Advertisement

ಏಕದಿನ: ಭಾರತದ ಭೀತಿಯಲ್ಲಿ ನ್ಯೂಜಿಲ್ಯಾಂಡ್‌

09:48 AM Feb 05, 2020 | sudhir |

ಹ್ಯಾಮಿಲ್ಟನ್‌: ಟಿ20 ಸರಣಿಯಲ್ಲಿ ನ್ಯೂಜಿಲ್ಯಾಂಡನ್ನು ಅವರದೇ ನೆಲದಲ್ಲಿ ವೈಟ್‌ವಾಶ್‌ ಮಾಡಿ ಇತಿಹಾಸ ನಿರ್ಮಿಸಿದ ಭಾರತವೀಗ ಏಕದಿನದಲ್ಲೂ ಇದೇ ವೈಭವವನ್ನು ಮುಂದು ವರಿಸುವ ಯೋಜನೆಯಲ್ಲಿದೆ. ಬುಧವಾರ ಹ್ಯಾಮಿಲ್ಟನ್‌ನ “ಸೆಡ್ಡನ್‌ ಪಾರ್ಕ್‌’ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಕೊಹ್ಲಿ ಪಡೆ ಶುಭಾರಂಭದ ಕನಸು ಕಾಣುತ್ತಿದೆ.

Advertisement

ಇದು ವಿಶ್ವಕಪ್‌ ಬಳಿಕ ಭಾರತ ಆಡುತ್ತಿರುವ 3ನೇ ಏಕದಿನ ಸರಣಿ. ಹಿಂದಿನೆರಡೂ ಸರಣಿಗಳಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಭಾರತದ್ದಾಗಿತ್ತು. ವೆಸ್ಟ್‌ ಇಂಡೀಸನ್ನು ಅವರದೇ ನೆಲದಲ್ಲಿ ಮಣಿಸಿದ ಬಳಿಕ ಮೊನ್ನೆ ಮೊನ್ನೆ ಪ್ರವಾಸಿ ಆಸ್ಟ್ರೇಲಿಯಕ್ಕೂ ಆಘಾತವಿಕ್ಕಿತ್ತು. ಇನ್ನೊಂದೆಡೆ, ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ನ್ಯೂಜಿಲ್ಯಾಂಡ್‌ ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ. ಇತ್ತಂಡಗಳು ಕೊನೆಯ ಸಲ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗಿದ್ದವು. ಇದನ್ನು ವಿಲಿಯಮ್ಸನ್‌ ಪಡೆ 18 ರನ್ನುಗಳಿಂದ ಗೆದ್ದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಭಾರತದ ಮುಂದೆ ಉತ್ತಮ ಅವಕಾಶವಿದೆ.

ಇತ್ತಂಡಗಳಲ್ಲೂ ಗಾಯಾಳುಗಳು
ಎರಡೂ ತಂಡಗಳನ್ನು ಸಮಾನವಾಗಿ ಕಾಡುತ್ತಿ ರುವ ಚಿಂತೆಯೆಂದರೆ ಗಾಯಾಳು ಆಟಗಾರ ರದ್ದು. ಭಾರತ ಇನ್‌ಫಾರ್ಮ್ ಆರಂಭಕಾರ ರೋಹಿತ್‌ ಶರ್ಮ ಗೈರಿನಿಂದ ಆಘಾತಕ್ಕೆ ಸಿಲುಕಿದೆ. ಇನ್ನೊಂದೆಡೆ, ನಾಯಕ ಕೇನ್‌ ವಿಲಿಯಮ್ಸನ್‌ ಮೊದಲೆರಡು ಪಂದ್ಯಗಳಿಗೆ ಲಭ್ಯರಿಲ್ಲದಿರುವುದು ಕಿವೀಸ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜತೆಗೆ ಬೌಲ್ಟ್, ಫ‌ರ್ಗ್ಯುಸನ್‌ ಮೊದಲಾದ ಘಾತಕ ಬೌಲರ್‌ಗಳ ಸೇವೆಯೂ ಲಭಿಸುತ್ತಿಲ್ಲ.

ಇವೆಲ್ಲಕ್ಕಿಂತ ಮಿಗಿಲಾಗಿ ಟಿ20 ವೈಟ್‌ವಾಶ್‌ನಿಂದ ಕಿವೀಸ್‌ ಪಡೆ ಮಾನಸಿಕವಾಗಿ ಸಂಪೂರ್ಣ ಕುಗ್ಗಿದೆ. ಇದರಿಂದ ಹೊರಬಂದು ಭಾರತವನ್ನು ಎದುರಿಸುವುದು ಸುಲಭವಲ್ಲ. ಅಕಸ್ಮಾತ್‌ ಮೊದಲ ಪಂದ್ಯದಲ್ಲೇನಾದರೂ ಮುಗ್ಗರಿಸಿದರೆ ಕಿವೀಸ್‌ನ ಸಂಕಟ ಬಿಗಡಾಯಿಸುವುದು ಖಂಡಿತ.

ನೂತನ ಆರಂಭಿಕರು
ಈ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಮತ್ತು ಪೃಥ್ವಿ ಶಾ ಭಾರತದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಈ ಮೂಲಕ ಇಬ್ಬರೂ “ವನ್‌ಡೇ ಕ್ಯಾಪ್‌’ ಧರಿಸಲಿದ್ದಾರೆ. ಭಾರತದ ಏಕದಿನ ಇತಿಹಾಸದಲ್ಲಿ ಆರಂಭಿಕರಿಬ್ಬರು ಒಟ್ಟಿಗೇ ಪದಾರ್ಪಣೆ ಮಾಡಿದ 4ನೇ ನಿದರ್ಶನ ಇದಾಗಲಿದೆ. 1974ರಲ್ಲಿ ಇಂಗ್ಲೆಂಡ್‌ ವಿರುದ್ಧ ಸುನೀಲ್‌ ಗಾವಸ್ಕರ್‌-ಸುಧೀರ್‌ ನಾಯಕ್‌, 1976ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಪಾರ್ಥಸಾರಥಿ ಶರ್ಮ-ದಿಲೀಪ್‌ ವೆಂಗ್‌ಸರ್ಕಾರ್‌, 2016ರಲ್ಲಿ ಜಿಂಬಾಬ್ವೆ ಎದುರು ಕೆ.ಎಲ್‌. ರಾಹುಲ್‌-ಕರುಣ್‌ ನಾಯರ್‌ ಒಟ್ಟಿಗೇ ಪದಾರ್ಪಣೆ ಮಾಡಿ ಇನ್ನಿಂಗ್ಸ್‌ ಆರಂಭಿಸಿದ್ದರು.

Advertisement

ಶಾ, ಅಗರ್ವಾಲ್‌ ಓಪನಿಂಗ್‌; ಮಿಡ್ಲ್ ಆರ್ಡರ್‌ನಲ್ಲಿ ರಾಹುಲ್‌
ಭಾರತ ಈ ಪಂದ್ಯದಲ್ಲಿ ನೂತನ ಆರಂಭಿಕ ಜೋಡಿಯನ್ನು ಪ್ರಯೋಗಿಸಲಿದೆ. ಮಾಯಾಂಕ್‌ ಅಗರ್ವಾಲ್‌ ಮತ್ತು ಪೃಥ್ವಿ ಶಾ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂದು ಕ್ಯಾಪ್ಟನ್‌ ಕೊಹ್ಲಿ ತಿಳಿಸಿದರು. ಇದು ಅಗರ್ವಾಲ್‌ ಮತ್ತು ಶಾ ಇಬ್ಬರಿಗೂ ಪದಾರ್ಪಣ ಏಕದಿನ ಪಂದ್ಯ ಎಂಬುದು ವಿಶೇಷ.
ಟಿ20 ಮುಖಾಮುಖೀಯಲ್ಲಿ ಸರಣಿಶ್ರೇಷ್ಠರಾಗಿ ಮೂಡಿಬಂದ, ಎಲ್ಲ ಕ್ರಮಾಂಕಕ್ಕೂ ಸಲ್ಲುವ ಕೆ.ಎಲ್‌. ರಾಹುಲ್‌ ಇಲ್ಲಿ ಕೀಪಿಂಗ್‌ ನಡೆಸುವ ಜತೆಗೆ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ ಎಂದೂ ಕೊಹ್ಲಿ ತಿಳಿಸಿದರು. ಹೀಗಾಗಿ ರಿಷಭ್‌ ಪಂತ್‌ ಇಲ್ಲಿಯೂ ಮೂಲೆಗುಂಪಾಗುವ ಸಾಧ್ಯತೆ ನಿಚ್ಚಳವಾಗಿದೆ.

ಸರಣಿಗೂ ಮೊದಲೇ ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದರು. ಅವರ ಜತೆಗಾರ ಹಾಗೂ ಉಪನಾಯಕ ರೋಹಿತ್‌ ಅಂತಿಮ ಟಿ20 ಪಂದ್ಯದ ವೇಳೆ ಗಾಯಾಳಾಗಿ ನ್ಯೂಜಿಲ್ಯಾಂಡ್‌ ಪ್ರವಾಸದಿಂದಲೇ ಹೊರಬಿದ್ದರು. ಹೀಗಾಗಿ ಭಾರತದ ಓಪನಿಂಗ್‌ ವಿಭಾಗದಲ್ಲಿ ಬದಲಾವಣೆ ಅನಿವಾರ್ಯವಾಗಿತ್ತು. ಇವರಿಬ್ಬರು ಈ ಅವಕಾಶವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದೊಂದು ಕುತೂಹಲ.

ಚೇತರಿಸದ ವಿಲಿಯಮ್ಸನ್‌
ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಇನ್ನೂ ಚೇತರಿಸಿಕೊಂಡಿಲ್ಲ. ಟಿ20 ಸರಣಿಯ ಕೊನೆಯ 2 ಪಂದ್ಯಗಳಿಂದ ಹೊರಗುಳಿದಿದ್ದ ಅವರು, ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಜತೆಗೆ ಪ್ರಧಾನ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್, ಲಾಕಿ ಫ‌ರ್ಗ್ಯುಸನ್‌ ಸೇವೆಯಿಂದಲೂ ಕಿವೀಸ್‌ ವಂಚಿತವಾಗಿದೆ.

ವಿಲಿಯಮ್ಸನ್‌ ಗೈರಲ್ಲಿ ವಿಕೆಟ್‌ ಕೀಪರ್‌ ಟಾಮ್‌ ಲ್ಯಾಥಂ ನ್ಯೂಜಿಲ್ಯಾಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಹ್ಯಾಮಿಲ್ಟನ್‌: ಭಾರತ ಸೋತದ್ದೇ ಹೆಚ್ಚು
ಹ್ಯಾಮಿಲ್ಟನ್‌ನ “ಸೆಡ್ಡನ್‌ ಪಾರ್ಕ್‌’ನಲ್ಲಿ ಏಕದಿನಕ್ಕೆ ಚಾಲನೆ ನೀಡಿದ್ದೇ ಭಾರತ ಎಂಬುದೊಂದು ಹೆಗ್ಗಳಿಕೆ. ಭಾರತದ 1981ರ ಪ್ರವಾಸದ ವೇಳೆ ಈ ಅಂಗಳ ಏಕದಿನಕ್ಕೆ ತೆರೆದುಕೊಂಡಿತು.

ಆದರೆ ಇದು ಭಾರತದ ಪಾಲಿನ ಅದೃಷ್ಟದ ತಾಣವೇನೂ ಅಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧ ಇಲ್ಲಿ 6 ಏಕದಿನ ಪಂದ್ಯಗಳನ್ನಾಡಿರುವ ಭಾರತ ಐದರಲ್ಲಿ ಸೋಲನುಭವಿಸಿದೆ. ಏಕೈಕ ಗೆಲುವು ಒಲಿದದ್ದು 2009ರಲ್ಲಿ. ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು ಧೋನಿ ಪಡೆ 84 ರನ್ನುಗಳಿಂದ ತನ್ನದಾಗಿಸಿಕೊಂಡಿತ್ತು. ಕಿವೀಸ್‌ 5ಕ್ಕೆ 270 ರನ್‌ ಪೇರಿಸಿದರೆ, ಭಾರತ 23.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 201 ರನ್‌ ಗಳಿಸಿತ್ತು. ಸೆಹವಾಗ್‌ 74 ಎಸೆತಗಳಿಂದ ಅಜೇಯ 125 ರನ್‌ ಸಿಡಿಸಿದ್ದರು (14 ಬೌಂಡರಿ, 6 ಸಿಕ್ಸರ್‌).

ನ್ಯೂಜಿಲ್ಯಾಂಡ್‌ ಹೊರುಪಡಿಸಿ ಜಿಂಬಾಬ್ವೆ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್‌ ವಿರುದ್ಧವೂ ಭಾರತ ಇಲ್ಲಿ ಒಂದೊಂದು ಪಂದ್ಯ ಆಡಿದೆ. ಇದರಲ್ಲಿ ಗೆಲುವು ಒಲಿದದ್ದು ಜಿಂಬಾಬ್ವೆ ಮತ್ತು ಐರ್ಲೆಂಡ್‌ ವಿರುದ್ಧ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next