Advertisement

ಐದು ಪಂದ್ಯಗಳ ಏಕದಿನ ಸರಣಿ: ಭಾರತಕ್ಕೆ ಲಂಕಾ ಸಾಟಿಯೇ?

06:20 AM Aug 20, 2017 | Team Udayavani |

ಡಂಬುಲ: ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾಕ್ಕೆ ಅವರದೇ ನೆಲದಲ್ಲಿ 3-0 ವೈಟ್‌ವಾಶ್‌ ಮಾಡಿದ ಅತ್ಯುತ್ಸಾಹದಲ್ಲಿರುವ ಟೀಮ್‌ ಇಂಡಿಯಾ ಏಕದಿನ ದಲ್ಲೂ ಇಂಥದೇ ದೊಡ್ಡ ಗೆಲುವಿನ ಫ‌ಲಿತಾಂಶದ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. 5 ಪಂದ್ಯಗಳ ಸರಣಿಯ ಮೊದಲ ಮುಖಾಮುಖೀ ರವಿವಾರ ಡಂಬುಲದ “ರಂಗಿರಿ ಅಂತಾರಾಷ್ಟ್ರೀಯ ಸ್ಟೇಡಿಯಂ’ ನಲ್ಲಿ ನಡೆಯಲಿದೆ. 

Advertisement

ಎಲ್ಲವೂ ಹಗಲು-ರಾತ್ರಿ ಪಂದ್ಯಗಳಾಗಿವೆ.ಟೆಸ್ಟ್‌ ಸರಣಿಯಲ್ಲಿ ಅತ್ಯಂತ ದುರ್ಬಲವಾಗಿ ಗೋಚರಿಸಿದ್ದ ಶ್ರೀಲಂಕಾ ತಂಡ ಭಾರತಕ್ಕೆ ಯಾವುದೇ ರೀತಿಯಲ್ಲೂ ಸಾಟಿಯಾಗಿರಲಿಲ್ಲ. ಹೀಗಾಗಿ ಪಂದ್ಯಗಳೆಲ್ಲ ಏಕಪಕ್ಷೀಯವಾಗಿ ನಡೆದು ಆಸಕ್ತಿ ಕಳೆದುಕೊಂಡದ್ದು ಸುಳ್ಳಲ್ಲ. ಏಕದಿನ ಸರಣಿಯಲ್ಲಾದರೂ ಪೈಪೋಟಿ ಕಂಡುಬಂದು ನೈಜ ರೋಮಾಂಚನ ಗರಿಗೆದರೀತೇ ಎಂಬುದು ಅಭಿಮಾನಿಗಳ ನಿರೀಕ್ಷೆ. ಇದು ಸಾಕಾರ ಗೊಳ್ಳಬೇಕಾದರೆ ಶ್ರೀಲಂಕಾ ಉತ್ತಮ ಮಟ್ಟದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.

ಎಲ್ಲರ ಗುರಿಯೂ ವಿಶ್ವಕಪ್‌
ಇದು ಕೇವಲ 5 ಪಂದ್ಯಗಳ ಸರಣಿಯಾಗಿರದೆ, 2019ರ ವಿಶ್ವಕಪ್‌ಗೆ ತಂಡದ ಒಟ್ಟು ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆಯೂ ಆಗಿರುವುದನ್ನು ಮರೆ ಯುವಂತಿಲ್ಲ. ಈ ಮೂಲಕ ಸಶಕ್ತ ವಿಶ್ವಕಪ್‌ ತಂಡ ವೊಂದನ್ನು ರೂಪಿಸುವ ಕಾರ್ಯಯೋಜನೆ ಜಾರಿಗೆ ಬರಲಿದೆ. ಭಾರತದ ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯವಾಗಿ, ನಿವೃತ್ತಿ ಹಾದಿಯಲ್ಲಿರುವ ಸೀನಿಯರ್‌ ಆಟಗಾರರ ಅನಿವಾರ್ಯತೆ ವಿಶ್ವಕಪ್‌ಗೆ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಸಾಗಲಿದೆ ಎಂದಿದ್ದಾರೆ.

ಇವರಲ್ಲಿ ಸದ್ಯ ಒಬ್ಬರಿಗೆ ಭಾರತ ತಂಡದ ಬಾಗಿಲು ಮುಚ್ಚಲಾಗಿದೆ. ಅದು ಯುವರಾಜ್‌ ಸಿಂಗ್‌. ಲಂಕಾ ಸರಣಿಗೆ ಯುವಿಯನ್ನು ಕೈಬಿಡಲಾಗಿದೆಯೆಂದರೆ ಅವರಿಗೆ ವಿಶ್ವಕಪ್‌ ಬಾಗಿಲು ಬಹುತೇಕ ಮುಚ್ಚಿದೆ ಎಂದೇ ಅರ್ಥ. ಇನ್ನುಳಿದಿರುವುದು ಕೀಪರ್‌ ಮಹೇಂದ್ರ ಸಿಂಗ್‌ ಧೋನಿ. ಈ ಮಾಜಿ ಕಪ್ತಾನನಿಗೂ ಪ್ರಸಾದ್‌ ನೇರ ಎಚ್ಚರಿಕೆ ಕೊಟ್ಟಿದ್ದಾರೆ. ಧೋನಿ ಭವಿಷ್ಯ ಈ ಸರಣಿಯಲ್ಲೇ ನಿರ್ಧಾರವಾದರೆ ಅಚ್ಚರಿ ಇಲ್ಲ.

ಇನ್ನು ಶ್ರೀಲಂಕಾ ಕತೆ. ಈ ತಂಡದಲ್ಲಿ 200ನೇ ಪಂದ್ಯ ಆಡಲಿರುವ ಮಾಲಿಂಗ ಅವರೇ ಸೀನಿಯರ್‌. ಆದ್ದರಿಂದ ವಿಶ್ವಕಪ್‌ ತಂಡದ ಆಯ್ಕೆ ಕಿರಿಯರನ್ನೇ ಅವಲಂಬಿಸಿದೆ. ಆದರೆ 2019ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಬೇಕಾದ ಇನ್ನೊಂದು ರೀತಿಯ ಒತ್ತಡ ಲಂಕೆಯ ಮೇಲಿದೆ. ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಆಡದೇ ಇರಬೇಕಾದರೆ ಭಾರತವನ್ನು ಕನಿಷ್ಠ 2 ಪಂದ್ಯಗಳಲ್ಲಿ ಸೋಲಿಸಲೇಬೇಕು! 

Advertisement

ಉಪುಲ್‌ ತರಂಗ ನೇತೃತ್ವದ ಆತಿಥೇಯ ಪಡೆ ಟೆಸ್ಟ್‌ ತಂಡಕ್ಕಿಂತ ಭಿನ್ನವಾಗಿ ಗೋಚರಿಸುತ್ತಿದೆ. ಆದರೆ ಇದು ಸಾಧನೆಯಲ್ಲೂ ಪ್ರತಿಫ‌ಲಿಸಬೇಕು. ಆದರೆ ಜಿಂಬಾಬ್ವೆ ವಿರುದ್ಧ 3-2 ಅಂತರದಿಂದ ಸರಣಿ ಸೋತವರಿಗೆ ಭಾರತದ ಸಾಮರ್ಥ್ಯವನ್ನು ಅರಗಿಸಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸದೇ ಇರದು.

ಧವನ್‌-ರೋಹಿತ್‌ ಓಪನಿಂಗ್‌
ಭಾರತದ ಆಡುವ ಬಳಗದ ಆಯ್ಕೆ ತುಸು ಸವಾಲಿನ ದ್ದಾಗಲಿದೆ. ಕಾರಣ, ಪ್ರತಿಯೊಂದು ವಿಭಾಗದಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿರುವುದು. ಇದು ಓಪನಿಂಗ್‌ನಿಂದಲೇ ಮೊದಲ್ಗೊಳ್ಳುತ್ತದೆ. ಟೆಸ್ಟ್‌ ಸರಣಿಯಲ್ಲಿ 2 ಶತಕ ಬಾರಿಸಿದ ಶಿಖರ್‌ ಧವನ್‌ ಹಾಗೂ ಟೆಸ್ಟ್‌ ಅವಕಾಶದಿಂದ ವಂಚಿತರಾದ ರೋಹಿತ್‌ ಶರ್ಮ ಏಕದಿನದ ಮೊದಲ ಆಯ್ಕೆಯ ಓಪನಿಂಗ್‌ ಜೋಡಿ. ಆದರೆ ಇನ್‌ಫಾರ್ಮ್ ಓಪನರ್‌ ಕೆ.ಎಲ್‌. ರಾಹುಲ್‌ ಅವರನ್ನೂ ಬಿಡುವ ಹಾಗಿಲ್ಲ. ಇವರಿಗೆ ಇಲ್ಲಿ 4ನೇ ಸ್ಥಾನ ಮೀಸಲಿಡಲಾಗಿದೆ. ವನ್‌ಡೌನ್‌ನಲ್ಲಿ ನಾಯಕ ಕೊಹ್ಲಿ ಇದ್ದಾರೆ. 

ಟೆಸ್ಟ್‌  ಸರಣಿ ಸೋಲನ್ನು 
ಮರೆಯಬೇಕಿದೆ: ತರಂಗ

ಟೆಸ್ಟ್‌ ಸರಣಿಯಲ್ಲಿ ಭಾರತ ವಿರುದ್ದ ಅನುಭವಸಿದ 3-0 ಸರಣಿ ಸೋಲನ್ನು ಪೂರ್ತಿಯಾಗಿ ಮರೆತು ಏಕದಿನ ಸರಣಿಯನ್ನು ಆಡಲಿಳಿಯಬೇಕಿದೆ ಎಂಬುದಾಗಿ ಶ್ರೀಲಂಕಾ ತಂಡದ ನಾಯಕ ಉಪುಲ್‌ ತರಂಗ ಹೇಳಿದ್ದಾರೆ. 

“ಭಾರತ ಕಳೆದ 3-4 ವರ್ಷಗಳಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಆದರೆ ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗುತ್ತಿದ್ದೇವೆ. ಆದರೆ ಕಳೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ನಾವು ಭಾರತವನ್ನು ಸೋಲಿಸಿದ್ದೇವೆ. ಇದನ್ನು ಯಾರೂ ಎಣಿಸಿರಲಿಲ್ಲ’ ಎಂದು ತರಂಗ ಹೇಳಿದರು.

ಟೆಸ್ಟ್‌ ಸರಣಿಯಲ್ಲಿ ಮಿಂಚಿದ ಅಶ್ವಿ‌ನ್‌, ಜಡೇಜ, ಶಮಿ ಗೈರನ್ನು ತರಂಗ ಪ್ರಸ್ತಾವಿಸಿದರು. “ಭುವನೇಶ್ವರ್‌ ಕುಮಾರ್‌ ಈಗ ಅವರ ನಂಬರ್‌ ವನ್‌ ಬೌಲರ್‌. ಆದರೆ ಭಾರತದ ಬೌಲಿಂಗನ್ನು ನಾವು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸುವುದಿಲ್ಲ. ಒಟ್ಟಾರೆ ನಮ್ಮ ಮುಂದೆ ಕಠಿನ ಸವಾಲು ಇರುವುದಂತೂ ಸುಳ್ಳಲ್ಲ’ ಎಂದು ತರಂಗ ಅಭಿಪ್ರಾಯಪಟ್ಟರು.

ತಂಡಗಳು
ಭಾರತ:
ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಶಾದೂìಲ್‌ ಠಾಕೂರ್‌.

ಶ್ರೀಲಂಕಾ: ಉಪುಲ್‌ ತರಂಗ (ನಾಯಕ), ಏಂಜೆಲೊ ಮ್ಯಾಥ್ಯೂಸ್‌, ನಿರೋಷನ್‌ ಡಿಕ್ವೆಲ್ಲ, ದನುಷ್ಕ ಗುಣತಿಲಕ, ಕುಸಲ್‌ ಮೆಂಡಿಸ್‌, ಚಾಮರ ಕಪುಗೆಡರ, ಮಿಲಿಂದ ಸಿರಿವರ್ಧನ, ಮಲಿಂದ ಪುಷ್ಪಕುಮಾರ, ಅಖೀಲ ಧನಂಜಯ, ಲಕ್ಷಣ ಸಂದಕನ್‌, ತಿಸರ ಪೆರೆರ, ವನಿಂದು ಹಸರಂಗ, ಲಸಿತ ಮಾಲಿಂಗ, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೊ.

ಭಾರತ-ಶ್ರೀಲಂಕಾ ಏಕದಿನ ಅಂಕಿಅಂಶ
– ಭಾರತ-ಶ್ರೀಲಂಕಾ 1979ರ ವಿಶ್ವಕಪ್‌ ಕ್ರಿಕೆಟ್‌ನಿಂದ ಮೊದ ಲ್ಗೊಂಡು ಈವರೆಗೆ 150 ಏಕದಿನ ಪಂದ್ಯಗಳನ್ನಾಡಿವೆ. ಭಾರತ 83ರಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ 55 ಪಂದ್ಯಗಳನ್ನು ಗೆದ್ದಿದೆ. 11 ಪಂದ್ಯ ಫ‌ಲಿತಾಂಶ ಕಂಡಿಲ್ಲ. ಒಂದು ಟೈ ಆಗಿದೆ.
– ಇತ್ತಂಡಗಳ ನಡುವೆ 3 ಸಲ 400 ಪ್ಲಸ್‌ ಸ್ಕೋರ್‌ ದಾಖ ಲಾಗಿದೆ. 2009ರ ರಾಜ್‌ಕೋಟ್‌ ಪಂದ್ಯದಲ್ಲಿ ಭಾರತ 7ಕ್ಕೆ 414 ರನ್‌ ಪೇರಿಸಿದ್ದು ದಾಖಲೆ. ಇದೇ ಪಂದ್ಯದಲ್ಲಿ 8ಕ್ಕೆ 411 ರನ್‌ ಬಾರಿಸಿದ್ದು ಲಂಕೆಯ ಸರ್ವಾಧಿಕ ಮೊತ್ತವಾಗಿದೆ. 400 ರನ್ನುಗಳ 3ನೇ ದೃಷ್ಟಾಂತಕ್ಕೆ ಸಾಕ್ಷಿಯಾಗಿರುವುದು 2014ರ ಕೋಲ್ಕತಾ ಪಂದ್ಯ. ಇಲ್ಲಿ ಭಾರತ 5ಕ್ಕೆ 404 ರನ್‌ ಗಳಿಸಿತ್ತು.
– 2014ರ ಕೋಲ್ಕತಾ ಪಂದ್ಯದಲ್ಲಿ ರೋಹಿತ್‌ ಶರ್ಮ 264 ರನ್‌ ಸಿಡಿಸಿದ್ದು ಇತ್ತಂಡಗಳ ನಡುವಿನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. ಇದು ಭಾರತ-ಶ್ರೀಲಂಕಾ ನಡುವಿನ ಪಂದ್ಯ ದಲ್ಲಿ ದಾಖಲಾದ ಏಕೈಕ ದ್ವಿಶತಕ. 
– ಭಾರತದೆದುರು ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ದಾಖಲೆ ಜಯಸೂರ್ಯ ಹೆಸರಲ್ಲಿದೆ. ಅವರು 2000ದ ಶಾರ್ಜಾ ಪಂದ್ಯದಲ್ಲಿ 189 ರನ್‌ ಹೊಡೆದಿದ್ದರು.n    ಶತಕ ಸಾಧನೆಯಲ್ಲಿ ದಾಖಲೆ ನಿರ್ಮಿಸಿದ ಇತ್ತಂಡಗಳ ಕ್ರಿಕೆಟಿಗ ರೆಂದರೆ ತೆಂಡುಲ್ಕರ್‌ (8) ಮತ್ತು ಸನತ್‌ ಜಯಸೂರ್ಯ (7).
– ಇತ್ತಂಡಗಳ ನಡುವೆ ಕೇವಲ ಒಮ್ಮೆಯಷ್ಟೇ ತ್ರಿಶತಕದ ಜತೆ ಯಾಟ ದಾಖಲಾಗಿದೆ. ಈ ಹೆಗ್ಗಳಿಕೆ ಗಂಗೂಲಿ- ದ್ರಾವಿಡ್‌ ಜೋಡಿಯದ್ದಾಗಿದೆ. ಇವರು 1999ರ ವಿಶ್ವಕಪ್‌ ಪಂದ್ಯಾವಳಿಯ ಟಾಂಟನ್‌ ಮುಖಾಮುಖೀಯಲ್ಲಿ 2ನೇ ವಿಕೆಟಿಗೆ 318 ರನ್‌ ಪೇರಿಸಿದ್ದರು. ಶ್ರೀಲಂಕಾದ ದಾಖಲೆ ಅತ್ತಪಟ್ಟು-ಜಯವರ್ಧನ ಹೆಸರಲ್ಲಿದೆ. ಇವರು 2000ದ ಶಾರ್ಜಾ ಪಂದ್ಯದಲ್ಲಿ 3ನೇ ವಿಕೆಟಿಗೆ 226 ರನ್‌ ಒಟ್ಟುಗೂಡಿಸಿ ದ್ದರು.
– ಲಂಕಾ ಪರ ಮುತ್ತಯ್ಯ ಮುರಳೀಧರನ್‌ 63 ಪಂದ್ಯಗಳಿಂದ ಅತೀ ಹೆಚ್ಚು 74 ವಿಕೆಟ್‌ ಉರುಳಿಸಿದ್ದಾರೆ. ಭಾರತದ ದಾಖಲೆ ಜಹೀರ್‌ ಖಾನ್‌ ಹೆಸರಲ್ಲಿದೆ (48 ಪಂದ್ಯ, 66 ವಿಕೆಟ್‌).
– 2000ದ ಶಾರ್ಜಾ ಪಂದ್ಯದಲ್ಲಿ ಮುರಳೀಧರನ್‌ 30ಕ್ಕೆ 7 ವಿಕೆಟ್‌ ಹಾರಿಸಿದ್ದು ಇತ್ತಂಡಗಳ ನಡುವಿನ ಶ್ರೇಷ್ಠ ಬೌಲಿಂಗ್‌ ಸಾಧನೆ. ಮುರಳಿ 7 ವಿಕೆಟ್‌ ಕಿತ್ತ ಏಕೈಕ ಬೌಲರ್‌. ಭಾರತದ ದಾಖಲೆ ಆಶಿಷ್‌ ನೆಹ್ರಾ ಹೆಸರಲ್ಲಿದೆ. 2005ರ ಕೊಲಂಬೊ ಪಂದ್ಯದಲ್ಲಿ ಅವರು 59ಕ್ಕೆ 6 ವಿಕೆಟ್‌ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next