ಬೆಂಗಳೂರು: ಕಾರು ಚಾಲನಾ ತರಬೇತಿ ವೇಳೆ ಯುವತಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಚಾಲನಾ ತರಬೇತಿ ಶಾಲೆಯ ತರಬೇತುದಾರನ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮೀ ಪುರ ನಿವಾಸಿ 18 ವರ್ಷ ಯುವತಿ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಶಾಲೆಯ ತರಬೇತುದಾರ ಅಣ್ಣಪ್ಪ ಎಂಬಾತನ ವಿರುದ್ಧ ಬಸವೇಶ್ವರನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಏನಿದು ಪ್ರಕರಣ?: ಪರೀಕ್ಷೆ ಮುಗಿಸಿ ಮನೆಯಲ್ಲಿದ್ದ ಯುವತಿ ಕಾರು ಚಾಲನೆ ಕಲಿಯಲು ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಶಾಲೆಯಲ್ಲಿ ನೋಂದಣಿ ಮಾಡಿ ಕೊಂಡು ಕಾರು ಚಾಲನಾ ತರಬೇತಿ ಪಡೆಯು ತ್ತಿದ್ದರು. ಈ ವೇಳೆ ಡ್ರೈವಿಂಗ್ ಶಾಲೆಯ ತರಬೇತುದಾರ ಅಣ್ಣಪ್ಪನೇ ಕಾರು ಚಾಲನಾ ತರಬೇತಿ ನೀಡಿದ್ದ. ಕೋರ್ಸ್ ಮುಗಿದ ಬಳಿಕ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ 750 ರೂ. ಕೊಡಬೇಕು ಎಂದು ಯುವತಿಗೆ ಕೇಳಿದ್ದಾನೆ. ಉತ್ತಮವಾಗಿ ಕಾರು ಚಾಲನೆಯ ಕಲಿಯುವ ಆಸಕ್ತಿಯಿಂದ ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪನಿಗೆ 10,500 ರೂ. ಪಾವತಿಸಿದ್ದಾರೆ. ಅದರಂತೆ ಅಣ್ಣಪ್ಪ, ಜೂ.26ರಂದು ವಿಶೇಷ ಕ್ಲಾಸ್ ಆರಂಭಿಸಿದ್ದಾನೆ. ಪ್ರತಿ ದಿನ ಯುವತಿಯ ಮನೆ ಬಳಿ ಬಂದು ಯುವತಿಯ ಕಾರಿನಲ್ಲೇ ಚಾಲನಾ ತರಬೇತಿ ನೀಡುತ್ತಿದ್ದ. ಜುಲೈ 7ರಂದು ಬೆಳಗ್ಗೆ 6 ಗಂಟೆಗೆ ಯುವತಿ ಮನೆ ಬಳಿ ಬಂದಿರುವ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದಾನೆ.
ಕಾರಿನಲ್ಲೇ ಮರ್ಮಾಂಗ ಹಿಡಿದು ಅಸಭ್ಯ ವರ್ತನೆ: ಬಸವೇಶ್ವರನಗರದ ನ್ಯಾಷನಲ್ ಶಾಲೆಯ ಮೇಲು ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಅಣ್ಣಪ್ಪ, ತನ್ನ ಮರ್ಮಾಂಗವನ್ನು ಹೊರಗಡೆ ತೆಗೆದು ಕೈನಿಂದ ಹಿಚುಕಿಕೊಳ್ಳಲು ಆರಂಭಿಸಿದ್ದಾನೆ. ಅದರಿಂದ ಆತಂಕಗೊಂಡ ಯುವತಿ, ಕಾರನ್ನು ಮನೆಗೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಅಣ್ಣಪ್ಪ ಎಚ್ಚೆತ್ತುಕೊಂಡು ಸುಮ್ಮನಾಗಿದ್ದಾನೆ. ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜುಗರ ಉಂಟು ಮಾಡಿದ ಅಣ್ಣಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.