ನವದೆಹಲಿ: ಈ ವರ್ಷ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಕೂಟವು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಪ್ರಕಟಿಸಿದೆ.
ಆದರೆ ಈ ಕೂಟದ ವೇಳಾಪಟ್ಟಿ ಮತ್ತು ಆತಿಥೇಯ ರಾಷ್ಟ್ರ ಯಾವುದೆಂದು ಇನ್ನೂ ತಿಳಿಸಿಲ್ಲ.
ಮೂಲ ನಿರ್ಧಾರದಂತೆ ಏಷ್ಯಾ ಕಪ್‌ನ ಆತಿಥ್ಯವನ್ನು ಪಾಕಿಸ್ತಾನ ವಹಿಸಬೇಕಿತ್ತು. ಆದರೆ ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಲ್ಲಿ ಆಡಲು ಉತ್ಸುಕವಾಗಿಲ್ಲ.
ಬಿಸಿಸಿಐಯ ಈ ನಿರ್ಧಾರವನ್ನು ವಿರೋಧಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಅಧಅಯಕ್ಷ ರಮೀಜ್ ರಾಜಾ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ಏಕದಿನ ವಿಶ್ವಕಪ್ ಕೂಟವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಆದರೆ ಪಿಸಿಬಿ ಆಡಳಿತಾಧಿಕಾರದಲ್ಲಿ ಬದಲಾವಣೆಯಾಗಿದ್ದು, ರಾಜಾ ಅವರ ಬದಲಿಗೆ ನಜಾಮ್ ಸೇಥಿ ಮುಖ್ಯಸ್ಥರಾಗಿದ್ದಾರೆ. ಆದ್ದರಿಂದ ಪಾಕ್ ನಿಲುವಿನಲ್ಲಿ ಬದಲಾವಣೆ ಆದರೂ ಆಗಬಹುದು.
ಆರು ತಂಡಗಳು: 2023ರ ಏಷ್ಯಾ ಕಪ್ ಆರು ತಂಡಗಳ ನಡುವೆ ನಡೆಯಲಿದ್ದು ಭಾರತವಲ್ಲದೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಅರ್ಹತಾ ತಂಡವೊಂದು ಭಾಗವಹಿಸಲಿದೆ.
ಯುಎಇಯಲ್ಲಿ ಈ ಹಿಂದೆ ನಡೆದ ಏಷ್ಯಾಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದ ಶ್ರೀಲಂಕಾ ತಂಡವು ಹಾಲಿ ಚಾಂಪಿಯನ್ ತಂಡವಾಗಿದೆ.
ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್ ಇದ್ದ ಹಿನ್ನೆಲೆಯಲ್ಲಿ ಈ ಕೂಟವು ಟಿ20 ಮಾದರಿಯಲ್ಲಿ ನಡೆದಿತ್ತು. ಮುಂದಿನ ಎರಡು ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ ಎಸಿಸಿ ಅಧ್ಯಕ್ಷ ಜಯ್ ಶಾ ಮಾತನಾಡಿ, ಎರಡು ವರ್ಷಗಳ ಋತುವಿನಲ್ಲಿ ಒಟ್ಟಾರೆ 145 ಏಕದಿನ ಮತ್ತು ಟಿ20 ಪಂದ್ಯಗಳನ್ನು ನಡೆಸಲಾಗುತ್ತದೆ ಎಂದರು.