Advertisement

ಸಾಗರ ಜಿಗಿದು ಲಂಕೆಯ ದಹಿಸುತಾ…

10:20 AM Feb 23, 2020 | Lakshmi GovindaRaj |

ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು ಹೇಗೆ? ಯಾರು ಅದಕ್ಕೆ ಸಮರ್ಥರು? ಆಗ ಜಾಂಬವಂತ, ಹನುಮನ ಮಹಿಮೆಯನ್ನು ಸ್ತುತಿಸಿ, ಆತನ ಶಕ್ತಿಯ ಅರಿವನ್ನು ಮಾಡಿಸಿದ. ಹೀಗೆ, ಮಹಾವೀರ ಹನುಮ ಸಮುದ್ರಲಂಘನಕ್ಕೆ ಸಿದ್ಧನಾದ. ತನ್ನ ಆಕಾರವನ್ನು ಬೇಕಂತೆ ಹಿಗ್ಗಿಸಿ, ಕುಗ್ಗಿಸಿಬಲ್ಲ ಅಪೂರ್ವ ಸಿದ್ಧಿ ಹನುಮನಿಗಿತ್ತು.

Advertisement

ಅದನ್ನು ಬಳಸಿ, ಬೃಹತ್‌ ರೂಪ ತಾಳಿ ಆತ ಸಮುದ್ರಲಂಘನ ಮಾಡಿದ. ಅಂದು ಲಂಕೆ, ರಾಕ್ಷಸ, ಯಕ್ಷ ಮತ್ತು ನಾಗಾಗಳ ವಾಸಸ್ಥಾನ. ನಾಗಾಗಳ ಮಾತೆ ಸುರಸಾದೇವಿ. ಆಕೆ ಲಂಕೆಯನ್ನು ಪ್ರವೇಶಿಸುವ ಮೊದಲು ಹನುಮನ ಬಲ ಮತ್ತು ಬುದ್ಧಿಯನ್ನು ಪರೀಕ್ಷಿಸುತ್ತಾಳೆ. ಅದನ್ನು ಗೆದ್ದ ಹನುಮ ಲಂಕೆಯ ಒಳ ಹೊಕ್ಕುತ್ತಾನೆ. ಹೀಗೆ ಹನುಮ ಪರೀಕ್ಷೆಗೆ ಒಳಗಾದ ಸ್ಥಳ, ನಾಗದೀಪ. ಇದು ಜಾಫಾ°ದಿಂದ 35 ಕಿ.ಮೀ. ದೂರದಲ್ಲಿರುವ ಪುಟ್ಟ ದ್ವೀಪ.

ಲಂಕೆಗೆ ಬೆಂಕಿ ಇಡುವ ಹೊತ್ತು: ಲಂಕೆಯಲ್ಲಿ ಎಲ್ಲೆಡೆ ಹಾರಾಡಿದ ಹನುಮನಿಗೆ, ಅಶೋಕವನದಲ್ಲಿ ಶೋಕತಪ್ತಳಾಗಿದ್ದ ಸೀತೆ ಕೊನೆಗೂ ಕಣ್ಣಿಗೆ ಬಿದ್ದಳು. ಸೀತೆಗೆ, ರಾಮನ ಮುದ್ರೆಯುಂಗುರ ನೀಡಿ ಆತ ಬರುವನೆಂಬ ಭರವಸೆ ನೀಡಿದ. ಸಾಮಾನ್ಯ ಕಪಿ ಎಂದು ಭಾವಿಸಿ, ರಾವಣ ಅವನನ್ನು ಬಂಧಿಸಿದ. ಅಲ್ಲಿ ಹನುಮನ ಬಾಲಕ್ಕೆ ಬೆಂಕಿ ಹಚ್ಚಲಾಯಿತು.

ಬೆಂಕಿ ಇಟ್ಟ ಜಾಗದಲ್ಲಿ ಈಗ…: ಈ ಸದವಕಾಶ ಬಳಸಿಕೊಂಡ ಹನುಮ, ಲಂಕೆಯಲ್ಲೆಲ್ಲಾ ಜಿಗಿದ, ನೆಗೆದ. ಲಂಕಾ ನಗರವನ್ನು ಸುಟ್ಟು ಬೂದಿ ಮಾಡಿದ. ಹಾಗೆ ಆತ ಸುಟ್ಟ ಜಾಗಗಳಲ್ಲಿ ರಾವಣನ ವಿಮಾನಗಳು ನಿಲ್ಲುವ ನಿಲ್ದಾಣವೂ ಸೇರಿತ್ತು. ಅವುಗಳನ್ನು ಸುಟ್ಟು ಅವು ಹಾರದಂತೆ ಹಾನಿಮಾಡುವ ಗುರಿ ಇದ್ದ ಹನುಮ ಅದರಲ್ಲಿ ಯಶಸ್ವಿಯೂ ಆದ. ಆ ಜಾಗವೇ ಉಸ್ಸಾಂಗೋಡ. ಸಮುದ್ರಕ್ಕೆ ಅತ್ಯಂತ ಹತ್ತಿರದಲ್ಲಿದ್ದೂ ಬೇರೆಲ್ಲೂ ಕಾಣದ,

ಸುಟ್ಟ ಹಾಗೆ ಕಾಣುವ, ಕೆಂಪು ಮಿಶ್ರಿತ ಮಣ್ಣು ಹೊಂದಿರುವ ಈ ಬಯಲು ಪ್ರದೇಶವಿದು. ಇವತ್ತಿಗೂ ಇಲ್ಲಿ ಯಾವುದೇ ಮರಗಳು ಬೆಳೆಯುವುದಿಲ್ಲ. ಬರೀ ಕುರುಚಲು ಗಿಡಗಳನ್ನಷ್ಟೇ ಇಲ್ಲಿ ಕಾಣಬಹುದು. “ದೈವಶಕ್ತಿಯ ಹನುಮ ಸುಟ್ಟ ಕಾರಣ ಇದು ಹೀಗಾಗಿದೆ’ ಎನ್ನುವುದು ಆಸ್ತಿಕರ ವಾದವಾದರೆ, “ಉಲ್ಕಾಶಿಲೆ ಅಪ್ಪಳಿಸಿರಬಹುದು’ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಉಸ್ಸಾಂಗೋಡ, ಶ್ರೀಲಂಕಾದ ದಕ್ಷಿಣ ಭಾಗದಲ್ಲಿರುವ ಹಂಬಂಟೋಟ ಜಿಲ್ಲೆಯಲ್ಲಿದೆ.

Advertisement

ಬೆಟ್ಟದ ಮೇಲೆ ಹನುಮನ ವಿರಾಮ: ಅಂತೂ ಹನುಮ ಬಂದ ಕಾರ್ಯ ಯಶಸ್ವಿಯಾಗಿ ನೆರವೇರಿತ್ತು. ಸೀತೆಯನ್ನು ಅಶೋಕವನದಲ್ಲಿ ಕಂಡು ರಾಮ ಮುದ್ರಿಕೆ ನೀಡಿ, ಆಕೆ ಪ್ರತಿಯಾಗಿ ಕೊಟ್ಟ ಚೂಡಾಮಣಿಯನ್ನು ತೆಗೆದುಕೊಂಡ. ರಾವಣನಿಗೆ ತನ್ನ ಶಕ್ತಿಯ ಪರಿಚಯಿಸಿದ್ದ. ಇನ್ನು ತಾಯ್ನಾಡಿಗೆ ಮರಳಿ ಶ್ರೀರಾಮನಿಗೆ ಸೀತೆಯ ಸುದ್ದಿ ಮುಟ್ಟಿಸಬೇಕಿತ್ತು.

ಎಂಥ ಶಕ್ತಿವಂತನಾದರೂ ಇಷ್ಟೆಲ್ಲಾ ಮಾಡಿದ ನಂತರ ಒಂದಿಷ್ಟು ವಿಶ್ರಾಂತಿ ಬೇಡವೇ? ಹಾಗೆ ಮರಳುವಾಗ ವಿರಮಿಸಿದ ಜಾಗ, ಬೆಟ್ಟವೊಂದರ ತುತ್ತತುದಿಯ ಚಿಕ್ಕ, ಸಮತಟ್ಟಾದ ಕಲ್ಲುಬಂಡೆ. ಅದೇ ಮಣಿ ಕುತ್ತುಟರ್‌. ಈಗಿಲ್ಲಿ ರಾಮ, ಸೀತೆ, ಹನುಮರ ದೇಗುಲ ಕಟ್ಟಲಾಗಿದೆ. ನುವಾರಾ ಎಲಿಯಾದಿಂದ ಸ್ವಲ್ಪ ದೂರದಲ್ಲಿರುವ ಲಬೂಕೆಲ್ಲಿ ಚಹಾ ತೋಟದಲ್ಲಿ ಈ ಬಂಡೆಯಿದೆ.

ಹನುಮನ ಮೇಲೆ ಲಂಕನ್ನರಿಗೇಕೆ ಕೋಪ?: ಹನುಮನನ್ನು ಅಂಜನಿ ಪುತ್ರ “ಆಂಜನೇಯರ್‌’ ಎಂದು ಶ್ರೀಲಂಕೆಯಲ್ಲಿ ಪೂಜಿಸಲಾಗುತ್ತದೆ. ಆದರೂ ಸಿಂಹಳೀಯರಲ್ಲಿ ಹನುಮನ ಬಗ್ಗೆ ಸಣ್ಣ ಅಸಮಾಧಾನವೂ ಇದೆ. ತಮ್ಮ ದೊರೆ ರಾವಣ, ಸ್ತ್ರೀಯರ ಗೌರವಕ್ಕೆ ಧಕ್ಕೆ ತರಬಾರದು; ಹಾಗೆ ಮಾಡಿದರೆ ಸುಮ್ಮನೇ ಬಿಡುವುದಿಲ್ಲ ಎಂದು ತಿಳಿಸಲು ಮಾಡಿದ ಕೆಲಸ ಸೀತಾಪಹರಣ. ಅದು ಯಾವುದೇ ರಾಜ ಮಾಡುವ ಕೆಲಸ. ಹೀಗಿರುವಾಗ, ಎಲ್ಲಿಂದಲೋ ಹಾರಿ ಬಂದ ಹನುಮ ಲಂಕೆಯನ್ನು ಸುಟ್ಟ ಎಂಬ ಬಗ್ಗೆ ಅನೇಕರಲ್ಲಿ ಸಿಟ್ಟೂ ಇದೆ.

* ಡಾ.ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next