ಉಡುಪಿ: ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸ್ಥಗಿತಗೊಂಡಿರುವ ರೇಷನ್ ಕಾರ್ಡ್ ನೋಂದಣಿ ಪ್ರಕ್ರಿಯೆ ಯನ್ನು ಪುನರಾರಂಭಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪಡಿತರ ಚೀಟಿಗೆ ನೋಂದಣಿ ಪ್ರಕ್ರಿಯೆಯನ್ನು ವಿಧಾನಸಭೆ ಚುನಾವಣೆಗೆ ಮುನ್ನ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದು ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದೆ. ಆದರೆ ಇವು ಮತ್ತು ಇತರ ಸೇವೆಗಳನ್ನು ಪಡೆಯಲು ಈ ಹಿಂದೆ ರದ್ದಾಗಿದ್ದ ಪಡಿತರ ಚೀಟಿದಾರರು ಹಾಗೂ ಹೊಸದಾಗಿ ನೋಂದಣಿ ಮಾಡಲು ಇಚ್ಛಿಸುವವರಿಗೆ ಸಾಧ್ಯವಾಗುತ್ತಿಲ್ಲ.
ಇದರ ಜತೆಗೆ ಈ ಹಿಂದೆ ಬಿಪಿಎಲ್ ಕಾರ್ಡ್‌ನ ಪ್ರತೀ ಸದಸ್ಯರಿಗೆ ತಿಂಗಳಿಗೆ ನೀಡುತ್ತಿದ್ದ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚುವರಿ 5 ಕೆ.ಜಿ.ಯ ಬದಲಾಗಿ 170 ರೂ. ನೀಡುವುದಾಗಿ ಸರಕಾರ ತಿಳಿಸಿದೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಜನರು ಪ್ರತೀ ದಿನ ಆಹಾರ ಮತ್ತು ನಾಗ ರಿಕ ಪೂರೈಕೆ ಇಲಾಖೆ ಕಚೇರಿಗೆ ಕರೆ ಮಾಡಿ ಆಗ್ರಹಿಸುತ್ತಿದ್ದಾರೆ. ಸಾಕಷ್ಟು ಒತ್ತಡವಿದ್ದರೂ ಹೊಸದಾಗಿ ಅರ್ಜಿ ಸಲ್ಲಿ ಸಲು ಇಲಾಖೆ ಇನ್ನೂ ಅವಕಾಶ ಕಲ್ಪಿಸಿಲ್ಲ.
ಆರೋಗ್ಯ ಸೇವೆಗೂ ತೊಡಕು
ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿ ಗಳಿಗೂ ಹೊಸ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.ಇದರಿಂದಲೂ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಗೃಹಲಕ್ಷ್ಮೀ ಯೋಜನೆಯಡಿ ಪ್ರತೀ ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ರವಾನಿಸಲು ಪ್ರಮುಖವಾಗಿ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಜತೆಗೆ ಸೇವಾಸಿಂಧು ಪೋರ್ಟಲ್ ಮುಖಾಂತರ ಜು. 19ರಿಂದ ಅರ್ಜಿ ಸಲ್ಲಿಸಲು ಸೂಚನೆ ನೀಡಿತ್ತು. ಆದರೆ ಕಾರ್ಡ್ ಇಲ್ಲದವರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ರೇಷನ್ ಕಾರ್ಡ್ ಇದ್ದವರಿಗೆ ಕೆಲವು ವರ್ಷಗಳ ಹಿಂದೆ ಅಪ್‌ಡೇಟ್ ಮಾಡುವಂತೆ ಸೂಚಿಸಿದ್ದರೂ ಕೆಲವರು ಅಪ್‌ಡೇಟ್ ಮಾಡದ ಕಾರಣ ಕಾರ್ಡ್ ರದ್ದುಗೊಂಡಿದೆ.
ಪುನೀತ್ ಸಾಲ್ಯಾನ್