Advertisement

ಗ್ರಾಮದ ಜನರಿಗೆ ಸೇತುವೆ ನಿರ್ಮಿಸಲು ಪತ್ನಿಯ ಬಂಗಾರವನ್ನೇ ಗಿರವಿಟ್ಟ ಪತಿ.! 100 ಕುಟುಂಬಕ್ಕೆ ಆಸರೆಯಾಯಿತು ಸೇತುವೆ

04:05 PM Dec 13, 2022 | Team Udayavani |

ಭುವನೇಶ್ವರ: ಅದು 100 ಕುಟುಂಬದ ಸಣ್ಣ ಹಳ್ಳಿ. ಅಲ್ಲಿರುವ ಜನರು ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾದರೆ ನದಿ ದಾಟಿಕೊಂಡೇ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕು. ಏಕೆಂದರೆ ಆ ನದಿಗೆ ಯಾವ ಸೇತುವೆಯೂ ಇಲ್ಲ.

Advertisement

ರಾಯಗಡದ ಕಾಶಿಪುರ ಬ್ಲಾಕ್ ನ ಬಿಚ್ಲಾ ನದಿಗೆ ಸೇತುವೆ ವ್ಯವಸ್ಥೆಯಿಲ್ಲ. ಕಳೆದ ಎರಡು ಚುನಾವಣೆಯಲ್ಲಿ ಈ ಗ್ರಾಮಕ್ಕೆ ರಾಜಕಾರಣಿಗಳು ಬಂದಿದ್ದಾರೆ. ಸೇತುವೆ ಮಾಡಿಕೊಡುತ್ತೇವೆ ಎಂದು ಹಲವು ಬಾರಿ ಭರವಸೆಗಳನ್ನು ನೀಡಿದ್ದಾರೆ. ಈ ಭರವಸೆಗಳನ್ನೇ ನಂಬಿಕೊಂಡು ಗ್ರಾಮದ ಜನರು ಎರಡು ಚುನಾವಣೆ ಮುಗಿದ ಬಳಿಕವೂ ಕಾದು ಕೂತಿದ್ದಾರೆ. ಆದರೆ ಈ ಭರವಸೆ ಬರೀ ಭರವಸೆಯಾಗಿಯೇ ಉಳಿದಿತ್ತು.

ಗುಂಜಾರಾಂಪಂಜರ ಗ್ರಾಮದ ಟ್ರಕ್ ಚಾಲಕ  26 ವರ್ಷದ ರಂಜಿತ್ ನಾಯಕ್ ಹಾಗೂ ಅವರ ತಂದೆ ಕೈಲಾಸ್‌ ನಾಯಕ್‌ ಉಳಿದವರಂತೆ ಊರಿನ ಜನರು. ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿದ ರಾಜಕಾರಣಿಗಳ ಮಾತಿಗೆ ಸೆಡ್ಡು ಹೊಡೆದು ತಾವೇ ಸೇತುವೆಯನ್ನು ನಿರ್ಮಿಸಲು ಹೊರಟು ಯಶಸ್ವಿಯಾಗಿದ್ದಾರೆ.

ಕಲಹಂಡಿ ಮತ್ತು ನಬರಂಗಪುರ ಗ್ರಾಮದ ಜನರಿಗೆ ನದಿ ದಾಟಿ ಹೋಗುವುದೇ ಕಷ್ಟವಾಗುವ ಸಮಯದಲ್ಲಿ ರಂಜಿತ್‌ ನಾಯಕ್‌ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ನಿರ್ಮಿಸುವುದಾದರೆ ಮರದ ಕಂಬಗಳು ಹಾಗೂ ಬಿದಿರಿನಿಂದಲೇ ನಿರ್ಮಿಸಬೇಕೆಂದು ಯೋಜನೆ ಹಾಕಿಕೊಂಡು ಅದರ ತಯಾರಿಯನ್ನು ಮಾಡಿಕೊಳ್ಳುತ್ತಾರೆ.

ಇದೇ ವರ್ಷದ ಜೂನ್‌ ನಲ್ಲಿ ತನ್ನ ಊರಿಗೆ ಸೇತುವೆಯನ್ನು ಮಾಡಬೇಕೆಂದು ಹಗಲು ರಾತ್ರಿಯೆನ್ನದೇ ದುಡಿಯಲು ಆರಂಭಿಸುತ್ತಾರೆ. ಕೆಲಸ ಶುರುವಾದ ಕೆಲ ಸಮಯದಲ್ಲಿ ಮರದ ಕಂಬ ಹಾಗೂ ಇತರ ಸೌಲಭ್ಯಗಳ ಕೊರತೆ ಉಂಟಾಗುತ್ತದೆ. ಏನಾದರೂ ಮಾಡಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಬಾರದೆಂದು ರಂಜಿತ್‌ ನಿರ್ಧರಿಸುತ್ತಾರೆ.

Advertisement

ಬಡ ಕುಟುಂಬಕ್ಕೆ ಕಷ್ಟಕಾಲದಲ್ಲಿ ಆಸರೆಗಿದದ್ದು, ರಂಜಿತ್‌ ಅವರ ಪತ್ನಿಯ ಬಂಗಾರ ಮಾತ್ರ. ಆದರೆ ಇದನ್ನೇ ರಂಜಿತ್‌ ಅವರು ಅಡವಿಟ್ಟು ಅದರಲ್ಲಿ ಬಂದ 70,000  ರೂ.ವನ್ನು ಸೇತುವೆ ನಿರ್ಮಾಣಕ್ಕಾಗಿ ಬಳಸುತ್ತಾರೆ. ಆ 70 ಸಾವಿರ ರೂ.ನಿಂದ ಸೇತುವೆಗೆ ಬೇಕಾದ ಬಿದಿರು ಮತ್ತು ಮರದ ಕಂಬಗಳನ್ನು ಮಾರುಕಟ್ಟೆಯಿಂದ ತರಿಸಿ, ಸೇತುವೆಯನ್ನು ನಿರ್ಮಿಸುತ್ತಾರೆ.

ತಂದೆ – ಮಗ ನಿರ್ಮಾಣ ಮಾಡಿದ ಸೇತುವೆ 100 ಕುಟುಂಬಕ್ಕೆ ಆಸರೆಯಾಗಿದೆ.

ಜನ ನದಿ ದಾಟಲು ಕಷ್ಟಪಡುತ್ತಿದ್ದರು. ಕೆಲವೊಮ್ಮೆ ನದಿ ದಾಟುವಾಗ ಜನರಿಗೆ ಹಾನಿ ಆಗುತ್ತಿತ್ತು. ನದಿ ನೀರಿನ ಹರಿವು ಹೆಚ್ಚಾರುವುದರಿಂದ ಪ್ರಾಣಕ್ಕೆ ಅಪಾಯವೂ ಹೆಚ್ಚು. ಎಲ್ಲಿಯವರೆಗೆ ಎಂದರೆ ವಾಹನಗಳು ಕೂಡ ನೀರಿನ ವೇಗಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು ಎಂದು ರಂಜಿತ್‌ ನಾಯಕ್‌ ಹೇಳುತ್ತಾರೆ.

ರಾಯಗಡ ಜಿಲ್ಲಾಧಿಕಾರಿ ರಂಜಿತ್‌ ನಾಯಕ್‌ ಅವರ ಕಾರ್ಯಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಒಡಿಶಾ ಸರ್ಕಾರವು ಹಿಂದುಳಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಿಸಲು ʼಬಿಜು ಸೇತು ಯೋಜನೆʼಯನ್ನು ಹಾಕಿಕೊಂಡಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next