ಬೆಂಗಳೂರು: ಪಕ್ಷದ ವೇದಿಕೆಯಲ್ಲಿ ಚರ್ಚಿಸದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುತ್ತಿರುವ ಕೆಲ ನಿರ್ಧಾರಗಳ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರುಗಳಿಂದ ಆಕ್ಷೇಪ ಎದುರಾಗಿದ್ದು, ಮಡಿಕೇರಿ ಚಲೋ ಪಾದಯಾತ್ರೆ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮುಂಬೈನ ಪ್ರತಿಷ್ಠಿತ ಹೋಟೆಲ್ ಗೆ ಬಾಂಬ್ ಬೆದರಿಕೆ ; ನಿಷ್ಕ್ರಿಯಗೊಳಿಸಲು 5 ಕೋಟಿಗೆ ಬೇಡಿಕೆ
ಚುನಾವಣಾ ವರ್ಷದಲ್ಲಿ ಸಿದ್ದರಾಮಯ್ಯ ಅವರು ಪರ್ಯಾಯ ವೇದಿಕೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿರುವಂತೆ ಇದರಿಂದ ಭಾಸವಾಗುತ್ತಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ನಾಮಕೇವಾಸ್ತೆ ಎಂಬ ಭಾವನೆ ಮೂಡುತ್ತಿದೆ. ಏಕವ್ಯಕ್ತಿ ನಿರ್ಧಾರಗಳು ಪಕ್ಷದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬಳಿಕ ವಿವಾದ ಸೃಷ್ಟಿಯಾಗಿದೆ. ಮೊಟ್ಟೆ ಎಸೆತದ ಬಗ್ಗೆ ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಿರಿಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಬಳಿಕವೂ ಸಿದ್ದರಾಮಯ್ಯ ಬಣ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಮಡಿಕೇರಿ ಚಲೋ ಪಾದಯಾತ್ರೆಗೆ ಕರೆ ನೀಡಿದೆ. ಈ ಬಗೆಯ ಪಾದಯಾತ್ರೆ ನಡೆಸುವಾಗ ಸಾಕಷ್ಟು ದಿನ ಮುಂಚಿತವಾಗಿ ಸಿದ್ಧತೆ ನಡೆಸಬೇಕಾಗುತ್ತದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸಿದ್ದರಾಮಯ್ಯ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದರಿಂದ ಗೊಂದಲ ನಿರ್ಮಾಣವಾಗುತ್ತದೆ ಎಂದು ಹಿರಿಯ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆನ್ನಲಾಗಿದೆ.
ಮಡಿಕೇರಿ ಚಲೋ ಪಾದಯಾತ್ರೆ ಹಾಗೂ ಸಿದ್ದರಾಮಯ್ಯ ಹೇಳಿಕೆಗಳು ಕಾಂಗ್ರೆಸ್ ವಿರುದ್ಧ ಬಹುಸಂಖ್ಯಾತರು ಒಟ್ಟಾಗುವಂತೆ ಮಾಡುತ್ತಿದೆ. ಇದರಿಂದ ಬಿಜೆಪಿಗೆ ಅನುಕೂಲವಾಗಬಹುದು. ಜತೆಗೆ ಎಸ್ ಡಿಪಿಐ ನಂಥ ಸಂಘಟನೆಗಳು ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಳಿಸುವುದಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ. ಚುನಾವಣಾ ವರ್ಷದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವ ಬದಲು ಸಿದ್ದ ರಾಮಯ್ಯ ಬಣ ವಿವಾದವನ್ನೇ ಮೈ ಮೇಲೆ ಎಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ತಟಸ್ಥ ಬಣ ಈಗ ಕಳವಳ ವ್ಯಕ್ತಪಡಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.