ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಶಿಫಾರಸು ಜಾರಿಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಪ್ರಕಟಿಸಿರುವ ಕರಡು ಅಧಿಸೂಚನೆಯನ್ನು ಸದ್ಯದ ರೂಪದಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟವಾಗಿ ತಿಳಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಗಳ ಸಚಿವ ಪ್ರಕಾಶ್ ಜಾಬ್ಡೇಕರ್ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ. ಜತೆಗೆ ಈ ವಿಷಯವಾಗಿ ಕೇಂದ್ರ ಸರಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ರಾಜ್ಯದೊಂದಿಗೂ ಚರ್ಚೆ ನಡೆಸುವುದು ಸೂಕ್ತ ಎಂಬ ಮನವಿಯನ್ನೂ ಮಾಡಿದ್ದಾರೆ.
ಕಸ್ತೂರಿ ರಂಗನ್ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವುದರಿಂದ ಆರ್ಥಿಕ ಚಟುವಟಿಕೆ ಸಹಿತ ಜನರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಈ ಹಿಂದೆ ಹೊರಡಿಸಿದ್ದ ಕರಡು ಅಧಿಸೂಚನೆಗಳಿಗೂ ರಾಜ್ಯ ಸರಕಾರ ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಪಶ್ಚಿಮ ಘಟ್ಟ ಪ್ರದೇಶದ ಜನರ ಆತಂಕವನ್ನು ಸಹ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಕರಡು ಅಧಿಸೂಚನೆ ಅವಧಿ ಮುಕ್ತಾಯವಾಗಿದ್ದು, ಅಂತಿಮ ಅಧಿಸೂಚನೆ ಇನ್ನೂ ಹೊರಡಿಸಿಲ್ಲ ಎಂದು ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ರಾಜ್ಯದಲ್ಲಿ ಈ ಶಿಫಾರಸುಗಳನ್ನು ಅನುಷ್ಠಾನ ಗೊಳಿಸುವುದರಿಂದ ಆರ್ಥಿಕ ನಷ್ಟ ಉಂಟಾಗಲಿದ್ದು, ಇದನ್ನು ಭರಿಸಲು ಪ್ರೋತ್ಸಾಹ ಧನ ನೀಡುವಂತೆಯೂ ವರದಿಯಲ್ಲಿ ಸಲಹೆ ನೀಡಲಾಗಿದೆ. ಆದರೆ ಕರಡು ಅಧಿಸೂಚನೆಯಲ್ಲಿ ಪ್ರೋತ್ಸಾಹ ಧನದ ಪ್ರಸ್ತಾವವೇ ಇಲ್ಲ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆಯನ್ನು ವಿರೋಧಿಸಲಾಗುತ್ತಿದೆ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ.
ವ್ಯತಿರಿಕ್ತ ಪರಿಣಾಮ
ವರದಿ ಶಿಫಾರಸಿನಲ್ಲಿ ಸೂಚಿಸಿರುವ ಕರ್ನಾಟಕ ವ್ಯಾಪ್ತಿಯ 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ 16,632 ಚ.ಕಿ.ಮೀ. ಪ್ರದೇಶವನ್ನು ರಕ್ಷಿತ ಅರಣ್ಯ, ಅಧಿಸೂಚಿತ ಅರಣ್ಯ ಹಾಗೂ ಪರಿಸರ ಸೂಕ್ಷ್ಮ ವಲಯದಡಿ ರಕ್ಷಿಸಿಕೊಂಡು ಬರಲಾಗಿದೆ. ಹೀಗಿರುವಾಗ ಮತ್ತಷ್ಟು ನಿರ್ಬಂಧ ವಿಧಿಸುವುದರಿಂದ ಸಂರಕ್ಷಣೆಯ ಮೂಲ ಉದ್ದೇಶವನ್ನೇ ನಿರಾಕರಿಸಿದಂತಾಗುತ್ತದೆ. ಇದರಿಂದ ವ್ಯತಿರಿಕ್ತ ಪರಿಣಾಮವೂ ಉಂಟಾಗಬಹುದು ಎಂಬ ಆತಂಕವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.