Advertisement

ಅಂಬೇಡ್ಕರ್‌ ಭಾವಚಿತ್ರ ಬಳಕೆಗೆ ಆಕ್ಷೇಪ

01:39 PM Sep 02, 2019 | Suhan S |

ಚಳ್ಳಕೆರೆ: ನಗರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳದ ಸಂಯುಕ್ತಾಶ್ರಯದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಅಳವಡಿಸುವ ಬ್ಯಾನರ್‌ಗಳಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ರವರ ಭಾವಚಿತ್ರವನ್ನು ಪ್ರಕಟಿಸಿರುವುದು ಸರಿಯಲ್ಲ ಎಂದು ಚಿಂತಕ ಸಿ.ಕೆ. ಮಹೇಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಸಾಮಾಜಿಕ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ್‌ ಸೇನೆ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಡಾ| ಬಿ.ಆರ್‌. ಅಂಬೇಡ್ಕರ್‌ರವರು ಹಿಂದೂ ಧರ್ಮದ ಬಗ್ಗೆ ಹೆಚ್ಚು ವಿಶ್ವಾಸವನ್ನು ಹೊಂದಿರಲಿಲ್ಲ. ಹಿಂದೂ ಧರ್ಮದಲ್ಲಿನ ಅನೇಕ ಸಂಪ್ರದಾಯ, ಆಚರಣೆಗಳಿಗೆ ರೋಸಿ ಹೋಗಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ತಾವು ಹಿಂದೂ ಧರ್ಮವನ್ನು ಎಂದೂ ಪಾಲಿಸುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದ್ದರು. ಅವರ ತತ್ವ ಸಿದ್ಧಾಂತವನ್ನು ನಾಡಿನ ಲಕ್ಷಾಂತರ ದಲಿತರು ಇಂದಿಗೂ ಪಾಲನೆ ಮಾಡುತ್ತಿದ್ದೇವೆ. ಅನಗತ್ಯವಾಗಿ ಸಂಘಟಕರು ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ತಾಲೂಕು ಅಂಬೇಡ್ಕರ್‌ ಸೇನೆ ಅಧ್ಯಕ್ಷ ಎನ್‌. ಹೊನ್ನೂರಸ್ವಾಮಿ ನೇತೃತ್ವದಲ್ಲಿ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಉಮೇಶ್‌ಚಂದ್ರ ಬ್ಯಾನರ್ಜಿ, ಮೈತ್ರಿ ದ್ಯಾಮಣ್ಣ, ವೀರಣ್ಣ, ಅಂಬೇಡ್ಕರ್‌ ಸೇನೆಯ ಜಿಲ್ಲಾ ಉಪಾಧ್ಯಕ್ಷ ಎಸ್‌. ಸುರೇಶ್‌, ಪೆನ್ನೇಶ್‌, ಹೇಮಂತರಾಜ್‌, ಕೆ.ಪಿ. ಹನುಮಂತರಾಯ, ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next