ರಬಕವಿ-ಬನಹಟ್ಟಿ : ಉತ್ತರ ಕರ್ನಾಟಕದಲ್ಲಿ ಕಿಚಡಿ ಜಾತ್ರೆ ಎಂದೇ ಪ್ರಖ್ಯಾತಿ ಪಡೆದ ಚಿಮ್ಮಡದ ಪ್ರಭುಲಿಂಗೇಶ್ವರ ಜಾತ್ರೆ ಸೆ. 28 ರಂದು ಗುರುವಾರ ನಡೆಯಲಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಣ್ಣ ಗ್ರಾಮ ಚಿಮ್ಮಡ. ಈ ಗ್ರಾಮದಲ್ಲಿ ಶತಮಾನಗಳಿಂದ ನಡೆದುಕೊಂಡ ಬಂದ ಪ್ರಭುಲಿಂಗ (12ನೇಶತಮಾನದ ಅಲ್ಲಮ ಪ್ರಭುದೇವ) ದೇವರ ಜಾತ್ರೆ ಅನಂತನ ಹುಣ್ಣಿಮೆಯ ಮುನ್ನ ಜರುಗುತ್ತಾ ಬರುತ್ತಿದೆ. ಜಾತ್ರೆಯ ಅಂಗವಾಗಿ ನೂರಾರು ಒಲೆಗಳನ್ನು ನಿರ್ಮಿಸಿ, ನೂರಾರು ಕೊಳಗ, ಭಾರಿ ಗಾತ್ರದ ಪಾತ್ರೆಗಳಲ್ಲಿ ಅಡುಗೆ ತಯಾರಿಸುತ್ತಾರೆ. ಅನ್ನ ಹಾಗೂ ಬೇಳೆಯ ಸಾಂಬಾರ ಪ್ರತ್ಯೇಕವಾಗಿ ತಯಾರಿಸಿದ ನಂತರ, ಅನ್ನ ಮತ್ತು ಸಾಂಬಾರ ಬೆರೆಸಿ ಕಿಚಡಿ ಎಂಬ ಹೆಸರಿನ ವಿಶಿಷ್ಟ ಪ್ರಸಾದ ತಯಾರಿಸುತ್ತಾರೆ. ವಿಶಿಷ್ಟ ಸ್ವಾದದಿಂದ ಕೂಡಿರುವ ಕಾರಣಕ್ಕೆ ಹಾಗೂ ಈ ಪ್ರಸಾದ ಸೇವಿಸಿದರೆ ರೋಗ ಬರುವುದಿಲ್ಲ, ರೋಗ ಬಂದರೂ ಬೇಗ ವಾಸಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಜಾತ್ರೆಗೆ ಸುತ್ತಮುತ್ತಲೀನ ಲಕ್ಷಾಂತರ ಜನ ಆಗಮಿಸಿ ಗದ್ದಲದ ನಡುವೆಯೂ ಪ್ರಭುದೇವರ ದರ್ಶನ ಪಡೆದು ಕಿಚಡಿ ಪ್ರಸಾದ ಸೇವಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಪ್ರಮಾಣ ಹೆಚ್ಚುತ್ತಲೆ ಬರುತ್ತಿದೆ. ಒಂದೇ ದಿನ ನಡೆಯುವ ಜಾತ್ರೆ ಈ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು.
ಹಿನ್ನೆಲೆ: 12ನೇ ಶತಮಾನದ ವಚನಕಾರರಲ್ಲಿ ಪ್ರಮುಖರಾದ ಅಲ್ಲಮಪ್ರಭು ಶರಣರು ಈ ಗ್ರಾಮಕ್ಕೆ ಬಂದಿದ್ದಾಗ ಮಾಯೆ ಅವರನ್ನು ಕಾಡಿದಳು. ಈ ಮಾಯೆಯ ಕಾಟದಿಂದ ತಪ್ಪಿಸಿಕೊಳ್ಳಲು ಪ್ರಭುದೇವರು ಗ್ರಾಮದ ಹೊರ ವಲಯದಲ್ಲಿರುವ ಬೆಟ್ಟಕ್ಕೆ ಹೋಗಿ ನೆಲೆಸಿದ್ದರು ಹಾಗೂ ಅವರು ಕಿಚಡಿ ಪ್ರಸಾದ ಸೇವಿಸಿದ್ದರು. ತಾವು ಸೇವಿಸಿದ ಪ್ರಸಾದವನ್ನೇ ಭಕ್ತರಿಗೆ ವಿತರಿಸಿದ್ದರು ಎಂಬುದು ಗ್ರಾಮಸ್ಥರ ನಂಬಿಕೆಯೇ ಕಿಚಡಿ ಜಾತ್ರೆಯ ಆಚರಣೆಗೆ ಕಾರಣ. ಈ ನಂಬಿಕೆಯೇ ಪ್ರತಿ ವರ್ಷ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಲು ಜಾತ್ರೆಗೆ ಆಗಮಿಸುವುದು ವಿಶೇಷ. ಹೀಗಾಗಿ ಗ್ರಾಮದಲ್ಲಿ ಹಾಗೂ ಬೆಟ್ಟದಲ್ಲಿ ಪ್ರಭುಲಿಂಗದೇವರ ಹೆಸರಿನಲ್ಲಿ ಎರಡು ದೇವಸ್ಥಾನಗಳಿವೆ. ಬೆಟ್ಟದ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಜಾತ್ರೆಯ ನುಚ್ಚಿನ ಪ್ರಸಾದದ ಕುರಿತು ಭಕ್ತರಲ್ಲಿ ವಿಚಿತ್ರ ನಂಬಿಕೆ ಇರುವ ಕಾರಣಕ್ಕೆ ಜಾತ್ರೆಗೆ ಬರಲಾಗದೆ ಮನೆಯಲ್ಲಿರುವ ಜನರಿಗೆ ಜಾತ್ರೆಗೆ ಬಂದವರು ಪ್ರಸಾದ ಕಟ್ಟಿಕೊಂಡು ಹೋಗುವುದು ವಾಡಿಕೆ.
ಇಂತಹ ವಿಶೇಷ ಹಾಗೂ ಅಪರೂಪದ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
-ಕಿರಣ ಶ್ರೀಶೈಲ ಆಳಗಿ