ಗದಗ: ಜಿಲ್ಲೆಯ ನರಗುಂದ ಪಟ್ಟಣದ ಬಸವೇಶ್ವರ ಸಮುದಾಯ ಭವನವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವ ಜಿಲ್ಲಾಡಳಿತದ ನಿರ್ಧಾರವನ್ನು ಆಕ್ಷೇಪಿಸಿ ಸ್ಥಳೀಯರು ಸೋಮವಾರ ರಾತ್ರಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ಸಮುದಾಯ ಭವನದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಆರೋಗ್ಯದ ದೃಷ್ಟಿಯಿಂದ ಪಟ್ಟಣದ ಹೊರ ವಲಯ ಅಥವಾ ಊರಿಂದ ದೂರವಿರುವ ಕಟ್ಟಡದಲ್ಲಿ ಸೋಂಕಿತರ ಕ್ವಾರಂಟೈನ್ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿಪಿಐ ಡಿ.ಬಿ. ಪಾಟೀಲ್, ಸ್ಥಳೀಯರಿಂದ ಅಹವಾಲು ಆಲಿಸಿದರು. ಅಲ್ಲದೇ ಸದ್ಯಕ್ಕೆ ಇಲ್ಲಿಗೆ ಕೋವಿಡ್ ಸೋಂಕಿತರನ್ನು ಕರೆತರಲಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಅಂತಹ ಪರಿಸ್ಥಿತಿ ಎದುರಾದರೆ ಮುಂಜಾಗ್ರತಾ ಕ್ರಮವಾಗಿ ಬಸವೇಶ್ವರ ಸಮುದಾಯ ಭನವವನ್ನು ಗುರುತಿಸಲಾಗಿದೆ. ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಎಷ್ಟೇ ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಮಂಗಳವಾರ ಬೆಳಗ್ಗೆ ಈ ಕುರಿತು ಚರ್ಚೆ ನಡೆಸಲಾಗುವುದು. ಅಲ್ಲಿವರೆಗೆ ಯಾರೊಬ್ಬರನ್ನೂ ಸಮುದಾಯ ಭವನದಲ್ಲಿ ಇರಿಸಲಾಗದು ಎಂದು ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಅದರಂತೆ ಮಂಗಳವಾರ ಬೆಳಗ್ಗೆ ಡಿವೈಎಸ್‌ಪಿ ಶಿವಾನಂದ ಕಟಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಸ್ಥಳೀಯ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅಧಿ ಕಾರಿಗಳು ಸದ್ಯಕ್ಕೆ ಬಸವೇಶ್ವರ ಸಮುದಾಯ ಭವನದಲ್ಲಿ ಕ್ವಾರಂಟೈನ್ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿಲ್ಲ. ಈಗಾಗಲೇ ತಾಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಬೆಳ್ಳೇರಿ ಗ್ರಾಮದ ಡಿಪ್ಲೋಮಾ ಕಾಲೇಜುಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಿದೆ. ಈ ಪೈಕಿ ಬೆನಕನಕೊಪ್ಪ ಮೊರಾರ್ಜಿ ಶಾಲೆ ಕೇವಲ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಸವೇಶ್ವರ ಸಮುದಾಯ ಭವನವನ್ನು ತಾಲೂಕು ಆಡಳಿತ ಗುರುತಿಸಿದೆ ಎಂದು ಸ್ಥಳೀಯರ ಮನವೊಲಿಸಲಾಯಿತು ಎಂದು ಸಿಪಿಐ ಡಿ.ಬಿ. ಪಾಟೀಲ ಮಾಹಿತಿ ನೀಡಿದರು.