ಸಿನಿಮಾ ಟೈಟಲ್‌ನಲ್ಲಿ “ಕಥೆ’ಯನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬರುತ್ತಿವೆ. “ಒಂದು ಮೊಟ್ಟೆಯ ಕಥೆ’, “ಒಂದು ಗಂಟೆಯ ಕಥೆ’, “ಒಂದು ಶಿಕಾರಿಯ ಕಥೆ’ ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ಓಬಿರಾಯನ ಕಥೆ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿದೆ. ರಾಜೇಶ್ ನಟರಂಗ ಈ ಚಿತ್ರದ ಹೀರೋ. ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ರಾಜೇಶ್ ಈಗ “ಓಬಿರಾಯನ ಕಥೆ’ ಮೂಲಕ ಹೀರೋ ಆಗುತ್ತಿದ್ದಾರೆ. ಹಾಗಂತ ಹೊಡೆದಾಟ, ಬಡಿದಾಟದ ಹೀರೋ ಅಲ್ಲ. ಒಂದು ಕಂಟೆಂಟ್ ಬೇಸ್ಡ್ ಸಿನಿಮಾವಾದ್ದರಿಂದ ಕಥೆಯನ್ನು ಮುನ್ನಡೆಸುವ ಹೀರೋ ಎನ್ನಬಹುದು.
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಅತಿಥಿಯಾಗಿ ಬಂದರು ನಟ ಯಶ್. ಟೈಟಲ್ ಲಾಂಚ್ ಜೊತೆಗೆ ಫ್ಲ್ಯಾಶ್‌ಬ್ಯಾಕ್‌ಗೂ ಜಾರಿದರು. ಅದಕ್ಕೆ ಕಾರಣ ರಾಜೇಶ್ ನಟರಂಗ ಅವರ ಜೊತೆಗಿನ ಆತ್ಮೀಯ ಸಂಬಂಧ. “ನಮ್ಮ ಆರಂಭದ ದಿನಗಳಲ್ಲಿ ರಾಜೇಶ್ ನಟರಂಗ, ಅಚ್ಯುತ್, ಅನಂತ್ ನಾಗ್ ಅವರಿಂದ ಸಾಕಷ್ಟು ಕಲಿತಿದ್ದೇವೆ. ಕಿರುತೆರೆಯಲ್ಲಿರುವಾಗ ಹಲವು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ತುಂಬಾ ಪ್ರತಿಭೆ ಇರುವ ವ್ಯಕ್ತಿ. ಅವರಲ್ಲಿ ನಿರ್ದೇಶನ ಮಾಡುವ ಸಾಮರ್ಥ್ಯವೂ ಇದೆ’ ಎನ್ನುತ್ತಾ ಹೊಸ ಸಿನಿಮಾಕ್ಕೆ ಶುಭ ಕೋರಿದರು ಯಶ್.
ಚಿತ್ರದಲ್ಲಿ ರಾಜೇಶ್ ನಟರಂಗ ಸ್ಟಿಲ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪೋಸ್ಟರ್‌ನಲ್ಲಿದ್ದಂತೆ “ಸಪ್ತಪದಿ ಸ್ಟುಡಿಯೋಸ್’- ಮದುವೆ, ಮುಂಜಿ, ಸೀಮಂತ, ನಾಮಕರಣ, ಹುಟ್ಟಿದ ಹಬ್ಬ ಛಾಯಾಗ್ರಹಣ ಎಂದಿದೆ. ಇನ್ನು ಆ ಪಟ್ಟಿಯಲ್ಲಿ “ಸಾವು’ ಎಂದು ಬರೆದು ಅದನ್ನು ಒಡೆದು ಹಾಕಲಾಗಿದೆ. “ಕಥೆ ತುಂಬಾ ಮಜಾವಾಗಿದೆ. ನಾನಿಲ್ಲಿ ಸ್ಟಿಲ್ ಫೋಟೋಗ್ರಾಫರ್ ಆಗಿ ನಟಿಸುತ್ತಿದ್ದೇನೆ’ ಎಂದ ಅವರು, “ಸ್ಮಾಟ್ ಆಗಿರುವ ನೀವ್ಯಾಕೆ ಇಷ್ಟು ದಿನ ಹೀರೋ ಆಗಲಿಲ್ಲ’ ಎಂಬ ನಿರೂಪಕಿಯ ಪ್ರಶ್ನೆಗೆ ಅಷ್ಟೇ ಸ್ಮಾರ್ಟ್ ಆಗಿ ಉತ್ತರಿಸಿದರು ರಾಜೇಶ್. “ಹೀರೋ ಆಗಲು ಸ್ಮಾರ್ಟ್ ಒಂದೇ ಮಾನದಂಡವಲ್ಲ. ಹೀರೋಗೆ ಅದರದ್ದೇ ಆದ ಅಟಿಟ್ಯೂಡ್ ಬೇಕು, ಸುಮಾರು ಕಲೆಗಳು ಬೇಕು. ಹಾಗಾಗಿ, ನನಗೆ “ಆ ತರಹದ’ ಹೀರೋ ಆಗಲು ಇಷ್ಟವಿರಲಿಲ್ಲ. ಅದು ಬಿಟ್ಟರೆ ನಾನು ಮಾಡುವ ಪ್ರತಿಯೊಂದು ಪಾತ್ರಕ್ಕೂ ನಾನೇ ಹೀರೋ. “ಓಬಿರಾಯನ ಕಥೆ’ ಒಂದು ಕಂಟೆಂಟ್ ಬೇಸ್ಡ್ ಸಿನಿಮಾ. ಈ ಸಿನಿಮಾದಲ್ಲಿ ಕಂಟೆಂಟ್ ಹೀರೋ. ಹಾಗಾಗಿ, ನನಗೆ ಹೀರೋ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ’ ಎಂದರು.
ಈ ಚಿತ್ರವನ್ನು ಶ್ಯಾಮ್ ಅನ್ನೂರು ನಿರ್ಮಿಸುತ್ತಿದ್ದಾರೆ. ವಿನಯ್ ಶಾಸ್ತ್ರಿ ಈ ಸಿನಿಮಾದ ನಿರ್ದೇಶಕರು. ಇಡೀ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡಬಾರದೆಂಬ ನಿರ್ಧಾರದೊಂದಿಗೆ ವೇದಿಕೆ ಹತ್ತಿದಂತಿತ್ತು. ಅದೇ ಕಾರಣದಿಂದ ನಿರ್ದೇಶಕ ವಿನಯ್ ಕೂಡಾ, ಚಿತ್ರ ಆರಂಭವಾದ, ಕಲಾವಿದರನ್ನು ಭೇಟಿಯಾದ ಸನ್ನಿವೇಶಗಳನ್ನಷ್ಟೇ ವಿವರಿಸಿದರು. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈ ಚಿತ್ರಕ್ಕೆ ಸಂಗೀತ ನೀಡುವ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರಂತೆ. ಚೈತ್ರಾ ಆಚಾರ್ ಚಿತ್ರದ ನಾಯಕಿ.