ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪದಗ್ರಹಣದ ಕಾರ್ಯಕ್ರಮವನ್ನು ಬಿಜೆಪಿ ಸರಕಾರ ಉದ್ದೇಶಪೂರ್ವಕವಾಗಿ ಎರಡು ಬಾರಿ ರದ್ದುಪಡಿಸಿದ್ದು, ಈ ನಿರ್ಧಾರವನ್ನು ಸವಾಲಾಗಿ ಸ್ವೀಕರಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಧಾರವಾಡ ಜಿಲ್ಲಾ ವೀಕ್ಷಕ ಎಸ್.ಎ. ಹುಸೇನ್ ಹೇಳಿದರು.
ಕಾರವಾರ ರಸ್ತೆಯ ಪಕ್ಷದ ಕಚೇರಿಯಲ್ಲಿ ನಡೆದ ವಿವಿಧ ಘಟಕಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೊಸ ಶಕ್ತಿಯೊಂದಿಗೆ ಮೇಲೇಳುತ್ತಿದೆ ಎನ್ನುವ ಸಂದೇಶ ಬಿಜೆಪಿಗೆ ತಲುಪಿದೆ. ಹೀಗಾಗಿ ಕೋವಿಡ್-19 ಮಾರ್ಗಸೂಚಿಗಳ ನೆಪದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಇದೊಂದು ಸಂಪೂರ್ಣ ಆನ್ ಲೈನ್ ಕಾರ್ಯಕ್ರಮವಾಗಿದ್ದರೂ ದುರುದ್ದೇಶದಿಂದ ತಡೆಹಿಡಿಯುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಕುಗ್ಗದೆ ಮತ್ತಷ್ಟು ಅದ್ಧೂರಿಯಾಗಿ ನಡೆಯುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಪರಿಚಯಿಸಿದ ಕೇಡರ್ ಬೇಸ್ ಮಾದರಿಯನ್ನು ಬಿಜೆಪಿ ಅನುಸರಿಸಿಕೊಂಡು ಇಂದು ಅಧಿಕಾರಕ್ಕೆ ಬಂದಿದೆ. ಕೇಡರ್ ವ್ಯವಸ್ಥೆಯನ್ನು ನಿರ್ಲಕ್ಷಿಸಿದ ಪರಿಣಾಮ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಗ್ರಾಪಂ, ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ರೂಪುರೇಷೆಗಳು ಸಿದ್ಧವಾಗಿವೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆ ನಡೆಯುತ್ತಿದೆ ಎನ್ನುವ ಕಾರಣದಿಂದ ರಾಜ್ಯ ಸರಕಾರ ಪದಗ್ರಹಣ ಕಾರ್ಯಕ್ರಮಕ್ಕೆ ಕಾನೂನಿನ ಹೆಸರಲ್ಲಿ ಅಡ್ಡಿಪಡಿಸಲಾಗುತ್ತಿದೆ. ಪದಗ್ರಹಣ ಕಾರ್ಯಕ್ರಮ ಯಾವಾಗ ನಡೆದರೂ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ ಕಾಂಗ್ರೆಸ್ ಸಮಿತಿ ಅನುಮತಿ ಮೇರೆಗೆ ಪ್ರತಿಯೊಬ್ಬರು ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಶ್ರಮ ವಹಿಸಬೇಕು. ಒಗ್ಗಟ್ಟಾಗಿ ಕಾರ್ಯ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.
ಮುಖಂಡರಾದ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಪ್ರೊ| ಐ.ಜಿ. ಸನದಿ, ಇಸ್ಮಾಯಿಲ್ ತಮಟಗಾರ, ದೀಪಾ ಗೌರಿ, ದಶರಥ ವಾಲಿ, ಬಷೀರ್‌ಅಹ್ಮದ್ ಗುಡಮಾಲ್ ಇನ್ನಿತರರಿದ್ದರು.
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದರೆ ಪ್ರತಿಫಲ ದೊರೆಯುವುದರಲ್ಲಿ ಎರಡು ಮಾತಿಲ್ಲ. ಪಕ್ಷದ ಸಂಘಟನೆ, ಜವಾಬ್ದಾರಿ ಸೇರಿದಂತೆ ಪ್ರತಿಯೊಂದು ವಿಕೇಂದ್ರೀಕರಣಗೊಳ್ಳುತ್ತಿದ್ದು, ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ದೊರೆಯಲಿದೆ.
ವೀರಕುಮಾರ ಪಾಟೀಲ, ಮಾಜಿ ಸಚಿವ ಹಾಗೂ ಕೆಪಿಸಿಸಿ ಜಿಲ್ಲಾ ವೀಕ್ಷಕ