ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಆನ್ ಲೈನ್ ಕಲಾಪಕ್ಕೆ ಅನುಚಿತ ವರ್ತನೆಯ ಫೋಟೋ ಮತ್ತು ವಿಡಿಯೋಗಳಿಂದ ಅಡ್ಡಿಯುಂಟಾಗಿದೆ. ಕಳೆದ ಶನಿವಾರ ನ್ಯಾಯಮಂಡಳಿಯ ಆನ್‌ಲೈನ್ ಕಲಾಪ ನಡೆಯುತ್ತಿದ್ದಾಗ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳು ಕಂಡು ಬಂದಿವೆ.
ಈ ಕುರಿತು ಕೆಎಟಿಯ ನ್ಯಾಯಾಂಗ ಅಧಿಕಾರಿ ವಿನೀತಾ ಪಿ.ಶೆಟ್ಟಿ ಸೆಂಟ್ರಲ್ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ವಾರ ಹೈಕೋರ್ಟ್‌ನ ಆನ್‌ಲೈನ್ ಕಲಾಪದಲ್ಲಿಯೂ ಅನುಚಿತ ವಿಡಿಯೋದಿಂದ ಅಡ್ಡಿಯಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೋ ಹಾಗೂ ಪೋಟೋಗಳನ್ನು ಅಪ್ ಲೋಡ್ ಮಾಡಿದ್ದನು. ಇದರಿಂದಾಗಿ ಆನ್‌ಲೈನ್ ಕಲಾಪದಲ್ಲಿ ವ್ಯತ್ಯಯವಾಗಿದೆ ಎಂದು ಕೆಎಸ್‌ಎಟಿಯ ನ್ಯಾಯಾಂಗ ಅಧಿಕಾರಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರನ್ನು ಆಧರಿಸಿ ಪೊಲೀಸರು ಐಟಿ ಕಾಯಿದೆ ಸೆಕ್ಷನ್ 67ರಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮತ್ತೆ ಆರಂಭಿಸುವವರೆಗೆ ವಕೀಲರು ಹಾಗೂ ಖುದ್ದು ಹಾಜರಾಗುವವರು ಭೌತಿಕವಾಗಿಯೇ ನ್ಯಾಯಮಂಡಳಿಯ ಕಲಾಪಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾರೆ. ಕಳೆದ ಡಿ.5ರಂದು ಹೈಕೋರ್ಟ್‌ನ ಹಲವು ನ್ಯಾಯಪೀಠಗಳ ಆನ್‌ಲೈನ್ ವಿಚಾರಣೆ ವೇಳೆ ಅಪರಿಚಿತರು ಅಶ್ಲೀಲ ದೃಶ್ಯಗಳ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ ಕಾರಣ ಕಲಾಪ ವ್ಯತ್ಯಯವಾಗಿತ್ತು. ಒಂದು ವಾರ ಆನ್‌ಲೈನ್ ಕಲಾಪ ಸ್ಥಗಿತಗೊಳಿಸಿ ನಂತರ ಕೆಲವು ಮುಂಜಾಗ್ರತಾ ಕ್ರಮಗಳೊಂದಿಗೆ ಡಿ.11ರಿಂದ ಪುನಾರಂಭಿಸಲಾಗಿದೆ.