ಕೇಪ್ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಪಂದ್ಯ ಗೆಲ್ಲುವ ಮೂಲಕ ಪಾಕಿಸ್ಥಾನ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
“ನ್ಯೂಲ್ಯಾಂಡ್ಸ್’ನಲ್ಲಿ ನಡೆದ ದ್ವಿತೀಯ ಪಂದ್ಯವನ್ನು ಪಾಕ್ 81 ರನ್ನುಗಳಿಂದ ಜಯಿಸಿತು. ಮೊಹಮ್ಮದ್ ರಿಜ್ವಾನ್ ಪಡೆ 49.5 ಓವರ್ಗಳಲ್ಲಿ 329 ರನ್ನುಗಳ ಬೃಹತ್ ಮೊತ್ತ ಪೇರಿಸಿದರೆ, ದಕ್ಷಿಣ ಆಫ್ರಿಕಾ 43.1 ಓವರ್ಗಳಲ್ಲಿ 248ಕ್ಕೆ ಆಲೌಟ್ ಆಯಿತು. ಇದಕ್ಕೂ ಮುನ್ನ ಪಾಕಿಸ್ಥಾನ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಅವರದೇ ಅಂಗಳದಲ್ಲಿ 2-1ರಿಂದ ಮಣಿಸಿತ್ತು.
ಬಾಬರ್ ಆಜಂ (73), ಮೊಹಮ್ಮದ್ ರಿಜ್ವಾನ್ (80) ಮತ್ತು ಕಮ್ರಾನ್ ಗುಲಾಂ (63) ಅವರ ಅರ್ಧ ಶತಕದಿಂದ ಪಾಕಿಸ್ಥಾನಕ್ಕೆ ದೊಡ್ಡ ಮೊತ್ತ ಸಾಧ್ಯವಾಯಿತು. ಕ್ವೇನ ಮಫಪ 4 ವಿಕೆಟ್, ಮಾರ್ಕೊ ಜಾನ್ಸೆನ್ 3 ವಿಕೆಟ್ ಉರುಳಿಸಿದರೂ ಭಾರೀ ದುಬಾರಿಯಾದರು.
ಬೃಹತ್ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಸಿಡಿದು ನಿಂತದ್ದು ಹೆನ್ರಿಚ್ ಕ್ಲಾಸೆನ್ ಮಾತ್ರ. ಅವರು 74 ಎಸೆತಗಳಿಂದ 97 ರನ್ ಬಾರಿಸಿದರು (8 ಬೌಂಡರಿ, 4 ಸಿಕ್ಸರ್).
ಶಾಹೀನ್ ಅಫ್ರಿದಿ 47 ರನ್ನಿಗೆ 4 ವಿಕೆಟ್ ಉರುಳಿಸಿದರು.