Advertisement
ವೇಗವಾಗಿ ಓಡುತ್ತಿರುವ ಕಾಲ, ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಹೆಚ್ಚುತ್ತಿರುವ ಒತ್ತಡ, ಮಾನಸಿಕವಾಗಿ ಆಗುವ ಆಘಾತಗಳು, ಜೀವನಶೈಲಿ ಬದಲಾವಣೆ, ಸಮಯದ ಕೊರತೆಯಿಂದ ಯುವಕನಾಗಿರು ವಾಗಲೇ ಆವರಿಸುವ ಮುಪ್ಪು ಮುಂತಾದವುಗಳು ಮನುಷ್ಯನನ್ನು ಸದಾ ಒಂದಿಲ್ಲೊಂದು ಕಾಯಿಲೆಗಳತ್ತ ದೂಡುತ್ತಲೇ ಇರುತ್ತದೆ. ಇದರಿಂದ ಹೊರಬರಲು ಮನುಷ್ಯ ಪಡುವ ಸಂಕಷ್ಟವೂ ಅಷ್ಟಿಷ್ಟಲ್ಲ.
ಮರೆವು ಸಮಸ್ಯೆಯಿಂದಾಗಿ ದಿನನಿತ್ಯದ ಕೆಲಸ ಕಾರ್ಯಗಳೇ ಮರೆತುಹೋಗುವುದು, ಮನೆಯಿಂದ ಹೊರ ಹೋದಾಗ ಮನೆಯ ಬಾಗಿಲು ಹಾಕಿದ್ದೇನಾ ಎಂಬ ಸಂಶಯದೊಂದಿಗೆ ಮತ್ತೆ ಬಂದು ನೋಡುವುದು, ಕಚೇರಿಗೆ ತೆರಳುವಾಗ ಐಡಿ ಕಾರ್ಡ್ ಮರೆತು ಹೋಗುವುದು, ಮುಖ್ಯವಾದ ಕೆಲಸ ಮರೆತು ಮಾಡದೇ ಇರುವುದು, ಪ್ರೀತಿಪಾತ್ರರ, ಸಂಬಂಧಿಕರ ಮನೆಯ ಸಮಾರಂಭಗಳು ಮರೆತು ಹೋಗುವುದು, ದಿನನಿತ್ಯ ನೋಡುವವರನ್ನೇ ಅಪರಿಚಿತರಂತೆ ಭಾಸವಾಗುವುದು, ದಿನನಿತ್ಯ ಸಿಗುವವರ ಹೆಸರು ಮರೆತು ಹೋಗುವುದು…ಹೀಗೆ ನಾನಾ ಕಾರಣದಲ್ಲಿರುತ್ತದೆ. ಇದರಲ್ಲಿ ಬಹುತೇಕ ಮರೆಯುವಿಕೆಗೆ ಮಾನಸಿಕ ಕಾಯಿಲೆಯ ನಂಟಿದೆ. ಮನಸ್ಸಿಗೆ ಆದ ಆಘಾತಗಳು ಮರೆವಿನತ್ತ ಮನುಷ್ಯನನ್ನು ದೂಡುತ್ತವೆ ಎಂಬುದು ಅಷ್ಟೇ ಸತ್ಯವಾಗಿರುತ್ತದೆ.
Related Articles
ಎಲ್ಲ ರೀತಿಯ ಮರೆವು ಕಾಯಿಲೆಯನ್ನು ಮಾನಸಿಕ ಖನ್ನತೆ ಎಂದು ಹೇಳಲು ಬಾರದಿದ್ದರೂ, ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವಂತಿಲ್ಲ. ಖನ್ನತೆಯಿಂದಾಗಿಯೇ ಮನುಷ್ಯ ಮರೆವಿನ ರೋಗವನ್ನು ತನಗರಿವಿಲ್ಲದಂತೆಯೇ ಎಳೆದುಕೊಳ್ಳುತ್ತಾನೆ ಎಂಬುದು ಸತ್ಯ. ಯಾವುದಾದರೊಂದು ವಸ್ತುವನ್ನು ನೋಡುತ್ತಾ ಕೂರುವುದು, ಆಲೋಚನಾ ಮಗ್ನನಾಗಿ ಪರಿಸರದ ವಾಸ್ತವವನ್ನು ಕಳೆದು ಹೋಗುವುದು ಇತ್ಯಾದಿ.
Advertisement
ಮರೆವಿನಿಂದ ಹೊರ ಬರುವುದೆಂತು?ಮರೆವು ಮಾನಸಿಕ ಖನ್ನತೆಯಿಂದಲೇ ಘಟಿಸುವ ಕಾರಣ ಬಹುತೇಕ ಇರುವುದರಿಂದ ಮಾನಸಿಕ ಖನ್ನತೆಯಿಂದ ಹೊರಬರುವುದು ಮುಖ್ಯ. ಹಿಂದೆ ಆಗಿರುವ ಆಘಾತ, ಘಟನೆಗಳನ್ನು ಮರೆಯಲು ಸಾಧ್ಯವಾದಷ್ಟು ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ದೈನಂದಿನ ಭಾಗವಾಗಿ ರೂಢಿಸಿಕೊಳ್ಳಬೇಕು. ಮನಸ್ಸಿಗೆ ಮುದನೀಡುವ ಪುಸ್ತಕ ಓದುವುದು, ಹಾಡು ಆಲಿಸುವುದು, ಪ್ರೀತಿಪಾತ್ರರು, ಸ್ನೇಹಿತರೊಂದಿಗೆ ಸಮಯ ಕಳೆಯುವುದು, ಕುಟುಂಬದೊಂದಿಗೆ ಇರುವುದು ಮುಂತಾದವು ಮರೆವು ರೋಗಕ್ಕೆ ಉಪಶಮನ ನೀಡುವಲ್ಲಿ ಸಹಕಾರಿಯಾಗುತ್ತದೆ. ಚಿಕಿತ್ಸೆ
ಮರೆವು ಯಾವುದೇ ಚಿಕಿತ್ಸೆ ಇಲ್ಲದೆ, ತನ್ನಷ್ಟಕ್ಕೆ ವಾಸಿಯಾಗಬಹುದು ಅಥವಾ ದೀರ್ಘಕಾಲಿಕ ರೋಗವಾಗಿ ಕಾಡಿದರೆ ಗುಣಪಡಿಸಲೆಂದೇ ಔಷಧಗಳಿವೆ. ಕಾಗ್ನಿಟಿವ್ ಚಿಕಿತ್ಸೆಗಳ ಮೂಲಕ ರೋಗಿಯ ಹೊಸ ಹಾಗೂ ಹಳೆಯ ಸ್ಮರಣೆಯ ನಮೂನೆಗಳನ್ನು ಅಧ್ಯಯನ ಮಾಡಿ, ಸ್ಮರಣಾ ಕೌಶಲವನ್ನು ವೃದ್ಧಿಸಲು ಹಾಗೂ ಮರು ಪಡೆಯಲು ವಿಧಾನಗಳನ್ನು ರೂಪಿಸಲಾಗುತ್ತದೆ. ಮರೆವಿನಲ್ಲಿ ಮೂರು ರೀತಿ
ಮರೆವಿನಲ್ಲಿ ಮೂರು ರೀತಿಯಾಗಿ ವಿಂಗಡಿಸಬಹುದು. ಅಲ್ಪಸ್ವರೂಪದ ಕಾಯಿಲೆ, ಮಧ್ಯಮ ಸ್ವರೂಪದ ಕಾಯಿಲೆ ಮತ್ತು ಭೀಕರ ಸ್ವರೂಪದ ಕಾಯಿಲೆ ಎಂಬುದಾಗಿ. ಅಲ್ಪಸ್ವರೂಪದ ಕಾಯಿಲೆಯಲ್ಲಿ ಸುಮಾರು 2-4 ವರ್ಷಗಳ ಕಾಲ ಮನುಷ್ಯ ಬಳಲುತ್ತಾನೆ. ಮಧ್ಯಮ ಸ್ವರೂಪದಲ್ಲಿ 10 ವರ್ಷದವರೆಗೂ ಬಾಧಿಸುವ ಸಾಧ್ಯತೆಯಿದೆ. ಭೀಕರ ಸ್ವರೂಪದ ಕಾಯಿಲೆ ಕೊನೆಯುಸಿರಿನವರೆಗೂ ಕಾಡುತ್ತದೆ. ನಿದ್ರಾಹೀನತೆ, ವಿಚಿತ್ರ ನಡವಳಿಕೆ, ಬಟ್ಟೆಯಲ್ಲೇ ಮಲ-ಮೂತ್ರದಂತಹ ಸಮಸ್ಯೆಗಳಿಗೂ ಇದು ಎಡೆ ಮಾಡಿಕೊಡಬಹುದು. ಖನ್ನತೆ, ಮರೆವು ತಾತ್ಕಾಲಿಕ. ಚಿಕಿತ್ಸೆ ಪಡೆದರೆ ಪರಿಪೂರ್ಣ ಮುಕ್ತಿ ಸಿಗಬಹುದು. ಸಮಯಕ್ಕನುಗುಣವಾಗಿ ಸಲಹೆ, ಸಹಾಯ ಪಡೆದುಕೊಂಡರೆ ವ್ಯಕ್ತಿ ಶೇ. 100ರಷ್ಟು ಗುಣಮುಖರಾಗಲು ಸಾಧ್ಯ. ಆರೋಗ್ಯಕರ ಜೀವನಶೈಲಿ ನಿರ್ವಹಣೆ, ಒತ್ತಡ ನಿವಾರಣೆ, ಆಪ್ತ ಸಮಾಲೋಚಕರೊಂದಿಗೆ ಚರ್ಚಿಸುವುದು, ಮಾನಸಿಕ ಚಿಂತೆಗಳನ್ನು ದೂರ ಮಾಡುವುದು, ಸರಿಯಾಗಿ ನಿದ್ರಿಸುವುದು, ವ್ಯಾಯಾಮ ಮಾಡುವುದು, ಮದ್ಯಪಾನ ಮಾಡದಿರುವುದರಿಂದ ಮರೆವು ರೋಗ ತನ್ನಿಂತಾನಾಗೇ ನಿವಾರಣೆಯಾಗುತ್ತದೆ.
-ಡಾ| ಕೇಶವ ಪೈ ಕೆ., ವೈದ್ಯರು - ಧನ್ಯಾ ಬಾಳೆಕಜೆ