ಕೋಲಾರ: ತಾಲೂಕಿನ ನರಸಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರೌಢ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯೊಬ್ಬರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಶಾಲೆಗೆ ಬಂದು ಶಿಕ್ಷಕನಿಗೆ ಬಿಇಒ ಎದುರೇ ಧರ್ಮದೇಟು ಕೊಟ್ಟ ಘಟನೆ ನಡೆದಿದೆ.
ಕನ್ನಡ ಶಿಕ್ಷಕ ಸಿ.ಎಂ.ಪ್ರಕಾಶ್ ಎಂಬುವ ವರೇ ಈ ಕೃತ್ಯ ಎಸಗಿದ ಶಿಕ್ಷಕರೆನ್ನಲಾಗಿದ್ದು, ಶಾಲೆಯ ಬಾಲಕಿಯೊಬ್ಬರಿಗೆ ಅಶ್ಲೀಲ ಮೆಸೇಜ್ ಕಳುಹಿಸಿರುವ ಕುರಿತು ಗ್ರಾಮದ ಹಲವಾರು ಮಂದಿ ಶಾಲೆಗೆ ಧಾವಿಸಿದ್ದರು. ಘಟನೆ ಕುರಿತು ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಮಕ್ಕಳಿಂದ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದು, ಈ ಸಂಬಂಧ ಆರೋಪಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಡಿಡಿಪಿಐ ಅವರಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.
ಶಿಕ್ಷಕ ಸಿ.ಎಂ.ಪ್ರಕಾಶ್ ಈ ಹಿಂದೆಯೂ ತಾನು ಕೆಲಸ ಮಾಡಿದ ಹಲವಾರು ಶಾಲೆಗಳಲ್ಲಿ ಇದೇ ರೀತಿ ದುರ್ವರ್ತನೆ ತೋರಿದ್ದು, 2010ರಲ್ಲಿ ಇದೇ ನರಸಾಪುರ ಪ್ರೌಢಶಾಲೆಯಲ್ಲಿ ಬಾಲಕಿ ಯೊಬ್ಬರೊಂದಿಗೆ ಕೆಟ್ಟದಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಧರ್ಮದೇಟು ನೀಡಿದ್ದು, ಇಲ್ಲಿಂದ ವರ್ಗಾಯಿಸಲಾಗಿತ್ತು.
ಅಲ್ಲದೆ ಇಂತಹದ್ದೇ ಪ್ರಕರಣದಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ನಂತರ ಮದನಹಳ್ಳಿ ಶಾಲೆಯಲ್ಲೂ ಇದೇ ರೀತಿಯ ದುರ್ವರ್ತನೆ ತೋರಿದ್ದರೆನ್ನಲಾಗಿದ್ದು, ಅಲ್ಲಿನ ಶಾಲಾಭಿವೃದ್ದಿ ಸಮಿತಿ ಈ ಶಿಕ್ಷಕನಿಗೆ ಎಚ್ಚರಿಕೆಯನ್ನೂ ನೀಡಿತ್ತು ಎನ್ನಲಾಗಿದೆ.
ಮದನಹಳ್ಳಿಯಿಂದ ವರ್ಗವಾಗಿ ನರಸಾಪುರಕ್ಕೆ ಬಂದ ಈ ಶಿಕ್ಷಕ ಮತ್ತೆ ಇಲ್ಲಿಯೂ ಅದೇ ಚಾಳಿ ಮುಂದುವರಿಸಿದ್ದು, ಗ್ರಾಮಸ್ಥರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರಲ್ಲದೇ ಮತ್ತೆ ನರಸಾಪುರ ಶಾಲೆಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.