ಪಟನಾ: ದಲಿತ ಸಮುದಾಯದ ಸರ್ಕಾರಿ ಅಧಿಕಾರಿ ಜಿ.ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ, ರಾಜಕಾರಣಿಯಾಗಿ ಬದಲಾಗಿರುವ ಗ್ಯಾಂಗ್‌ಸ್ಟರ್ ಆನಂದ ಮೋಹನ್‌ರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಬಿಹಾರ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಈ ವಿಚಾರವೀಗ ತೀವ್ರ ಚರ್ಚೆಗೂ ಗ್ರಾಸವಾಗಿದೆ.
ಬಿಹಾರ ಸರ್ಕಾರವು ಕಾನೂನು ತಿದ್ದುಪಡಿ ಮೂಲಕ 14 ರಿಂದ 20 ವರ್ಷಜೈಲು ಶಿಕ್ಷೆ ಅನುಭವಿಸಿರುವ ಕೆಲವರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಅದರಂತೆ 27 ಮಂದಿಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಈ ಪೈಕಿ ಮೋಹನ್ ಕೂಡ ಸೇರಿದ್ದಾರೆ.
ಈಗಾಗಲೇ ಪರೋಲ್ ಮೇಲೆ ಮಗನ ನಿಶ್ಚಿತಾರ್ಥಕ್ಕೆಂದು ಹೊರಗಿರುವ ಮೋಹನ್, ಇನ್ನೇನು ಬಿಡುಗಡೆಯಾಗಲಿದ್ದಾರೆ ಎನ್ನುವ ಪ್ರಕಟಣೆ ಹೊರಬೀಳುತ್ತಿದ್ದಂತೆ ಬಿಹಾರ ಸರ್ಕಾರದ ವಿರುದ್ಧ ಬಿಎಸ್‌ಪಿ, ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಕಿಡಿ ಕಾರಿವೆ.
ಬಿಜೆಪಿಯ ಟೀಕೆಗೆ ಮೋಹನ್ ಪ್ರತಿಕ್ರಿಯಿಸಿ “ನಾನೇನು ಸುಮ್ಮನೆ ಹೊರಬರುತ್ತಿಲ್ಲ.15 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ಹೇಳಲು ಏನು ಬೇಕಾದರೂ ಹೇಳಬಹುದು, ಗುಜರಾತ್ ಪ್ರಕರಣವೊಂದರಲ್ಲಿ ಬಿಡುಗಡೆಯಾದ ಅಪರಾಧಿಗಳನ್ನ ಹಾರ ಹಾಕಿ ಸ್ವಾಗತಿಸಿದ್ದಕ್ಕೂ, ನಿತೀಶ್ ಹಾಗೂ ಆರ್‌ಜೆಡಿ ಪಕ್ಷ ಒತ್ತಡವೇ ಕಾರಣ ಎಂದು ಬೇಕಾದರೂ ಹೇಳಬಹುದು ‘ ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಲ್ಕಿಸ್‌ಬಾನು ಪ್ರಕರಣದ ಬಗ್ಗೆ ಹೇಳುತ್ತಿದ್ದೀರೇ ? ಎಂಬ ಮಾಧ್ಯಮಗಳ ಪ್ರಶ್ನೆಗೆ ಹೌದು, ಅದೇ ಪ್ರಕರಣ.. ಅಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಎಂದು ಮೋಹನ್ ಹೇಳಿದ್ದಾರೆ.