Advertisement

ಹೂಡುವಳಿ ತೆರಿಗೆ ಪಡೆಯಲು ಅಡಚಣೆ

11:23 PM Dec 08, 2019 | Lakshmi GovindaRaj |

ಬೆಂಗಳೂರು: ವ್ಯಾಪಾರ- ವ್ಯಾಪಾರ (ಬಿ2ಬಿ) ವ್ಯವಹಾರದಲ್ಲಿ ಸರಕು ಸೇವೆ ಪೂರೈಕೆ ಸಂಬಂಧ ಪೂರೈಕೆದಾರರು ರಿಟರ್ನ್ಸ್ನೊಂದಿಗೆ ಖರೀದಿ ವಿವರವನ್ನು ಅಪ್‌ಲೋಡ್‌ ಮಾಡಿದರಷ್ಟೇ ಖರೀದಿದಾರರು ಪೂರ್ಣ ಪ್ರಮಾಣದಲ್ಲಿ “ಹೂಡುವಳಿ ತೆರಿಗೆ’ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌- ಐಟಿಸಿ) ಪಡೆಯುವ ವ್ಯವಸ್ಥೆಯನ್ನು ಜಿಎಸ್‌ಟಿ ಕೌನ್ಸಿಲ್‌ ಜಾರಿಗೊಳಿಸಿರುವುದಕ್ಕೆ ವ್ಯಾಪಾರ- ವಾಣಿಜ್ಯೋದ್ಯಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

Advertisement

ಪೂರೈಕೆದಾರರು ಮಾರಾಟ ಮಾಡಿದ ಸರಕಿನ ವಿವರವನ್ನು (ಆರ್‌- 1) ಮಾಸಿಕ ರಿಟರ್ನ್ಸ್ನೊಂದಿಗೆ ಅಪ್‌ಲೋಡ್‌ ಮಾಡದಿರುವುದಕ್ಕೆ ಖರೀದಿದಾರರು ಐಟಿಸಿ ಪಡೆಯಲು ನಿರ್ಬಂಧ ಹೇರುವುದು ಸರಿಯಲ್ಲ. ಇದರಿಂದ ಖರೀದಿದಾರರು ಸರಕು ಖರೀದಿಸಿ ತೆರಿಗೆ ಪಾವತಿಸಿದ್ದರೂ ಆ ಸರಕಿನ ಮೊತ್ತದ ಶೇ.20ರಷ್ಟು ಐಟಿಸಿಯಷ್ಟೇ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಆರ್ಥಿಕವಾಗಿ ತೊಂದರೆಯಾಗಲಿದ್ದು, ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ವಾಣಿಜ್ಯೋದ್ಯಮಿಗಳು ಮನವಿ ಮಾಡಲಾರಂಭಿಸಿದ್ದಾರೆ.

ವ್ಯಾಪಾರ-ವ್ಯಾಪಾರ (ಬಿ2ಬಿ) ವ್ಯವಹಾರದಲ್ಲಿ ಖರೀದಿದಾರರು ತಾವು ಖರೀದಿಸಿದ ಸರಕು-ಸೇವೆಗೆ ಸಂಬಂಧಪಟ್ಟಂತೆ ಮಾಸಿಕ ರಿಟರ್ನ್ಸ್ನಡಿ ವಿವರವನ್ನು ಅಪ್‌ಲೋಡ್‌ ಮಾಡಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯುತ್ತಿದ್ದರು. ಆದರೆ, ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು, ಸರಕು- ಸೇವೆ ಖರೀದಿ, ಪೂರೈಕೆ ವ್ಯವಹಾರವನ್ನೇ ನಡೆಸದೆ ಕೇವಲ ನಕಲಿ ರಸೀದಿ, ವಿವರ ಸಲ್ಲಿಸಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದು ನೂರಾರು ಕೋಟಿ ರೂ.ವಂಚಿಸಿರುವುದು ಬಯಲಾಗಿದ್ದು, ಜಿಎಸ್‌ಟಿ ಕೌನ್ಸಿಲ್‌ ಕೆಲ ನಿಯಂತ್ರಣ ಕ್ರಮ ಕೈಗೊಂಡಿದೆ.

ಹೊಸ ಅಧಿಸೂಚನೆ: ಅದರಂತೆ ಜಿಎಸ್‌ಟಿ ಕೌನ್ಸಿಲ್‌ ಇತ್ತೀಚೆಗೆ ಹೊಸ ಅಧಿಸೂಚನೆ ಹೊರಡಿಸಿದೆ. ಬಿ2ಬಿ ವ್ಯವಹಾರದಲ್ಲಿ ಯಾವುದೇ ಸರಕು ಖರೀದಿ ಸಂಬಂಧ ಪೂರೈಕೆದಾರರು ಹಾಗೂ ಖರೀದಿದಾರರು ಮಾಸಿಕ ರಿಟರ್ನ್ಸ್ನಡಿ (ಆರ್‌- 1) ವಿವರಗಳನ್ನು ಅಪ್‌ಲೋಡ್‌ ಮಾಡಿದ್ದರಷ್ಟೇ ಖರೀದಿದಾರರು ತಾವು ಖರೀದಿಸಿದ ಸರಕಿಗೆ ಪೂರ್ಣ ಪ್ರಮಾಣದಲ್ಲಿ ಐಟಿಸಿ ಪಡೆಯಲಿದ್ದಾರೆ. ಒಂದೊಮ್ಮೆ ಪೂರೈಕೆದಾರರು ಸರಕು- ಸೇವೆ ಮಾರಾಟ ಮಾಡಿದ್ದರೂ ಅದರ ವಿವರವನ್ನು ಮಾಸಿಕ ರಿಟರ್ನ್ಸ್ನಡಿ ಅಪ್‌ಲೋಡ್‌ ಮಾಡದಿದ್ದರೆ, ಬಾಕಿ ಸರಕಿನ ಮೊತ್ತದ ಶೇ.20ರಷ್ಟು ಐಟಿಸಿಯನ್ನಷ್ಟೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ವ್ಯಾಪಾರ, ವಹಿವಾಟುದಾರರಿಂದ ಆಕ್ಷೇಪ ಕೇಳಿ ಬಂದಿದೆ.

ನಿಯಮದಲ್ಲೇ ವ್ಯತಿರಿಕ್ತ ಅವಕಾಶ: ವಾರ್ಷಿಕ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ವ್ಯಾಪಾರ- ವ್ಯವಹಾರಸ್ಥರು ಮಾಸಿಕ ರಿಟರ್ನ್ಸ್ ಸಲ್ಲಿಕೆ ವೇಳೆ ವಿವರಗಳನ್ನು (ಆರ್‌-1) ಮೂರು ತಿಂಗಳಿಗೊಮ್ಮೆ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಮಾರಾಟ ಮಾಡಿದ ಸರಕಿಗೆ ಜಿಎಸ್‌ಟಿಯನ್ನು ಆಯಾ ತಿಂಗಳೇ ಪಾವತಿಸಬೇಕು. ಹೀಗಾಗಿ, ಪೂರೈಕೆದಾರರು ಮಾರಾಟ ಮಾಡಿದ ಸರಕಿನ ವಿವರವನ್ನು ಆಯಾ ತಿಂಗಳೇ ಅಪ್‌ಲೋಡ್‌ ಮಾಡದೆ ನಿಯಮದಲ್ಲಿರುವ ಅವಕಾಶದಂತೆ ಮೂರು ತಿಂಗಳಿಗೊಮ್ಮೆ ಅಪ್‌ಲೋಡ್‌ ಮಾಡಿದರೆ ಖರೀದಿದಾರರು ಆಯಾ ತಿಂಗಳೇ ಐಟಿಸಿ ಪಡೆಯಲು ತೊಂದರೆಯಾಗಲಿದೆ ಎಂಬುದು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಸಮಸ್ಯೆ ಹೇಗೆ?: ಪೂರೈಕೆದಾರರೊಬ್ಬರು ನಿರ್ದಿಷ್ಟ ಸರಕನ್ನು ಖರೀದಿದಾರರೊಬ್ಬರಿಗೆ ಪೂರೈಸಿದ್ದಾರೆ ಎಂದು ಭಾವಿಸೋಣ. ಅದಕ್ಕೆ ಸಂಬಂಧಪಟ್ಟಂತೆ ಖರೀದಿದಾರರು ತಿಂಗಳ 10ರಂದು ಸಲ್ಲಿಸುವ ರಿಟರ್ನ್ಸ್ನೊಂದಿಗೆ ಸರಕು ಖರೀದಿ ವಿವರವನ್ನೂ ಅಪ್‌ಲೋಡ್‌ ಮಾಡುತ್ತಾರೆ ಎಂದು ತಿಳಿಯೋಣ. ಇನ್ನೊಂದೆಡೆ ಪೂರೈಕೆದಾರರು ಆ ನಿರ್ದಿಷ್ಟ ಸರಕು ಮಾರಾಟ ಮಾಡಿರುವ ವಿವರವನ್ನು ತಿಂಗಳ 10ರಂದು ರಿಟರ್ನ್ಸ್ನೊಂದಿಗೆ ಅಪ್‌ಲೋಡ್‌ ಮಾಡಿದ್ದು, ಎರಡೂ ವಿವರ ತಾಳೆಯಾದರೆ ಖರೀದಿದಾರರು ಪೂರ್ಣ ಪ್ರಮಾಣದಲ್ಲಿ ಐಟಿಸಿ ಪಡೆಯಲಿದ್ದಾರೆ.

ಆದರೆ, 1.5 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸುವವರು ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ನೊಂದಿಗೆ ವಿವರ ಅಪ್‌ಲೋಡ್‌ ಮಾಡಲು ಅವಕಾಶವಿರುವುದರಿಂದ ಮಾರಾಟಗಾರರು ಆ ನಿರ್ದಿಷ್ಟ ಸರಕಿನ ವಿವರವನ್ನು ಆಯಾ ತಿಂಗಳೇ ಅಪ್‌ಲೋಡ್‌ ಮಾಡದೆ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಸಲು ಮುಂದಾದರೆ ಖರೀದಿದಾರರು ಪೂರ್ಣ ಪ್ರಮಾಣದಲ್ಲಿ ಐಟಿಸಿ ಪಡೆಯಲು ಅವಕಾಶವಿರುವುದಿಲ್ಲ. ಅಪ್‌ಲೋಡ್‌ ಮಾಡಲು ಬಾಕಿಯಿರುವ ಮೊತ್ತದ ಶೇ.20ರಷ್ಟು ಹೂಡುವಳಿ ತೆರಿಗೆಯನ್ನಷ್ಟೇ ಪಡೆಯಬಹುದಾಗಿದೆ. ಇದರಿಂದ ಖರೀದಿದಾರರು ಆರ್ಥಿಕ ಸಂಕಷ್ಟಕ್ಕೆ ಎದುರಾಗಬೇಕಾಗುತ್ತದೆ ಎಂಬುದು ವ್ಯಾಪಾರ- ವಹಿವಾಟುದಾರರ ಅಳಲು.

ಈಗಾಗಲೇ ಜಾರಿ: ಹೊಸ ನಿಯಮ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಅ.9ರಿಂದಲೇ ಜಾರಿಯಾಗಿದೆ. ನವೆಂಬರ್‌ನಲ್ಲಿ ರಿಟರ್ನ್ಸ್ ಸಲ್ಲಿಕೆ ಅವಧಿ ಮುಗಿದಿದ್ದು, ಆ ಸಂದರ್ಭದಲ್ಲೇ ಸಮಸ್ಯೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಮುಖ್ಯವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಸಣ್ಣ ವ್ಯಾಪಾರಿಗಳು ಇದರಿಂದ ಹೆಚ್ಚು ತೊಂದರೆಗೆ ಸಿಲುಕುವ ಆತಂಕ ವ್ಯಕ್ತವಾಗಿದೆ.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯುವ ಸಂಬಂಧ ಹೊಸದಾಗಿ ಹೊರಡಿಸಿರುವ ಅಧಿಸೂಚನೆಗೆ ಯಾವುದೇ ತಕರಾರು ಇಲ್ಲ. ಆದರೆ, ಇದರಿಂದ ಪ್ರಾಮಾಣಿಕವಾಗಿ ವ್ಯವಹಾರ ನಡೆಸುವವರಿಗೆ ತೊಂದರೆಯಾಗಿ ಆರ್ಥಿಕ ಹೊರೆ ಅನುಭವಿಸುವ ಆತಂಕ ಎದುರಾಗಿದೆ. ಈ ವಿಚಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ವ್ಯಾಪಾರಿಗಳಿಗೂ ತೊಂದರೆಯಾಗಬಹುದು. ಈ ಅಂಶಗಳನ್ನು ಜಿಎಸ್‌ಟಿ ಕೌನ್ಸಿಲ್‌ನ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗಿದ್ದು, ಡಿ.18ರ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಸರಿಪಡಿಸುವ ನಿರೀಕ್ಷೆ ಇದೆ.
-ಬಿ.ಟಿ.ಮನೋಹರ್‌, ರಾಜ್ಯ ಜಿಎಸ್‌ಟಿ ಸಮಿತಿ ಅಧ್ಯಕ್ಷ, ಎಫ್ಕೆಸಿಸಿಐ

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಕುರಿತಂತೆ ಹೊಸ ಅಧಿಸೂಚನೆಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಪೂರೈಕೆದಾರರು ತಾವು ಪೂರೈಕೆ ಮಾಡಿದ ಸರಕಿನ ಪೂರ್ಣ ವಿವರವನ್ನು ಆಯಾ ತಿಂಗಳೇ ಅಪ್‌ಲೋಡ್‌ ಮಾಡಿದರಷ್ಟೇ ಖರೀದಿದಾರರಿಗೆ ಪೂರ್ಣ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ನೀಡುವ ನಿಯಮ ಸೂಕ್ತವಲ್ಲ. ಹೊಸ ಅಧಿಸೂಚನೆಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಸಲ್ಲಿಸಲು ಇತ್ತೀಚಿಗೆ ನಡೆದ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
-ಆರ್‌.ರಾಜು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next