ಗದಗ: ಜಿಲ್ಲೆಯಲ್ಲಿ ಕೋವಿಡ್ 19 ಪಿಡುಗು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶದನ್ವಯ ಮಾ. 31ರವರೆಗೆ ಜಿಲ್ಲೆಯಾದ್ಯಂತ ದಂಡ ಸಂಹಿತೆ ಪ್ರಕ್ರಿಯೆ 144ರ ರೀತ್ಯ ಪ್ರತಿಬಂಧಕಾಜ್ಞೆ ವಿಧಿಸಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲಾ, ಕಾಲೇಜು ಹಾಗೂ ಕೋಚಿಂಗ್ ಸೆಂಟರ್ ಎಲ್ಲ ತರಹದ ಶಿಕ್ಷಣ ಸಂಸ್ಥೆಗಳಿಗೆ (ಪರೀಕ್ಷೆ ಹೊರತುಪಡಿಸಿ) ರಜೆ ಘೋಷಿಸಿದೆ. ಜಿಲ್ಲೆಯಾದ್ಯಂತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಸ್ಥಳಗಳಾದ ಸಂತೆ, ಜಾತ್ರೆಗಳನ್ನು ಮುಂದೂಡಲಾಗಿದೆ. ಗದಗ ಜಿಲ್ಲೆಯಾದ್ಯಂತ ಚಿತ್ರಮಂದಿರ, ನಾಟಕ ಪ್ರದರ್ಶನ, ಉದ್ಯಾನ, ಹೋಟೆಲ್, ದಾಬಾ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಿದೆ.
ಧಾರ್ಮಿಕ ಕೇಂದ್ರಗಳ ಉತ್ಸವ, ಜಾತ್ರೆಗಳನ್ನು ಆಯಾ ಕೇಂದ್ರಗಳ ಮುಖ್ಯಸ್ಥರು, ಅಧಿಕಾರಿ,ಸಿಬ್ಬಂದಿ ಸರಳವಾಗಿ ಆಚರಿಸಬೇಕು. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ವಸತಿಗೆ ಅವಕಾಶವಿಲ್ಲ. ಬೇಸಿಗೆ ಶಿಬಿರ ಸಮಾರಂಭ, ವಿಚಾರ ಸಂಕಿರಣ, ಕ್ರೀಡಾಕೂಟ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮದುವೆ ನಿಶ್ಚಿತಾರ್ಥಗಳಲ್ಲಿ 100ಕ್ಕೂ ಹೆಚ್ಚು ಜನರ ಸೇರುವಿಕೆ ನಿರ್ಭಂಧಿಸಿದೆ. ವಿದೇಶ, ಅನ್ಯ ರಾಜ್ಯ ಹಾಗೂ ಕೊರೊನಾ ಪೀಡಿತ ಪ್ರದೇಶಗಳಿಂದ ಬರುವ ವ್ಯಕ್ತಿಗಳು ನೇರವಾಗಿ ಸಂಬಂಧಿತ ಆರೋಗ್ಯ ಕೇಂದ್ರಗಳಲ್ಲಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಪ್ರತಿಬಂಧಕಾಜ್ಞೆಯಡಿ ದಿನಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗಿದೆ. ಈ ಪ್ರತಿಬಂಧಕಾಜ್ಞೆಯು ಮಾ. 31ರ ವರೆಗೆ ಜಾರಿಯಲ್ಲಿದ್ದು, ಸಾರ್ವಜನಿಕರು ಕೋವಿಡ್ 19 ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಿ: ವೈಯಕ್ತಿಕ ಸ್ವಚ್ಛತೆ, ಸೋಂಕಿನಿಂದ ಕೆಮ್ಮು, ನೆಗಡಿ, ಜ್ವರ ಇರುವವರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಕಾರ್ಯನಿರ್ವಹಿಸಬೇಕು. ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳಬೇಕು. ನೆಗಡಿ, ಕೆಮ್ಮು, ಜ್ವರವಿದ್ದಲ್ಲಿ ಸ್ವಯಂ ಪ್ರೇರಿತರಾಗಿ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಿ ಬಹುಮುಖ್ಯವಾಗಿ ಜನಸಂದಣಿಯಿಂದ ಸಾಧ್ಯವಾದಷ್ಟು ದೂರವಿರಬೇಕು. ಕೆಮ್ಮು, ಸೀನು ಬಂದಾಗ ಕಡ್ಡಾಯವಾಗಿ ಕೈವಸ್ತ್ರ ಬಳಸಿ ಮೂಗು ಬಾಯಿ ಮುಚ್ಚಿಕೊಳ್ಳಬೇಕು. ರಸ್ತೆಯಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧ. ಯಾವುದೇ ವ್ಯಕ್ತಿಯಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಇರುವ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.