Advertisement

ಹೋಳಿಗೆಯೆಂಬ ನೆನಪಿನ ಜೋಳಿಗೆ; ಒಬ್ಬಟ್ಟಿನಲ್ಲಿ ಒಲವಿದೆ!

01:27 PM Mar 17, 2018 | |

ಯುಗಾದಿ ಪ್ರಯುಕ್ತ ಹೆಚ್ಚು ಕಮ್ಮಿ ಕರ್ನಾಟಕದ ಎಲ್ಲಾ ಮನೆಗಳಲ್ಲೂ ಒಬ್ಬಟ್ಟು ಮಾಡೇ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಪುರನಪೊಳಿ, ಆಂಧ್ರದಲ್ಲಿ ಬೊಬ್ಬಟ್ಲು ಅಂತ ಹೆಸರು ಅದಕ್ಕೆ. ಹೆಸರು ಬೇರೆ ಬೇರೆ ಆದರೇನಂತೆ? ರುಚಿ ಒಂದೇ, ಮಾಡುವ ವಿಧಾನವೂ ಒಂದೇ. ಆದರೆ, ರುಚಿ ಅನ್ನೋದು ಕೈಯಿಂದ ಕೈಗೆ ಬೇರೆ ಆಗುತ್ತದೆ. ಅದಕ್ಕೇ “ಕೈ ಅಡುಗೆ’ ಅನ್ನೋದು. ಒಬ್ಬಟ್ಟಿನ ಜೊತೆ ಸೇರಿಕೊಂಡಿರುವ ಅಂಥ ಕೈ ರುಚಿಯ ನೈಜ ಕಥೆ ಇಲ್ಲಿದೆ…

Advertisement

ನನ್ನ ಮದುವೆಯಾದ ನಂತರ, “ಒಬ್ಬಟ್ಟು ಮಾಡಲು ಬರುತ್ತೆ ತಾನೇ?’ ಎಂದು ಅಕ್ಕಮ್ಮ ಕೇಳಿದಾಗ, ನಾನು “ಓಯೆಸ್‌, ಬರದೇ ಏನು?’ ಎಂದುಬಿಟ್ಟಿದ್ದೆ. ಅದನ್ನು ಕೇಳಿ ಅವರಿಗೂ ಖುಷಿಯಾಯ್ತು. ಪರವಾಗಿಲ್ಲ, ಒಬ್ಬಟ್ಟು ಮಾಡಲು ಬರುವ ಹೆಣ್ಣು ಎಲ್ಲ ಕೆಲಸಕ್ಕೂ ಸೈ ಎಂದು ಅವರ ಕುಟುಂಬದವರಿಗೆ ಹೇಳಿದರಂತೆ. ಮುಂದೆ ಯುಗಾದಿ ಬಂತು. ಮನೆಯಲ್ಲಿ ಎಲ್ಲರೂ ಕೆಲಸ ಹಂಚಿಕೊಳ್ಳುವುದು ಸಂಪ್ರದಾಯ. ಅತ್ತೆಯವರು ಅಡುಗೆ-ತಿಂಡಿ, ಉಪಚಾರಗಳ ಜವಾಬ್ದಾರಿ ಹೊತ್ತುಕೊಂಡರು. ಮಾವನವರು ಹಣಕಾಸಿನ ವಿಲೇವಾರಿ ನೋಡುತ್ತಿರುವುದರಿಂದ ಯಜಮಾನರಿಗೆ ತರಕಾರಿ, ಹಣ್ಣು ಹಂಪಲು, ದಿನಸಿ ತರುವ ಕೆಲಸ ಹೇಳಿದರು.

ಮಾವಿನಸೊಪ್ಪು, ಬೇವಿನಸೊಪ್ಪು ತರುವ ಕೆಲಸ ನಮ್ಮ ಭಾವನವರದ್ದಾಯ್ತು. ನಂತರ ಒಬ್ಬಟ್ಟನ್ನು ಅಂಗಡಿಯಿಂದ ತರುವುದೆಂದು ತೀರ್ಮಾನಿಸಲಾಯ್ತು. ಆದರೆ, ಅಕ್ಕಮ್ಮ ಅದಕ್ಕೆ ಒಪ್ಪಲೇ ಇಲ್ಲ. ನಾನು ಹೇಳಿದ್ದೆನಲ್ಲ, ನನಗೆ ಒಬ್ಬಟ್ಟು ಮಾಡಲು ಬರುತ್ತದೆ ಎಂದು. ಹಾಗಾಗಿ ಒಬ್ಬಟ್ಟು ಮಾಡುವ ಕೆಲಸ ನನ್ನದಾಯ್ತು.

ನನಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದ ಹಾಗಾಯ್ತು. ನಿದ್ದೆ ಬರಲೊಲ್ಲದು. ಕೊನೆಗೆ ಯೂ ಟ್ಯೂಬ್‌ನಲ್ಲಿ ಒಬ್ಬಟ್ಟು ಮಾಡುವ ವಿಧಾನವನ್ನು ನೋಡಿ ತಿಳಿದುಕೊಂಡೆ. ಒಂದು ಬಿಳಿ ಹಾಳೆ ತಗೊಂಡು ಅದರಲ್ಲಿ ಒಬ್ಬಟ್ಟು ಮಾಡುವ ಪ್ರತಿಯೊಂದು ಹೆಜ್ಜೆಯನ್ನೂ ಬರೆದುಕೊಂಡೆ. ಅದನ್ನು ನಾಲ್ಕೈದು ಬಾರಿ ಓದಿದೆ. ಶಾಲೆಯಲ್ಲಿದ್ದಾಗ ಮಗ್ಗಿಯನ್ನೂ ಹೀಗೆಲ್ಲಾ ಬಾಯಿಪಾಠ ಮಾಡಿರಲಿಲ್ಲ. ಆದರೂ ಸೋಲೊಪ್ಪಿಕೊಳ್ಳದೆ, ಒಬ್ಬಟ್ಟೇನು ಮಹಾ ಎಂದುಕೊಳ್ಳುತ್ತಾ ಇದನ್ನು ಮಾಡೇ ಮಾಡುತ್ತೇನೆ ಎಂದು ಶಪಥ ಮಾಡಿಕೊಂಡೆ.

ಏನೇ ಆದರೂ, ನಾವು ಅಡುಗೆ ಮನೆಯಲ್ಲಿ ಸ್ವತಃ ತಯಾರಿ ಮಾಡುವುದಕ್ಕೂ, ಈ ಟಿವಿ, ಯೂಟ್ಯೂಬ್‌ನಲ್ಲಿ ತೋರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೇ ಹೇಳ್ಳೋದು “ಪ್ರಾಕ್ಟೀಸ್‌ ಮೇಕ್ಸ್‌ ಮ್ಯಾನ್‌ ಪಫೆìಕ್ಟ್’ ಅಂತ. ನಾವು ಸ್ವತಃ ಅಭ್ಯಾಸ ಮಾಡಿದರೆ ಮಾತ್ರ ಯಾವುದಾದರೂ ಕರಗತವಾಗುವುದು.

Advertisement

ಹೀಗೆ ನಾನು ಒಬ್ಬಟ್ಟು ಮಾಡುವ ವಿಧಾನವನ್ನು ಕಲಿತುಕೊಂಡೆ. ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನಾನೇ ಅಂಗಡಿಗೆ ಹೋಗಿ ತೆಗೆದುಕೊಂಡು ಬಂದೆ. ನನ್ನ ಉತ್ಸಾಹ ಹೇಳತೀರದು. ಬೆಳಗಿನ ಜಾವವೇ ಸ್ನಾನ ಮಾಡಿ, ಅಡುಗೆ ಮನೆಗೆ ಧಾವಿಸುವ ಆತುರ ನನಗೆ. ದೇವರ ಪೂಜೆ ಮಾಡಿ, ಬೇವು ಬೆಲ್ಲ ತಿಂದು, ಒಬ್ಬಟ್ಟು ಮಾಡಲು ಕೂತೆ. ಹಿಟ್ಟನ್ನೇನೋ ಕಲೆಸಿದೆ. ಆದರೆ, ಅದನ್ನು ಅಂದುಕೊಂಡಂತೆ ಲಟ್ಟಿಸಿಕೊಳ್ಳಲು ಆಗಲೇ ಇಲ್ಲ. ಸದ್ಯ ನನ್ನ ಪಾಡನ್ನು ಯಾರೂ ನೋಡಲಿಲ್ಲ. ಹೀಗಾಗಿ ಕೆಡವಿದ ಹಿಟ್ಟನ್ನು ಬೇರೆ ಇಟ್ಟು, ಒಬ್ಬಟ್ಟಿನ ಮಣೆಯಲ್ಲಿ ಹಿಟ್ಟು ಹಾಕಿ ಲಟ್ಟಿಸಿದೆ.

ಮೊದಲಿಗೆ ಕಷ್ಟವಾದರೂ ನಂತರ ಒಂದೆರಡನ್ನು ಕಾಯಿಸಿದ ನಂತರ ಒಬ್ಬಟ್ಟು ಚೆನ್ನಾಗಿಯೇ ಬಂತು. ಮನೆಯೆಲ್ಲಾ ಘಮಘಮ ವಾಸನೆ. ಅಕ್ಕಮ್ಮ ಮೂಲೆಯಿಂದ ನನ್ನನ್ನು ಗಮನಿಸುತ್ತಿದ್ದುದನ್ನು ನಾನು ಓರೆ ನೋಟದಿಂದ ನೋಡಿ ಸುಮ್ಮನಾದೆ. ಊಟಕ್ಕೆ ಕೂತಾಗ ಎಲ್ಲರೂ “ಪರವಾಗಿಲ್ಲ, ಹುಡುಗಿ ಒಬ್ಬಟ್ಟು ಚೆನ್ನಾಗಿ ಮಾಡಿದಾಳೆ’ ಎಂದರು.

ಸಾಯಂಕಾಲ ಮಾವನವರ ತಂಗಿ ಮಕ್ಕಳು ಬಂದಾಗ ಎಲ್ಲರಿಗೂ ನಾನೇ ತಟ್ಟೆ ಇಟ್ಟು ಒಬ್ಬಟ್ಟು, ಹಾಲು, ತುಪ್ಪ ಬಡಿಸಿದೆ. ನನ್ನ ಅಣ್ಣನೂ ಬಂದಿದ್ದ ಅವನಿಗೂ ಕೊಟ್ಟಿದ್ದೆ. ಅವನು ಅದನ್ನು ತಿಂದು ಒಂಥರಾ ಮಾಡಿಕೊಂಡು ನನ್ನ ಮುಖ ನೋಡಿದ. ನನಗೆ ಪೆಚ್ಚೆನಿಸಿತು. ಆಮೇಲೆ ಗೊತ್ತಾಗಿದ್ದೇನೆಂದರೆ, ನಾನು ಮೊದಲು ಮಾಡಿದ ಎರಡು ಒಬ್ಬಟ್ಟಿಗೆ ಬೆಲ್ಲ ಹಾಕಿರಲೇ ಇಲ್ಲ. ಅದೇ ಒಬ್ಬಟ್ಟು ಅಣ್ಣನ ತಟ್ಟೆಗೆ ಬಿದ್ದಿತ್ತು. ಪ್ರತಿ ಯುಗಾದಿಗೂ ಇದು ಮರೆಯಲಾಗದ ನೆನಪಾಗಿ ಉಳಿದುಕೊಂಡಿದೆ. 

 ಹೀರಾ ರಮಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next