ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದಂದು ದರ್ಶನ್ ಹೊಸ ಚಿತ್ರ ಪ್ರಾರಂಭ ಎಂಬ ಸುದ್ದಿ ಎರಡು ತಿಂಗಳಿಂದಲೇ ಇತ್ತು. ಅದಕ್ಕೆ ಸರಿಯಾಗಿ, ಆಗಸ್ಟ್ 16ರಂದು ಅಂತೂ ದರ್ಶನ್ ಅಭಿನಯದ “ಒಡೆಯ’ ಮೈಸೂರಿನಲ್ಲಿ ಸೆಟ್ಟೇರಿದೆ. ಸಂದೇಶ್ ನಾಗರಾಜ್ ಅವರ ಮನೆಯಲ್ಲೇ ಚಿತ್ರದ ಮುಹೂರ್ತ ನಡೆಯಿತು. ಹಿರಿಯ ನಟ ಅಂಬರೀಶ್, ಬಿಜೆಪಿ ಮುಖಂಡ ರಾಮಚಂದ್ರಗೌಡ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ನಂತರವೇ ಪತ್ರಿಕಾಗೋಷ್ಠಿ ಚಿತ್ರದ ಬಗ್ಗೆ ಮಾತನಾಡಿದ ದರ್ಶನ್, ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ. ಜೊತೆಗೆ ಆಕ್ಷನ್ ಸಿನಿಮಾ. ನಾನು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ ಮಾಡಿ ತುಂಬಾ ದಿನಗಳಾಗಿತ್ತು. ಸಂದೇಶ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುವುದು ತುಂಬಾ ಖುಷಿ ಕೊಡುತ್ತದೆ. ಸಂದೇಶ್ ಪ್ರೊಡಕ್ಷನ್ ಬೇರೆಯಲ್ಲ, ತೂಗುದೀಪ ಪ್ರೊಡಕ್ಷನ್ ಬೇರೆಯಲ್ಲ. ಸೆಪ್ಟೆಂಬರ್ 10ರಂದು ಚಿತ್ರೀಕರಣ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲೇ 35 ರಿಂದ 40 ದಿನಗಳ ಕಾಲ ನಡೆಯಲಿದೆ. ಬಳಿಕ ಬೆಂಗಳೂರು, ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ತಿಳಿಸಿದರು.
ಇನ್ನು ಚಿತ್ರದ ಟೈಟಲ್ ವಿವಾದದ ಬಗ್ಗೆ ಅವರ ಗಮನ ಸೆಳೆದಾಗ, “ಚಿತ್ರಕ್ಕೆ “ಒಡೆಯರ್’ ಅಂತ ನಾವು ಟೈಟಲ್ ಇಟ್ಟಿರಲಿಲ್ಲ. ಫಿಲ್ಮ್ ಚೇಂಬರ್‌ನಲ್ಲೂ ಆ ಹೆಸರನ್ನು ರಿಜಿಸ್ಟರ್ ಮಾಡಿಸಿರಲಿಲ್ಲ. ಆದರೂ ವಿವಾದ ಯಾಕೆ ಹುಟ್ಟಿಕೊಳೊ ಗೊತ್ತಿಲ್ಲ’ ಎಂದು ದರ್ಶನ್ ಹೇಳಿದರು.
ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಮಾತನಾಡಿ, “ಸಂದೇಶ್ ನಾಗರಾಜ್ ಅವರ ಬ್ಯಾನರ್‌ನಲ್ಲಿ ಅನೇಕ ಚಿತ್ರಗಳಿಗೆ ಸಹಾಯಕ
ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ದರ್ಶನ್ ಅವರ ಮೂರನೇ ಚಿತ್ರ ಇದು. ಬ್ಯಾನರ್ ಯಾವುದೇ ಆಗಲೀ, ದರ್ಶನ್ ಸಿನಿಮಾ ಮಾಡುವುದು ನನ್ನ ಭಾಗ್ಯ. ರವಿಶಂಕರ್, ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲ ಮೊದಲಾದ ಕಲಾವಿದರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ನಾಯಕ ನಟಿಯ ಹುಡುಕಾಟ ನಡೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಆಯ್ಕೆ ಅಂತಿಮಗೊಳಿಸಲಾಗುವುದು’ ಎಂದರು.
ಛಾಯಾಗ್ರಾಹಕ ಕೃಷ್ಣಕುಮಾರ್‌ಗೂ ಸಂದೇಶ್ ಪ್ರೊಡಕ್ಷನ್ಸ್ ಜೊತೆಗೆ ಹಳೆಯ ನಂಟು. “ದರ್ಶನ್ ಜತೆ ಇದು ನನ್ನ 11ನೇ ಸಿನಿಮಾ. ಸಂದೇಶ್ ನಾಗರಾಜ್ ಅವರ ಬ್ಯಾನರ್‌ನಲ್ಲಿ ಏಳೆಂಟು ಸಿನಿಮಾ ಮಾಡಿದ್ದೇನೆ. ಇದೊಂದು ರೀತಿ ಹೋಂ ಬ್ಯಾನರ್ ಇದ್ದಂತೆ. ತಮಿಳಿನ ಹಿಟ್ ಸಿನಿಮಾ ತಂದಿದ್ದೇವೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಸಹಕಾರದೊಂದಿಗೆ ಅದಕ್ಕಿಂತ ಅದ್ದೂರಿ ಸಿನಿಮಾ ಮಾಡುತ್ತೇವೆ’ ಎಂದರು.
– ಗಿರೀಶ್ ಹುಣಸೂರು