ಬೆಂಗಳೂರು: ಜಾಹೀರಾತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ನಗರಾಭಿವೃದ್ಧಿ ಇಲಾಖೆಯು ನಿಯಮ ಬಾಹಿರವಾಗಿ ತಲೆಯೆತ್ತಿರುವ ಸಾವಿರಾರು ಕಟ್ಟಡಗಳನ್ನೂ “ಅಧಿಕೃತ’ಗೊಳಿಸಲು ಹೊರಟಿದೆ! ಹೌದು, ಯಾವೊಂದು ಕಟ್ಟಡದ ಮೇಲೆ ಜಾಹೀರಾತುಗಳನ್ನು ಅಳವಡಿಸಲು ಸ್ಥಳೀಯ ಸಂಸ್ಥೆಯು ಅನುಮತಿ ನೀಡಬೇಕಾದರೆ, ಆ ಕಟ್ಟಡವು “ಸ್ವಾಧೀನಾನುಭವ ಪತ್ರ’ (ಓಸಿ) ಹೊಂದಿರುವುದು ಕಡ್ಡಾಯ. ಇದು ದೇಶಾದ್ಯಂತ ಇರುವ ಜಾಹೀರಾತು ನಿಯಮ. ಆದರೆ, ನಗರಾಭಿವೃದ್ಧಿ ಇಲಾಖೆ ರೂಪಿಸಿರುವ “ಬಿಬಿಎಂಪಿ ಜಾಹೀರಾತು ನಿಯಮಗಳು-2019′ ಕರಡಿನಲ್ಲಿ ಈ ನಿಯಮವನ್ನೇ ತೆಗೆದು ಹಾಕಲಾಗಿದೆ. ತಿದ್ದುಪಡಿ ಮಾಡಲಾದ ಈ ಕರಡಿನ ಪ್ರಕಾರ ಓಸಿ ಇಲ್ಲದಿದ್ದರೂ, ಅಂತಹ ಕಟ್ಟಡಗಳ ಮೇಲೆ ಜಾಹೀರಾತು ಅಳವಡಿಕೆಗೆ ಪರೋಕ್ಷವಾಗಿ ಅನುಮತಿ ನೀಡಿದಂತಾಗಿದೆ.
ಕೆಎಂಸಿ ಕಾಯ್ದೆ ಅಧ್ಯಾಯ-1 (1ಎ)ರ ಪ್ರಕಾರ ಮನೆ, ಔಟ್‌ಹೌಸ್, ಶೆಡ್, ಗುಡಿಸಲು, ಗೋಡೆ, ವರಾಂಡ, ಸ್ಥಿರ ಪ್ಲಾಟ್‌ಫಾರಂ ಸೇರಿದಂತೆ ಯಾವುದೇ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದು ಕಡ್ಡಾಯ. ಜಾಹೀರಾತು ಸ್ಟ್ರಕ್ಚರ್‌ಗಳೂ ಈ ನಿಯಮದಡಿ ಬರುತ್ತವೆ. ಹೀಗಿರುವಾಗ, ನಿಯಮ ಬಾಹಿರ ಕಟ್ಟಡಗಳ ಮೇಲೆ ಜಾಹೀರಾತು ಅಳವಡಿಕೆಗೆ ಪಾಲಿಕೆಯು ಅನುಮತಿ ನೀಡಿದರೆ, ಸಹಜವಾಗಿ ಆ ಕಟ್ಟಡಗಳು ಕೂಡ ಅಧಿಕೃತವಾಗುತ್ತವೆ. ಅಂದಹಾಗೆ ನಗರದಲ್ಲಿ ಓಸಿ ಹೊಂದಿರದ ಸಾವಿರಾರು ಕಟ್ಟಡಗಳು ಇವೆ. ಇಂತಹದ್ದೇ ಕಗ್ಗಂಟು ನಗರದ ಮೊಬೈಲ್ ಟವರ್‌ಗಳ ಕ್ರಮಬದ್ಧಗೊಳಿಸುವಲ್ಲಿಯೂ ಎದುರಾಗಿತ್ತು. ಆಗ ಮುಲಾಜಿಲ್ಲದೆ, ಓಸಿ ಇಲ್ಲದ ಕಟ್ಟಡಗಳ ಮೇಲಿನ ಟವರ್‌ಗಳ ತೆರವಿಗೆ ಬಿಬಿಎಂಪಿ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೋಟ್ಯಂತರ ಆದಾಯ ಖೋತಾ: ಪರಿಷ್ಕೃತ ಕರಡಿನಲ್ಲಿ ಜಾಹೀರಾತು ಗಾತ್ರದ ಮೇಲೆ ದರ ನಿಗದಿ ಮಾಡಿಲ್ಲ. ಪ್ರತಿ ಹೋರ್ಡಿಂಗ್‌ಗೆ ವಾರ್ಷಿಕ 1.25 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಈ ಪರಿಷ್ಕರಣೆಯಿಂದ ಕೋಟ್ಯಂತರ ರೂ. ಆದಾಯ ಖೋತಾ ಆಗಲಿದೆ. ಈ ಹಿಂದೆ 12×6 ಮೀಟರ್ ಸೈಜಿನ ಹೋರ್ಡಿಂಗ್‌ವೊಂದಕ್ಕೆ (ಹಗಲು ಮಾತ್ರ ಕಾಣುವ) 540 ರೂ. ಇದ್ದರೆ, ಇದೇ ಗಾತ್ರದ ಹಗಲು-ರಾತ್ರಿ ಕಾಣುವ ಹೋರ್ಡಿಂಗ್‌ಗೆ 780 ರೂ. ಇದೆ. ವಾರ್ಷಿಕ ದರ ಕ್ರಮವಾಗಿ 3,41,560 ರೂ. ಹಾಗೂ 9,24,760 ರೂ. ಆಗುತ್ತದೆ.
ಅದೇ ರೀತಿ, 18×9 ಮೀಟರ್ ಸೈಜಿನ ಎಲ್‌ಇಡಿ ಹೋರ್ಡಿಂಗ್‌ಗೆ 1,560 ರೂ. ಇದ್ದು, ವಾರ್ಷಿಕ ಸುಮಾರು 30 ಲಕ್ಷ ರೂ. ಆಗುತ್ತದೆ. ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ರಸ್ತೆಗಳಿವೆ. ಈ ಪೈಕಿ ಪ್ರಮುಖ ರಸ್ತೆಗಳ ಉದ್ದ 1,500 ಕಿ.ಮೀ. ಪ್ರತಿ ಕಿ.ಮೀ. ಒಂದು ಹಿಡಿದರೂ, 1,500 ಹೋರ್ಡಿಂಗ್ ಆಗುತ್ತದೆ. ಬ್ಯುಸಿನೆಸ್ ರಸ್ತೆಗಳ ಉದ್ದ 300 ಕಿ.ಮೀ. ಇದೆ. ಇಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಠ 20 ಹೋರ್ಡಿಂಗ್‌ಗಳಿರುತ್ತವೆ. ಅಂದರೆ, ಆರು ಸಾವಿರ ಹೋರ್ಡಿಂಗ್‌ಗಳಾಗುತ್ತವೆ. ಅಂದಾಜು 8ರಿಂದ 10 ಸಾವಿರ ಜಾಹೀರಾತುಗಳನ್ನು ಕಾಣಬಹುದು. ಈ ಹೊಸ ಕರಡಿನಿಂದ ನೂರಾರು ಕೋಟಿ ರೂ. ಆದಾಯವನ್ನು ಪಾಲಿಕೆಯು ಅನಾಯಾಸವಾಗಿ ಕಳೆದುಕೊಳ್ಳುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಮಧ್ಯೆ “ಲಿಗಸಿ ಅಡ್ವಟೈಸ್‌ಮೆಂಟ್ ಬಿಲ್‌ಬೋರ್ಡ್ಸ್’ಗಳಿಗೆ ಅವಕಾಶ ಇದೆ ಎಂದು “ಬಿಬಿಎಂಪಿ ಜಾಹೀರಾತು ನಿಯಮಗಳು-2019′ ಕರಡಿನಲ್ಲಿ ಉಲ್ಲೇಖೀಸಲಾಗಿದೆ. ಇದು ಮೂಲ ಪ್ರಸ್ತಾವನೆಯಲ್ಲಿ ಇರಲಿಲ್ಲ. ಎಲ್ಲ ಪ್ರಕಾರದ ಹೋರ್ಡಿಂಗ್‌ಗಳನ್ನು ನಿಷೇಧಿಸಿರುವಾಗ, “ಲಿಗಸಿ ಹೋರ್ಡಿಂಗ್’ಗಳು ಯಾಕೆ? ಈ ಹಿಂದಿದ್ದ ಹೋರ್ಡಿಂಗ್‌ಗಳಿಗೆ ಹಿಂಬಾಗಿಲಿನಿಂದ ಪ್ರವೇಶಕ್ಕೆ ಅವಕಾಶ ನೀಡುವ ಹುನ್ನಾರ ಇದರಲ್ಲಿ ಅಡಿಗಿದೆ. ಇದು ಸ್ಪಷ್ಟವಾಗಿ ಜಾಹೀರಾತು ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ಆರೋಪಿಸುತ್ತಾರೆ.
ಧಾರ್ಮಿಕ ಕೇಂದ್ರಗಳ ವ್ಯಾಪ್ತಿ ಕಡಿತ: ಈ ಹಿಂದಿನ ಜಾಹೀರಾತು ಬೈಲಾದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಸ್ಮಶಾನ ಸುತ್ತಲಿನ ನೂರು ಮೀಟರ್ ವ್ಯಾಪ್ತಿಯಲ್ಲಿ ಜಾಹೀರಾತುಗಳ ಅಳವಡಿಕೆಗೆ ನಿಷೇಧ ಇತ್ತು. ಆದರೆ ಈಗ ಆ ವ್ಯಾಪ್ತಿಯನ್ನು ಕೇವಲ 50 ಮೀಟರ್‌ಗೆ ಸೀಮಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಈ “ನಿಷೇಧ’ದಿಂದ ಶಿಕ್ಷಣ ಸಂಸ್ಥೆಗಳು, ಸ್ಮಶಾನಗಳನ್ನು ಹೊರಗಿಡಲಾಗಿದೆ. ಅಂದರೆ, ಯಾವುದಾದರೂ ದೇವಸ್ಥಾನದ ಆಸುಪಾಸು ಸುಗುಣಾ ಚಿಕನ್‌ಗೆ ಸಂಬಂಧಿಸಿದ ಜಾಹೀರಾತು ಅಳವಡಿಕೆ ಅಥವಾ ಯಾವುದೋ ಶಾಲೆ ಹತ್ತಿರ ರೂಪ ಒಳ ಉಡುಪುಗಳ ಜಾಹೀರಾತು ಅಳವಡಿಸುವುದರಿಂದ ಸರ್ಕಾರಕ್ಕೆ ಮುಜುಗರ ಅಥವಾ ಸಮಸ್ಯೆ ಇಲ್ಲ!
400 ಚ.ಮೀ.ನಲ್ಲಿ ಎರಡೆರಡು ಹೋರ್ಡಿಂಗ್!: 400 ಚದರ ಮೀಟರ್ ವ್ಯಾಪ್ತಿ ಇರುವ ಜಾಗದಲ್ಲಿ ಈ ಮೊದಲು ಒಂದು ಹೋರ್ಡಿಂಗ್ ಅಳವಡಿಕೆ ಅವಕಾಶ ಇತ್ತು. ಮತ್ತೂಂದು ಜಾಹೀರಾತು ಹಾಕಲು ಅನುಮತಿ ನೀಡಬೇಕಾದರೆ, ಅಷ್ಟೇ ಜಾಗ ಇರುವುದು ಕಡ್ಡಾಯ. ಆದರೆ, ಈಗ ಅದೇ 400 ಚದರ ಮೀಟರ್ ಜಾಗದಲ್ಲಿ ಎರಡು ಹೋರ್ಡಿಂಗ್‌ಗಳಿಗೆ ಅವಕಾಶ ನೀಡಲಾಗಿದೆ. ಇದು ಜಾಹೀರಾತು ಹಾವಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಷ್ಟೇ ಅಲ್ಲ, ಅಂತಹ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರ ದೃಷ್ಟಿ ಈ ಜಾಹೀರಾತುಗಳತ್ತ ಕೇಂದ್ರೀಕೃತವಾಗುತ್ತದೆ. ಇದು ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ