ಪರ್ತ್: ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಪಾಕಿಸ್ಥಾನ ತಂಡ ತವರಲ್ಲೇ ಆಘಾತವಿಕ್ಕಿದೆ. 22 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ರವಿವಾರ ಪರ್ತ್ನಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು 8 ವಿಕೆಟ್ಗಳಿಂದ ಗೆಲ್ಲುವ ಮೂಲಕ ಪಾಕಿಸ್ಥಾನ 2-1ರಿಂದ ಸರಣಿ ವಶಪಡಿಸಿಕೊಂಡಿತು. 2002ರಲ್ಲಿ ಪಾಕ್ ತಂಡ ಕೊನೆಯ ಸಲ ಕಾಂಗರೂ ನಾಡಿನಲ್ಲಿ ಏಕದಿನ ಸರಣಿ ಜಯಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಕ್ಕೆ ಅವರದೇ ನೆಲದಲ್ಲಿ 2 ಸಲ ಸರಣಿ ಸೋಲುಣಿಸಿದ ಏಷ್ಯಾದ ಮೊದಲ ತಂಡವೆಂಬ ಹೆಗ್ಗಳಿಕೆ ಪಾಕಿಸ್ಥಾನದ್ದಾಗಿದೆ.
ತನ್ನ ಸೀಮ್ ಬೌಲಿಂಗ್ ಆಕ್ರಮಣದ ಮೂಲಕ ಪಾಕ್ ಪಡೆ ಆಸ್ಟ್ರೇಲಿಯವನ್ನು ಕಟ್ಟಿ ಹಾಕಿತು. ಆಸೀಸ್ 31.5 ಓವರ್ಗಳಲ್ಲಿ 140ಕ್ಕೆ ಕುಸಿಯಿತು. ಪಾಕ್ 26.5 ಓವರ್ಗಳಲ್ಲಿ ಎರಡೇ ವಿಕೆಟಿಗೆ 143 ರನ್ ಬಾರಿಸಿತು.
ಭಾರತದೆದುರಿನ ಟೆಸ್ಟ್ ಸರಣಿಗೆ ಆಯ್ಕೆಯಾದ ಬಹುತೇಕ ಆಟಗಾರರಿಗೆ ಆಸ್ಟ್ರೇಲಿಯವಿಲ್ಲಿ ವಿಶ್ರಾಂತಿ ನೀಡಿತ್ತು. ಜೋಶ್ ಇಂಗ್ಲಿಸ್ ಮೊದಲ ಸಲ ತಂಡದ ನೇತೃತ್ವ ವಹಿಸಿದ್ದರು. ಪಾಕ್ ಇದರ ಭರಪೂರ ಲಾಭವೆತ್ತಿತು. ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ತಲಾ 3 ವಿಕೆಟ್, ಹ್ಯಾರಿಸ್ ರೌಫ್ 2 ವಿಕೆಟ್ ಉಡಾಯಿಸಿ ಕಾಂಗರೂ ಪಡೆಯನ್ನು ಕಟ್ಟಿಹಾಕಿದರು. 30 ರನ್ ಮಾಡಿದ ಸೀನ್ ಅಬೋಟ್ ಅವರದೇ ಸರ್ವಾಧಿಕ ಗಳಿಕೆ.
ಚೇಸಿಂಗ್ ವೇಳೆ ಸೈಮ್ ಅಯೂಬ್ (42)-ಅಬ್ದುಲ್ಲ ಶಫೀಕ್ (37) ಮೊದಲ ವಿಕೆಟಿಗೆ 84 ರನ್ ಜತೆಯಾಟ ನಿಭಾಯಿಸಿದರು. ಬಾಬರ್ ಆಜಂ 28 ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ 30 ರನ್ ಮಾಡಿ ಅಜೇಯರಾಗಿ ಉಳಿದರು. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳೆರಡೂ ಹ್ಯಾರಿಸ್ ರೌಫ್ ಪಾಲಾದವು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-31.5 ಓವರ್ಗಳಲ್ಲಿ 140 (ಅಬೋಟ್ 30, ಶಾರ್ಟ್ 22, ಅಫ್ರಿದಿ 32ಕ್ಕೆ 3, ನಸೀಮ್ ಶಾ 54ಕ್ಕೆ 3, ರೌಫ್ 24ಕ್ಕೆ 2). ಪಾಕಿಸ್ಥಾನ-26.5 ಓವರ್ಗಳಲ್ಲಿ 2 ವಿಕೆಟಿಗೆ 143 (ಅಯೂಬ್ 42, ಶಫೀಕ್ 37, ರಿಜ್ವಾನ್ ಔಟಾಗದೆ 30, ಬಾಬರ್ ಔಟಾಗದೆ 28, ಮಾರಿಸ್ 24ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಹ್ಯಾರಿಸ್ ರೌಫ್.