ಸೌತಾಂಪ್ಟನ್: ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 79 ರನ್ನುಗಳಿಂದ ಗೆದ್ದ ಇಂಗ್ಲೆಂಡ್, ಸರಣಿಯನ್ನು 1-1 ಸಮಬಲಕ್ಕೆ ತಂದಿದೆ.
“ರೋಸ್ ಬೌಲ್’ನಲ್ಲಿ ಆಡಲಾದ ಈ ಪಂದ್ಯವನ್ನು ಮಳೆಯಿಂದಾಗಿ 34 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಇಂಗ್ಲೆಂಡ್ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು 7 ವಿಕೆಟಿಗೆ 226 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 26.5 ಓವರ್‌ಗಳಲ್ಲಿ 147ಕ್ಕೆ ಕುಸಿಯಿತು. ಸರಣಿಯ ಉಳಿದೆರಡು ಪಂದ್ಯಗಳು ಓವಲ್ (ಸೆ. 13) ಮತ್ತು ಲಾರ್ಡ್ಸ್‌ನಲ್ಲಿ (ಸೆ. 15) ನಡೆಯಲಿವೆ.
ಇಂಗ್ಲೆಂಡ್ 12.1 ಓವರ್‌ಗಳಲ್ಲಿ 55 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿತ್ತು. ಆದರೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಲಿಯಮ್ ಲಿವಿಂಗ್‌ಸ್ಟೋನ್ ಅವರ ಬ್ಯಾಟಿಂಗ್ ಪರಾಕ್ರಮದಿಂದ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಲಿವಿಂಗ್‌ಸ್ಟೋನ್ 78 ಎಸೆತಗಳಿಂದ ಅಜೇಯ 95 ರನ್ ಬಾರಿಸಿದರು (9 ಬೌಂಡರಿ, 1 ಸಿಕ್ಸರ್). ಕೆಳ ಸರದಿಯ ಇತರ ಆಟಗಾರರಾದ ಜಾಸ್ ಬಟ್ಲರ್ (30), ಮೊಯಿನ್ ಅಲಿ (33), ಸ್ಯಾಮ್ ಕರನ್ (42) ಉತ್ತಮ ಹೋರಾಟ ಸಂಘಟಿಸಿ ಕುಸಿತಕ್ಕೆ ತಡೆಯಾದರು.
ಮೊದಲ ಪಂದ್ಯದಲ್ಲಿ ಭರ್ಜರಿ ಚೇಸಿಂಗ್ ನಡೆಸಿದ ಕಿವೀಸ್ ಇಲ್ಲಿ ಪೂರ್ತಿಯಾಗಿ ಮುಗ್ಗರಿಸಿತು. ಡ್ಯಾರಿಲ್ ಮಿಚೆಲ್ (57) ಮತ್ತು ವಿಲ್ ಯಂಗ್ (33) ಹೊರತುಪಡಿಸಿ ಉಳಿದವರಿಗೆ ಆಂಗ್ಲರ ಬೌಲಿಂಗ್ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-7 ವಿಕೆಟಿಗೆ 226 (ಲಿವಿಂಗ್‌ಸ್ಟೋನ್ ಔಟಾಗದೆ 95, ಸ್ಯಾಮ್ ಕರನ್ 42, ಮೊಯಿನ್ ಅಲಿ 33, ಜಾಸ್ ಬಟ್ಲರ್ 30, ಟ್ರೆಂಟ್ ಬೌಲ್ಟ್ 37ಕ್ಕೆ 3, ಟಿಮ್ ಸೌಥಿ 65ಕ್ಕೆ 2). ನ್ಯೂಜಿಲ್ಯಾಂಡ್-26.5 ಓವರ್‌ಗಳಲ್ಲಿ 147 (ಡ್ಯಾರಿಲ್ ಮಿಚೆಲ್ 57, ವಿಲ್ ಯಂಗ್ 33, ರೀಸ್ ಟಾಪ್ಲಿ 27ಕ್ಕೆ 3, ಡೇವಿಡ್ ವಿಲ್ಲಿ 34ಕ್ಕೆ 3, ಮೊಯಿನ್ ಅಲಿ 30ಕ್ಕೆ 2).