ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಜುಲೈ 16ವರೆಗೂ ಭಾಗಶಃ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿದೆ. ಒಡಿಶಾ ಸರ್ಕಾರ ಪಾಸಿಟಿವಿಟಿ ದರದ ಪರೀಕ್ಷೆ ಆಧಾರದ ಮೇಲೆ 30 ಜಿಲ್ಲೆಗಳನ್ನು ಎ ಮತ್ತು ಬಿ ಎಂದು ವಿಂಗಡಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಆಯ್ತು…ಈಗ ಎಲ್ ಪಿಜಿ ಸಿಲಿಂಡರ್ ಬೆಲೆ 25.50 ರೂಪಾಯಿ ಹೆಚ್ಚಳ!
20 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು ಇದನ್ನು ಎ ಕೆಟಗರಿ ಎಂದು ಗುರುತಿಸಲಾಗಿದೆ. ಉಳಿದ ಹತ್ತು ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗಿದ್ದು, ಬಿ ಕೆಟಗರಿ ಎಂದು ಗುರುತಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್ ಸಿ ಮಹಾಪಾತ್ರ ಅವರು ತಿಳಿಸಿದ್ದಾರೆ.
ಎ ಕೆಟಗರಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಇಲ್ಲ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅಂಗಡಿ, ಮುಂಗಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಬಸ್ (ಸೀಟುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಅವಕಾಶವಿಲ್ಲ), ರಿಕ್ಷಾ ಮತ್ತು ಕಾರುಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ.
ಮಾರುಕಟ್ಟೆ, ಚಿಕ್ಕ ಸಲೂನ್ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಿ ಕೆಟಗರಿ ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ 2ಗಂಟೆವರೆಗೆ ಅಂಗಡಿ ತೆರೆಯಲು ಅವಕಾಶ, ಆದರೆ ಶಾಪಿಂಗ್ ಮಾಲ್, ಸ್ಪಾ, ಬ್ಯೂಟಿ ಪಾರ್ಲರ್ ತೆರೆಯಲು ಅನುಮತಿ ಇಲ್ಲ. ಬಸ್ ಸಂಚಾರಕ್ಕೆ ಅವಕಾಶ ಇಲ್ಲ. ವಾರಾಂತ್ಯದ ಲಾಕ್ ಡೌನ್ ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದೆ.