Advertisement
ನಗರದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಾಗೂ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಇದೇ ರೀತಿ ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು ಎಂದರು. ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್‌ನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕು ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು.
Related Articles
Advertisement
ಪತ್ರಕರ್ತರ ಯಾಂತ್ರೀಕೃತ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಹೀಗಾಗಿ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಚಿವ ಕಾರಜೋಳ ಕಿವಿಮಾತು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂರು ವರ್ಷಗಳ ಮುನ್ನೋಟ ಕುರಿತ ಕಿರುಪುಸ್ತಿಕೆ ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಅವರು, ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು. ಇದಕ್ಕೆ ಬಾಗಲಕೋಟೆಯ ಸುಭಾಷ ಹೊದ್ಲೂರ ಅವರು ಎರಡೂವರೆ ಲಕ್ಷ ನೀಡುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರು.
ಅದೇ ರೀತಿ ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಅವರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಮನೆ ಗೆದ್ದು ಮಾರು ಗೆಲ್ಲಬೇಕು ಎಂಬ ಮಾತನ್ನು ಅರಿತುಕೊಂಡು ಪತ್ರಕರ್ತರು ತಮ್ಮ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ ಅವರು, ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ಸುಳ್ಳು ಸುದ್ದಿ ಭರಾಟೆ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕಾರ್ಯಮರೆತ ಸಂಘ ಎಂಬ ಟೀಕೆ ಎದುರಿಸಿದ ಸಂಘ ಇದೀಗ ಕಾರ್ಯನಿರತ ಪತ್ರಕರ್ತರ ಸಂಘ ಎಂಬುದನ್ನು ಸಾಬೀತುಪಡಿಸಿದೆ. ಸಂಘಕ್ಕೆ ಹೊಸರೂಪ ನೀಡಿ ಇದಕ್ಕೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ರೂಪ ನೀಡಲು ಉದ್ಧೇಶಿಸಲಾಗಿದೆ ಎಂದರು.
ಈ ಬಾರಿಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ತಗಡೂರ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಇವತ್ತು ನಮ್ಮ ಮುಂದೆ ಅನೇಕ ಸವಾಲುಗಳಿವೆ. ಸಾಮಾಜಿಕ ಜಾಲತಾಣಗಳು ಬಂದ ನಂತರ ಬಹಳ ಬದಲಾವಣೆಯಾಗಿದೆ. ನಿಮ್ಮ ಸುದ್ದಿಗಳು ಸರಕಾರ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಅನಿಲ ಬೆನಕೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಸಂಘದ ರಾಜ್ಯಮಟ್ಟದ ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.