾಪವಾದ್ರೆ, ಇಂತಹ ಜನರಿಗೆ ವರವಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗುವುದಿಲ್ಲ.