ಭಾರತ-ನ್ಯೂಜಿಲ್ಯಾಂಡ್ 13ನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಎದುರಾಗುವ ಸಮಯ ಬಂದಿದೆ. ರವಿವಾರ ಧರ್ಮಶಾಲಾದಲ್ಲಿ ರೋಹಿತ್ ಶರ್ಮ-ಟಾಮ್ ಲ್ಯಾಥಂ ತಂಡಗಳು ಮುಖಾಮುಖೀ ಆಗಲಿವೆ. ಇದುವರೆಗೆ ಈ ತಂಡಗಳು ಸೋಲಿನ ಮುಖವನ್ನೇ ಕಂಡಿಲ್ಲ. ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿವೆ. ಈ ಹಿನ್ನೆಲೆಯಲ್ಲಿ ಭಾರತ-ನ್ಯೂಜಿಲ್ಯಾಂಡ್ ತಂಡಗಳ ವಿಶ್ವಕಪ್ ಪಂದ್ಯಗಳತ್ತ ಒಂದು ಹಿನ್ನೋಟ.
Advertisement
9ರಲ್ಲಿ ಮೂರೇ ಗೆಲುವುವಿಶ್ವಕಪ್ನಲ್ಲಿ ಭಾರತ-ನ್ಯೂಜಿಲ್ಯಾಂಡ್ ಈವರೆಗೆ 9 ಸಲ ಎದುರಾಗಿವೆ. ನ್ಯೂಜಿಲ್ಯಾಂಡ್ ಐದರಲ್ಲಿ, ಭಾರತ ಮೂರರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ.1975ರ ಚೊಚ್ಚಲ ವಿಶ್ವಕಪ್‌ನಲ್ಲೇ ಭಾರತ-ನ್ಯೂಜಿಲ್ಯಾಂಡ್ ಎದುರಾಗಿದ್ದವು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯವನ್ನು ನ್ಯೂಜಿಲ್ಯಾಂಡ್ 4 ವಿಕೆಟ್‌ಗಳಿಂದ ಗೆದ್ದಿತ್ತು. ಗ್ಲೆನ್ ಟರ್ನರ್ ಅವರ ಶತಕ (114) ಈ ಪಂದ್ಯದ ಆಕರ್ಷಣೆ ಆಗಿತ್ತು.
1979ರ ದ್ವಿತೀಯ ವಿಶ್ವಕಪ್‌ನಲ್ಲೂ ಇತ್ತಂಡಗಳು ಒಂದೇ ಗುಂಪಿನಲ್ಲಿದ್ದವು. ಲೀಡ್ಸ್‌ನಲ್ಲಿ ನಡೆದ ಈ ಪಂದ್ಯವನ್ನು ನ್ಯೂಜಿಲ್ಯಾಂಡ್ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು.
ಮತ್ತೆ ಇತ್ತಂಡಗಳು ಎದುರಾದದ್ದು 1987ರ ಭಾರತದ ಆತಿಥ್ಯದ ಪಂದ್ಯಾವಳಿಯಲ್ಲಿ. ಇಲ್ಲಿ ಭಾರತ-ನ್ಯೂಜಿಲ್ಯಾಂಡ್ 2 ಸಲ ಮುಖಾಮುಖಿಯಾದವು. ಭಾರತ ಎರಡನ್ನೂ ಗೆದ್ದು ಸೇಡು ತೀರಿಸಿಕೊಂಡಿತು. ಎರಡೂ “ಎ’ ವಿಭಾಗದ ಲೀಗ್ ಪಂದ್ಯಗಳಾಗಿದ್ದವು. ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಭಾರತ 16 ರನ್ನುಗಳ ರೋಚಕ ಜಯ ಸಾಧಿಸಿತು. ಅಜೇಯ 72 ರನ್ ಬಾರಿಸಿದ ಕಪಿಲ್‌ದೇವ್ ಪಂದ್ಯಶ್ರೇಷ್ಠರೆನಿಸಿದರು. ದ್ವಿತೀಯ ಸುತ್ತಿನ ಪಂದ್ಯ ನಡೆದದ್ದು ನಾಗಪುರದಲ್ಲಿ. ಇದು ಭಾರತದ ಪಾಲಿನ ಸ್ಮರಣೀಯ ಪಂದ್ಯವಾಗಿತ್ತು. ಸುನೀಲ್ ಗಾವಸ್ಕರ್ ಏಕದಿನದಲ್ಲಿ ಏಕೈಕ ಶತಕ ಬಾರಿಸಿದ್ದು (ಅಜೇಯ 103), ಚೇತನ್ ಶರ್ಮ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಹೀರೋ ಎನಿಸಿದ್ದೆಲ್ಲ ಇದೇ ಪಂದ್ಯದಲ್ಲಿ. ಭಾರತ ಇಲ್ಲಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು.
Related Articles
1992 ಮತ್ತು 1999ರಲ್ಲಿ ಮತ್ತೆ ನ್ಯೂಜಿಲ್ಯಾಂಡ್ ಗೆಲುವಿನ ಲಯಕ್ಕೆ ಮರಳಿತು. 1992ರ ಪಂದ್ಯಾವಳಿ ನ್ಯೂಜಿಲ್ಯಾಂಡ್‌ನ ಸಹ ಆತಿಥ್ಯದಲ್ಲಿ ಸಾಗಿತ್ತು. ಡ್ಯುನೆಡಿನ್ ಮುಖಾಮುಖೀಯಲ್ಲಿ ಆತಿಥೇಯ ಪಡೆ 4 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತು. 1999ರ “ಸೂಪರ್ ಸಿಕ್ಸ್’ ಹಂತದ ನಾಟಿಂಗ್‌ಹ್ಯಾಮ್ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಸೋಲು ಎದುರಾಯಿತು.
Advertisement
ಕೊನೆಯ ಗೆಲುವು2003ರಲ್ಲಿ ಭಾರತ ಫೈನಲ್ ತನಕ ಪಯಣಿಸಿದಾಗ ಸೂಪರ್ ಸಿಕ್ಸ್ ಹಂತದಲ್ಲಿ ನ್ಯೂಜಿಲ್ಯಾಂಡ್ ಎದುರಾಗಿತ್ತು. ಇಲ್ಲಿ ಸೌರವ್ ಗಂಗೂಲಿ ಪಡೆ 7 ವಿಕೆಟ್‌ಗಳಿಂದ ಗೆದ್ದು ಮುನ್ನಡೆಯಿತು. ಇದು ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಒಲಿದ ಕೊನೆಯ ಜಯ. ಅನಂತರದ 3 ವಿಶ್ವಕಪ್‌ಗ್ಳಲ್ಲಿ ಇತ್ತಂಡಗಳಿಗೆ ಎದುರಾಗುವ ಅವಕಾಶ ಲಭಿಸಿರಲಿಲ್ಲ. ಕಳೆದ 2019ರ ಪಂದ್ಯಾವಳಿಯಲ್ಲಿ ಎರಡು ಸಲ ಮುಖಾಮುಖೀ ಆದವು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಲೀಗ್ ಮುಖಾಮುಖೀ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಮ್ಯಾಂಚೆಸ್ಟರ್ ಸೆಮಿಫೈನಲ್‌ನಲ್ಲಿ 18 ರನ್ ಜಯ ಸಾಧಿಸಿದ ನ್ಯೂಜಿಲ್ಯಾಂಡ್ ಸತತ 2ನೇ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಭಾರತವೀಗ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯಭೇರಿ ಮೊಳಗಿಸುವ ಕಾತರದಲ್ಲಿದೆ.