ಕುಮಟಾ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಮಹಿಳೆಯರ ಮೇಲೆ ನಡೆಯುವ ಕೃತ್ಯಗಳಿಗೆ ಕಡಿವಾಣ ಹಾಕಲು ಭಟ್ಕಳ ಉಪವಿಭಾಗದಲ್ಲಿ 16 ಪೊಲೀಸರನ್ನೊಳಗೊಂಡ ಓಬವ್ವ ಪಡೆಯನ್ನು ಇಲಾಖೆ ಜಾರಿಗೆ ತಂದಿದೆ ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಒಬ್ಬೊಬ್ಬರಾಗಿ ಮನೆಗೆ ಹೋಗುತ್ತಾರೆ. ಅವರಿಗೆ ಯಾವುದೇ ಸುರಕ್ಷತೆ ಇರುವುದಿಲ್ಲ. ಅಂಥ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಈ ತಂಡವನ್ನು ರಚಿಸಲಾಗಿದೆ ಎಂದ ಅವರು, 1 ಮಹಿಳಾ ಪಿ.ಎಸ್.ಐ, 1 ಎ.ಎಸ್.ಐ ಹಾಗೂ 14 ಸಿಬ್ಬಂದಿಗಳು ಸೇರಿದಂತೆ ಒಟ್ಟೂ 16 ಸಿಬ್ಬಂದಿ ಈ ತಂಡದಲ್ಲಿ ಇರಲಿದ್ದಾರೆ ಎಂದರು.
ಬಸ್ ನಿಲ್ದಾಣ, ಶಾಲಾ-ಕಾಲೇಜುಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ಮೇಲೆ ಕಣ್ಣಿಡಲಾಗುತ್ತದೆ. ಓಬವ್ವ ತಂಡದ ಸಿಬ್ಬಂದಿಗೆ ಸರಿಯಾದ ಕಾನೂನು ತಿಳಿವಳಿಕೆ ಬಂದ ನಂತರ ಎಲ್ಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ವಿವಿಧ ಕಾರ್ಯಾಗಾರದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಲೈಂಗಿಕ ದೌರ್ಜನ್ಯ ಹಾಗೂ ಫೂಕೊÕà ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದ ಅವರು, ಸಾಮಾಜಿಕ ಜಾಲತಾಣ ಹಾಗೂ ಸೈಬರ್ ಕ್ರೈಂ ಮೂಲಕ ನಡೆಯುವ ದೌರ್ಜನ್ಯಗಳ ಮೇಲೆ ನಿಗಾ ವಹಿಸಲಾಗುತ್ತದೆ. ಸಮಾಜದಲ್ಲಿ ದುಷ್ಕೃತ್ಯಗಳು ನಡೆಯದಂತೆ ಕಠಿಣ ಕ್ರಮ ವಹಿಸಲಾಗುತ್ತದೆ ಎಂದರು.
ಹೈದ್ರಾಬಾದಿನಲ್ಲಿ ನಡೆದ ದುಷ್ಕೃತ್ಯಗಳು ಹಾಗೂ ಇನ್ನಿತರ ಅಹಿತಕರ ಘಟನೆಗಳು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯದಂತೆ ಈ ಪಡೆ ನಿಗಾ ವಹಿಸುತ್ತಾರೆ. ಮಹಿಳೆಯರಿಗೆ ತೊಂದರೆಯಾದಲ್ಲಿ ನೇರವಾಗಿ ಓಬ್ಬವ್ವ ಪಡೆಯ ಮಹಿಳಾ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ. ಠಾಣೆಗೆ ತಿಳಿಸಿದರೂ ತಕ್ಷಣಕ್ಕೆ ಪೊಲೀಸ್ ಸಿಬ್ಬಂದಿ ಸ್ಪಂದಿಸಲಿದ್ದಾರೆ ಎಂದರು.
ಓಬವ್ವ ಪಡೆಯವರಿಗೆ ರಕ್ಷಕ ಗಾಡಿಯನ್ನು ನೀಡಲಾಗಿದ್ದು, ಪೊಲೀಸ್ ಠಾಣೆಗೆ ನಿರ್ಭಯದಿಂದ ಸಾರ್ವಜನಿಕರು ಆಗಮಿಸಬಹುದಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಪ್ರತಿಯೊಂದು ಠಾಣೆಗಳಲ್ಲಿಯೂ ಸ್ವಾಗತಗಾರರನ್ನು ನೇಮಿಸಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಸದೃಢಗೊಳಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಬಗ್ಗೆಯೂ ನಿಗಾ ಇಡಲಾಗುತ್ತದೆ ಎಂದ ಅವರು, ಸಾರ್ವಜನಿಕರು ಸಹ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.
ಅಲ್ಲದೇ, ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಜೊತೆ ಸರಿಯಾಗಿ ವರ್ತಿಸದಿದ್ದಲ್ಲಿ ಅಥವಾ ಅಹಿತಕರ ಘಟನೆಗಳಿಗೆ ಆಸ್ಪದ ನೀಡಿದರೆ ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಬೇಕು ಎಂದರು.